ಭಟ್ಕಳ: ಆಧ್ಯಾತ್ಮಿಕತೆ, ಧಾರ್ವಿುಕತೆ ಮೈಗೂಡಿಸಿಕೊಳ್ಳಲು ಸಮಾಜದಲ್ಲಿ ದೇವಾಲಯದ ನಿರ್ಮಾಣ ಅವಶ್ಯವಿದೆ. ಭಗವಂತನಲ್ಲಿ ನಾವೆಲ್ಲರೂ ಶರಣಾದರೆ ದೇವಾಲಯಗಳು ತಮ್ಮಿಂದ ತಾವೇ ನಿರ್ವಣಗೊಳ್ಳುತ್ತವೆ. ದೇವರು ಭಕ್ತರಿಂದಲೇ ಗುಡಿ ನಿರ್ವಿುಸಿಕೊಳ್ಳುತ್ತಾನೆ. ಆದರೆ, ಅದಕ್ಕೆ ಕಾಲ ಕೂಡಿ ಬರಬೇಕು ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶ ಹಾಗೂ 1008 ಮಹಾ ಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ತಲಗೋಡಿನ ಈ ಪುಣ್ಯ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ ನೆಲೆ ನಿಂತು ಭಕ್ತರಿಂದಲೇ ತನ್ನ ಕಾರ್ಯ ಮಾಡಿಸಿಕೊಳ್ಳುತ್ತಾಳೆ. ಸುಖ, ಶಾಂತಿ ಪಡೆಯಬೇಕಾದರೆ ಧರ್ಮವನ್ನು ಅನುಸರಿಸಬೇಕಾಗುತ್ತದೆ. ಸುಖಸ್ಯಂ ಮೂಲಂ ಧರ್ಮ ಎಂಬಂತೆ ಹಿಂದೆ ಋುಷಿ ಮುನಿಗಳು ಸಮಾಜದಲ್ಲಿ ಎಲ್ಲರೂ ಸುಖ, ನೆಮ್ಮದಿ ಇರಬೇಕು ಎಂದು ಹಲವಾರು ದೇವಾಲಯ ನಿರ್ವಿುಸಿದ್ದಾರೆ. ಧರ್ಮ ಉಳಿಸುವ ಕಾರ್ಯ ಮಾಡಿದ್ದಾರೆ. ಈ ಪರಂಪರೆಯನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕಿದೆ. ನನ್ನ ಶಿಷ್ಯರಾದ ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಈ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇಲ್ಲಿ ಅತಿ ಶೀಘ್ರದಲ್ಲೇ ದೇವಾಲಯ ನಿರ್ಮಾಣ ಆಗಲಿದ್ದು ಇದಕ್ಕೆ ಎಲ್ಲ ಭಕ್ತರು ತಮ್ಮನ್ನು ತಾವು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮಾತನಾಡಿ, ಈ ಭಾಗಕ್ಕೆ ನಾನು ಹಲವು ಬಾರಿ ಬಂದಿದ್ದೇನೆ. ಇಲ್ಲಿನ ಶಕ್ತಿ ದೇವತೆಯ ಆಶೀರ್ವಾದದಿಂದ ನನಗೆ ರಾಜಕೀಯವಾಗಿ ಏಳಿಗೆ ಕಂಡಿದ್ದೇನೆ. ಈ ದೇವಸ್ಥಾನದ ನಿರ್ಮಾಣ ಅತಿ ಶೀಘ್ರದಲ್ಲಿ ಆಗುತ್ತದೆ. ಇದಕ್ಕೆ ಸರ್ಕಾರದಿಂದ ಮಾತ್ರವಲ್ಲದೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಈ ಕ್ಷೇತ್ರದ ದೇವಿಯ ಶಕ್ತಿ ಅಪಾರವಾದದ್ದು, ಈ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಈ ಭಾಗದ ಹಿರಿಯರು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಸಚಿವರೂ ಈ ದೇವಸ್ಥಾನಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಟ್ರಸ್ಟಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠ್ಠಲ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕರಿಯಪ್ಪ ನಾಯ್ಕ ವಹಿಸಿದ್ದರು. ದೇವಸ್ಥಾನಕ್ಕೆ ಜಾಗ ನೀಡಿದ ಕುಟುಂಬದವರನ್ನು, ಅರ್ಚಕರನ್ನು ಹಾಗೂ ಶಿಲ್ಪಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವ ಶ್ರೀಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು. ಕೆ.ಆರ್. ನಾಯ್ಕ ವಂದಿಸಿದರು.