More

    ಜನಪದ ಮನುಷ್ಯ ಸಂಬಂಧಗಳ ಮಹತ್ವ ತಿಳಿಸವ ಜೊತೆಗೆ ಒಗ್ಗೂಡಿಸುವ ಕೆಲಸ ಮಾಡುತ್ತದೆ: ಡಾ.ಎಂ. ಮಹೇಶ್ ಚಿಕ್ಕಲೂರು

    ಮೈಸೂರು: ಜನಪದ ಮನುಷ್ಯ ಸಂಬಂಧಗಳ ಮಹತ್ವ ತಿಳಿಸವ ಜೊತೆಗೆ ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಜನಪರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲೂರು ಹೇಳಿದರು.

    ಅದಮ್ಯ ರಂಗಶಾಲೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಗರದ ವಿ.ವಿ. ಮೊಹಲ್ಲಾದ ಮಾತೃ ಮಂಡಲಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರದಲ್ಲಿ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಕ್ಕಳು ಟಿವಿ, ಮೊಬೈಲ್ ಹಾಗೂ ಕೆಟ್ಟ ಅಭಿರುಚಿಯ ಸಿನಿಮಾ ಹಾಡುಗಳಿಂದ ದೂರವಿದ್ದು, ಜಾನಪದದತ್ತ ವಾಲಬೇಕೆಂದರು.

    ಮಾತೃ ಮಂಡಲಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷೆ ಎಂ.ವಿಜಯಲಕ್ಷ್ಮಿಅರಸ್ ಮಾತನಾಡಿ, ಮೊಬೈಲ್ ಸ್ಕ್ರೀನಿಗೆ ಅಡಿಕ್ಟ್ ಆಗಿರುವ ನಗರದ ಮಕ್ಕಳಿಗೆ ಹಳ್ಳಿಯ ಜನಪದ ಕಲೆ ಮತ್ತು ಸಾಹಿತ್ಯದ ಪರಿಚಯವಿರುವುದಿಲ್ಲ ಎಂದು ವಿಷಾದಿಸಿದ ಅವರು, ಮಕ್ಕಳು ಇಂತಹ ಕಮ್ಮಟದಲ್ಲಿ ಭಾಗಿಯಾಗುವುದರಿಂದ ನಮ್ಮ ಹಳ್ಳಿಯ ಜನಪದ ಸಂಸ್ಕೃತಿ ತಿಳಿಯುತ್ತದೆ ಎಂದರು.

    ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಕವಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಆಡುನುಡಿಯ ಸೊಗಡಿದೆ. ಗ್ರಾಮೀಣ ಜನಜೀವನದ ಸಂಸ್ಕೃತಿಯಿದೆ. ಈ ಜನಪದ ಸಾಹಿತ್ಯದ ಬಗ್ಗೆ ಮಕ್ಕಳು ಅಭಿರುಚಿ ಬೆಳೆಸಿಕೊಳ್ಳಬೇಕು.

    ಜನಪದ ಸಾಹಿತ್ಯದಲ್ಲಿ ಗೀತೆ, ಕತೆ, ಶಿಶುಪ್ರಾಸ, ಗಾದೆ, ಒಗಟು, ಲಾವಣಿಗಳೆಲ್ಲವೂ ಇದ್ದು, ಓದು ಮತ್ತು ಬರಹ ಬಾರದ ಜನರು ಕಟ್ಟಿ ಹಾಡಿದ ಸಾಹಿತ್ಯವಾಗಿದೆ. ಇದು ಬಾಯಿಂದ ಬಾಯಿಗೆ ನಿರಂತರವಾಗಿ ಹರಿದು ಜನಮಾನಸದಲ್ಲಿ ಉಳಿದಿರುವ ಜೀವಂತಿಕೆಯಿರುವ ಸಾಹಿತ್ಯ ಎಂದು ಬಣ್ಣಿಸಿದರು.

    ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾದ ಕವಯಿತ್ರಿ ಕೆರೋಡಿ ಎಂ. ಲೋಲಾಕ್ಷಿ ‘ಮಕ್ಕಳ ಜನಪದ ಕತೆಗಳು’ ಕುರಿತು, ಗಾಯಕ ಪರಮೇಶ್ ಕೆ. ಉತ್ತನಹಳ್ಳಿ ‘ಜನಪದ ಗೀತೆಗಳು’ ಕುರಿತು, ಕವಿ ಟಿ. ಸತೀಶ್ ಜವರೇಗೌಡ ’ಮಕ್ಕಳ ಜನಪದ ಶಿಶುಪ್ರಾಸಗಳ’ ಕುರಿತು, ಲೇಖಕಿ ಗೌರಿ ಎಚ್. ಗೌಡ ‘ಜನಪದ ಗಾದೆಗಳ’ ಕುರಿತು ಪರಿಚಯಾತ್ಮಕವಾಗಿ ಮಾತನಾಡಿದರು.

    ವೇದಿಕೆಯಲ್ಲಿ ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ರಂಗ ಕಲಾವಿದರಾದ ಮನೋಜ್ ಅದಮ್ಯ, ಲೋಕನಾಥ್ ಸೋಗುಂ, ಕವಿಗಳಾದ ಸಿ.ಎಸ್. ರಾಘವೇಂದ್ರ, ಬಿ.ಎಲ್. ಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts