ಕೋಲಾರ: ವಾಹನ ಅಪಘಾತಗಳಿಂದ ಸಂಭವಿಸುವ ಸಾವು ನೋವುಗಳನ್ನು ತಡೆಗಟ್ಟಲು ಕಡ್ಡಾಯವಾಗಿ ಹೆಲ್ಮೆಟ್ ಜಾರಿಗೊಳಿಸಲಾಗಿದೆ. ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಂಚಾರಿ ಪೊಲೀಸ್ ಇನ್ ಸ್ಪೆಕ್ಟರ್ ರಂಗನಾಥ್ ಹೇಳಿದರು.
ಸಂಚಾರಿ ಪೊಲೀಸ್ ಠಾಣೆವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಂಚಾರಿ ನಿಯಮ ಪಾಲನೆ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಇನ್ನು ಕೆಲವರು ಅಂಗವಿಕಲರಾಗುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.
ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದೆ. ವಾಹನಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪ್ರತಿಯೊಬ್ಬರು ಸಹಕಾರ ನೀಡಬೇಕು. ದ್ವಿಚಕ್ರ ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಹೆಲ್ಮೆಟ್ ಧರಿಸಬೇಕು. ಆ ಮೂಲಕ ಸಂಭವಿಸುವ ಅಪಘಾತಗಳಿಂದ ಪಾರಾಗಬಹುದು ಎಂದು ತಿಳಿಸಿದರು.
ಕೋಲಾರದ ಅಕ್ಕಪಕ್ಕ ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ವಾಹನ ಸವಾರರು ನಿತ್ಯ ಹೆಲ್ಮೆಟ್ ಬಳಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೂ ಹೆಲ್ಮಟ್ ಕಡ್ಡಾಯಗೊಳಿಸಲು ಈಗಾಗಲೇ ವ್ಯಾಪಕ ಪ್ರಚಾರ ಮಾಡಲಾಗಿದೆ. ಆದರು ಸಹ ನಾಗರಿಕರು ನಿರಾಕರಿಸುತ್ತಿದ್ದಾರೆ. ಮನೆಯಿಂದ ಹೊರ ಬಂದ ಹಾಗೆ ಮನೆಗೆ ವಾಪಸ್ ಹೋಗುತ್ತೆವೆ ಎಂಬುದಕ್ಕೆ ಗ್ಯಾರೆಂಟಿ ಹೇಳಲು ಸಾಧ್ಯವಿಲ್ಲ. ತಮ್ಮನ್ನು ನಂಬಿಕೊಂಡು ಕುಟುಂಬ ಅವಲಂಬನೆಯಾಗಿರುತ್ತದೆ. ಕುಟುಂಬದ ಹಿತದೃಷ್ಟಿಯಿಂದಾದರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಎಚ್ಚರಿಸಿದರು.
ನಗರದಲ್ಲಿ ನಿತ್ಯ ಸಂಚಾರಿ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಏಕ ಮುಖ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಬಗ್ಗೆ ಪೊಲೀಸರು ಪ್ರತಿನಿತ್ಯ ನಿಗಾವಹಿಸುತ್ತಿದ್ದಾರೆ. ಫೋಟೊ ಹಿಡಿದು ದೂರು ದಾಖಲು ಮಾಡಿದರೆ ವಾಹನ ಮಾಲೀಕನ ಮನೆಗೆ ನೊಟೀಸ್ ಬರುತ್ತದೆ. ಆಗ ದಂಡ ವಿಧಿಸಬೇಕು. ಇದಕ್ಕೂ ಮೊದಲು ಎಚ್ಚೆತ್ತುಕೊಂಡು ಸಂಚಾರಿ ನಿಯಮ ಪಾಲನೆಗೆ ಒತ್ತು ನೀಡಬೇಕು ಎಂದರು.
ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದು ಅಪರಾಧ, ಪೊಲೀಸರ ತಪಾಸಣೆ ವೇಳೆ ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದರೆ ಹೆಚ್ಚುವರಿ ದಂಡ ಪೊಲೀಸರು ಪಾಲನೆ ಮಾಡಬೇಕಾಗುತ್ತದೆ. ಮಕ್ಕಳು ಚಾಲನೆ ಮಾಡುವ ಸಂದರ್ಭದಲ್ಲಿ ವೇಗ ಮಿತಿಯಿರುವುದಿಲ್ಲ. ಇದರಿಂದಾಗಿ ಹಿಂದೆ ಮುಂದೆ ಹೋಗುತ್ತಿರುವ ವಾಹನಗಳಿಗೂ ಕಿರಿಕಿರಿ ಉಂಟು ಮಾಡುತ್ತಾರೆ. ಪಾಲಕರು ಮಕ್ಕಳಿಗೆ ವಾಹನ ಓಡಿಸಲು ಕೊಡಬಾರದು ಎಂದು ಕಿವಿಮಾತು ಹೇಳಿದರು.