More

    ಕಾಲಕ್ಕೆ ಅನುಸಾರವಾಗಿರಬೇಕು ಆಹಾರಸೇವನೆ

    ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂಬುದು ಕೇವಲ ಗಾದೆಮಾತಲ್ಲ. ಆಯುರ್ವೆದವು ‘ಕಾಲ’ಕ್ಕೆ ಅತ್ಯಂತ ಮಹತ್ವ ನೀಡಿದೆ. ರೋಗಿಯ ತಪಾಸಣೆಯಲ್ಲಿ, ಔಷಧ ನೀಡುವಾಗ ‘ಕಾಲ’ದ ಬಗ್ಗೆ ವೈದ್ಯ ಎಚ್ಚರದಿಂದಿರಬೇಕು ಎನ್ನುತ್ತದೆ ಆಯುರ್ವೆದ. ಆಹಾರ, ನಿದ್ರೆ, ಮುಂತಾದ ಎಲ್ಲ ಚಟುವಟಿಕೆಗಳು ಕಾಲಕ್ಕೆ ತಕ್ಕಂತೆ ಇರಬೇಕು. ಕಾಲಕ್ಕೆ ಸರಿಯಾಗಿ ಊಟ ಮಾಡುವುದು ಆರೋಗ್ಯವನ್ನು ಕೊಡುವುದರಲ್ಲಿ ಶ್ರೇಷ್ಠವಾದದ್ದು. ಇಲ್ಲಿ ಕಾಲಕ್ಕೆ ಸರಿಯಾಗಿ ಎಂದರೆ ಹಸಿವೆಯಾದ ಕಾಲದಲ್ಲಿ ಎಂಬುದು ಒಂದರ್ಥವಾದರೆ, ಋತುಮಾನಗಳಿಗೆ ಸರಿಯಾಗಿ ಎಂಬುದು ಇನ್ನೊಂದರ್ಥ.

    ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿ ಕಡಿಮೆಯಿರುತ್ತದೆ. ಹಾಗಾಗಿ ಜೇನುತುಪ್ಪ, ಶುಂಠಿ, ಕಾಳುಮೆಣಸು, ಜೀರಿಗೆ ಇಂತಹ ಜೀರ್ಣಕಾರಿ ಮತ್ತು ಉಷ್ಣ ಗುಣವಿರುವ ಆಹಾರಸೇವನೆ ಒಳ್ಳೆಯದು. ಕರಿದ ಪದಾರ್ಥಗಳು, ಐಸ್ಕ್ರೀಮ್ಂತಹ ಅತೀ ತಂಪಿನ ಪದಾರ್ಥಗಳು ಈ ಸಮಯದಲ್ಲಿ ವರ್ಜ್ಯ. ಸೇವಿಸಿದರೆ ಅಜೀರ್ಣದಂತಹ ಸಮಸ್ಯೆಗಳಿಂದ ಆಮವಾತ, ಸಂಧಿವಾತ, ಐಬಿಎಸ್​ನಂತಹ ದೊಡ್ಡ ಸಮಸ್ಯೆಗಳವರೆಗೂ ಕಾರಣವಾಗಬಹುದು. ಮಳೆಗಾಲದಲ್ಲಿ ಲಘುಭೋಜನ ಸೂಕ್ತವಾದರೆ ಚಳಿಗಾಲದಲ್ಲಿ ಹೆಚ್ಚು ಕೊಬ್ಬಿರುವ ಜೀರ್ಣಕ್ಕೆ ಅಷ್ಟು ಸುಲಭವಲ್ಲದ ಆಹಾರವೇ ಸೂಕ್ತ. ಚಳಿಗಾಲದಲ್ಲಿ ನಟ್​ಗಳು, ತುಪ್ಪ, ಬೆಣ್ಣೆ, ಹಾಲು, ಎಣ್ಣೆ ಇವನ್ನು ಹೆಚ್ಚು ತೆಗೆದುಕೊಳ್ಳುವುದು ಒಳ್ಳೆಯದು. ಆಹಾರದ ಪ್ರಮಾಣವೂ ಸ್ವಲ್ಪ ಹೆಚ್ಚಿದ್ದರೆ ಚಳಿಗಾಲದಲ್ಲಿ ತೊಂದರೆಯಾಗುವುದಿಲ್ಲ. ಏಕೆಂದರೆ ಚಳಿಗಾಲದಲ್ಲಿ ಜೀರ್ಣಶಕ್ತಿ ಹೆಚ್ಚು ಬಲಯುತವಾಗಿರುತ್ತದೆ. ಹಾಗೆಂದು ಅತಿಯಾಗಿ ಕರಿದ ಪದಾರ್ಥಗಳನ್ನು, ಬೀದಿ ಬದಿಯ ತಿಂಡಿಗಳು, ಬೇಕರಿ ವಸ್ತುಗಳನ್ನು ತಿನ್ನುವುದು ಸರಿಯಲ್ಲ.

    ಬೇಸಿಗೆಯಲ್ಲಿ ಉಷ್ಣ ಹೆಚ್ಚಿರುವುದರಿಂದ ಆ ಕಾಲದಲ್ಲಿ ಸಿಗುವ ತಾಜಾ ಹಣ್ಣುಗಳ ಪಾನಕ, ಎಳನೀರು ಸೇವನೆ ತುಂಬ ಒಳ್ಳೆಯದು. ಉಪ್ಪು, ಖಾರ ಸೇವನೆ ಮಿತಿಯಲ್ಲಿರಬೇಕು. ಸಂಕ್ರಾಂತಿಗೆ ಎಳ್ಳು-ಬೆಲ್ಲ, ಯುಗಾದಿಯಲ್ಲಿ ಬೇವು-ಬೆಲ್ಲ, ರಾಮನವಮಿಯಲ್ಲಿ ಪಾನಕ, ದೀಪಾವಳಿಯಲ್ಲಿ ಒಬ್ಬಟ್ಟು – ಹೀಗೆ ಈ ಎಲ್ಲ ಹಬ್ಬಗಳಲ್ಲಿನ ಆಚರಣೆಗಳಿಗೆ ವೈಜ್ಞಾನಿಕ, ಆರೋಗ್ಯಕರ ಕಾರಣವಿದೆ. ನಮ್ಮ ಹಿರಿಯರು ಮಳೆಗಾಲದಲ್ಲಿ ಕೆಸುವಿನ ಚಟ್ನಿ, ಕಳಲೆಪಲ್ಯ, ಚಳಿಗಾಲದಲ್ಲಿ ಎಳೆ ಹಲಸಿನಕಾಯಿ ಪಲ್ಯ, ಬೇಸಿಗೆಯಲ್ಲಿ ಒಂದೆಲಗದ ತಂಬುಳಿ ಹೀಗೆ ಹಲವಾರು ವಿಧದಲ್ಲಿ ಕಾಲಕ್ಕೆ ತಕ್ಕಂತೆ ನಡೆಯುತ್ತಿದ್ದರು.

    ನಮ್ಮ ಪ್ರಕೃತಿಯೂ ಹಾಗೇ. ಆಯಾ ಕಾಲಕ್ಕೆ ನಮಗೆ ಯಾವ ಯಾವ ಪೋಷಕಾಂಶಗಳ ಅಗತ್ಯವಿದೆಯೋ ಅಂತಹ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು, ತರಕಾರಿಗಳನ್ನು ನೀಡುತ್ತದೆ. ಆದರೆ ನಾವು ಅದನ್ನು ಯೋಚಿಸದೆ ಎಲ್ಲ ಕಾಲದಲ್ಲೂ ಕೆಲವನ್ನು ಮಾತ್ರ ಸೇವಿಸಿ ಆರೋಗ್ಯಕ್ಕೆ ಕುಂದುಂಟು ಮಾಡಿಕೊಳ್ಳುತ್ತಿದ್ದೇವೆ. ನಿರ್ದಿಷ್ಟ ಋತುಮಾನದಲ್ಲಿ, ಅಗತ್ಯವಿರುವ ಕಾಲಾವಕಾಶ ಪಡೆದು, ಬೇಕಾದ ವಾತಾವರಣದೊಂದಿಗೆ ಬೆಳೆದ ಹಣ್ಣು ತರಕಾರಿಗಳ ತಾಜಾ ಬಳಕೆಯಿಂದ ನಮ್ಮ ದೇಹಕ್ಕೆ ತಕ್ಕ ಸಮಯಕ್ಕೆ ಬೇಕಾದಂತಹ ಪೋಷಕಾಂಶವನ್ನು ನಿರ್ದಿಷ್ಟ ಆಹಾರಪದಾರ್ಥ ನೀಡಬಲ್ಲದು. ಈ ರೀತಿ ಪ್ರಕೃತಿ ಮತ್ತು ನಮ್ಮ ಪೂರ್ವಜರು ಕೊಟ್ಟ ಜ್ಞಾನವನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts