ಜನ ಸಾಮಾನ್ಯರ ಅನುಭವದ ಬಳ್ಳಿಯಲ್ಲಿ ಅರಳಿದ ಹೂವು ಜನಪದ

ಚಿಕ್ಕಮಗಳೂರು: ಗ್ರಾಮೀಣರಿಗೆ ಜನಪದ ಸೊಗಡು ಅಕ್ಷರ ವಿದ್ಯೆಯಿಂದ ಬಂದಿದ್ದಲ್ಲ. ಅನುಭವ ಜ್ಞಾನದಿಂದ ಬಂದಿದ್ದು. ಲೋಕ ಜೀವನವನ್ನು ಅಕ್ಷರ ಬಲ್ಲ ನಾವು ಅವರಂತೆ ಅರ್ಥ ಮಾಡಿಕೊಂಡಿಲ್ಲ ಎಂದು ಹಿರಿಯ ಸಾಹಿತಿ ಹಾಗೂ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ವಿಶ್ಲೇಷಿಸಿದರು.

ತಾಲೂಕಿನ ಮಳಲೂರು ಗ್ರಾಮದ ಸಹಿಪ್ರಾ ಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್​ನ ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನದಲ್ಲಿ ಮಾತನಾಡಿದರು.

ಜನಪದ ಎನ್ನುವುದು ಜನ ಸಾಮಾನ್ಯರ ಅನುಭವದ ಬಳ್ಳಿಯಲ್ಲಿ ಸದ್ದಿಲ್ಲದೆ ಅರಳಿದ ಹೂವು. ಅದೇ ಆಧುನಿಕತೆ ಎನ್ನುವುದು ಜಾಗತಿಕ ಅನುಕರಣೆಯ ಹುತ್ತದಿಂದ ಹೊರ ಬಂದ ಹಾವು. ಜನಪದ ಎನ್ನುವುದು ಆಧುನಿಕತೆಯ ಘಟಸರ್ಪಕ್ಕೆ ತುತ್ತಾಗುತ್ತಿದೆ ಎಂದು ವಿಷಾದಿಸಿದರು.

ಹಳ್ಳಿಗಳಿಂದಲೇ ತುಂಬಿರುವ ನಮ್ಮ ದೇಶಕ್ಕೆ ಗ್ರಾಮೀಣ ಮತ್ತು ಗುಡ್ಡಗಾಡಿನ ಜನರೇ ಆಸ್ತಿ. ಯಾವುದೇ ದೇಶದ ಘನತೆ, ಗೌರವಗಳು, ಶಕ್ತಿ ಸಂಪನ್ನತೆಗಳು ನಿಂತಿರುವುದು ಅಲ್ಲಿನ ನಗರಗಳ ಅನುಕರಣೆಯ ಬೆಡಗು, ಬಿನ್ನಾಣಗಳಿಂದಲ್ಲ. ಅಲ್ಲಿನ ನೆಲದ ಸಂಸ್ಕೃತಿಯಿಂದ, ಜನರ ಶ್ರಮದ ಬೆವರಿನಿಂದ ಎಂದರು.

ಜಾನಪದ ಕೇಂದ್ರದ ಬೇಡಿಕೆ: ಚಿಕ್ಕಮಗಳೂರಿನಲ್ಲಿ ಜಾನಪದ ಅಧ್ಯಯನ ಕೇಂದ್ರ ತೆರೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಮಾಡಿದ್ದು, ಸರ್ಕಾರದ ಜತೆ ಈ ಸಂಬಂಧ ಮಾತನಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಮ್ಮೇಳನಾಧ್ಯಕ್ಷ ಗೊರುಚ ಹೇಳಿದರು. ಜತೆಗೆ ಹಳ್ಳಿಗರ ಕುಶಲ ಕಲೆ, ವ್ಯವಹಾರಕ್ಕೆ ತರಬೇತಿ ಕೇಂದ್ರ ತೆರೆಯಬೇಕು. ರಾಜ್ಯ ಸರ್ಕಾರ ಇದಕ್ಕೂ ಮನಸ್ಸು ಮಾಡಬೇಕು ಎಂದರು. ಜನಪದ ಪರಿಷತ್ತು. ಜನಪದ ಅಕಾಡೆಮಿ, ಕಲಾವಿದರಿಗೆ ಮಾಸಾಶನ, ಜಾನಪದಕ್ಕೆ ಮೀಸಲಾದ ವಿಶ್ವವಿದ್ಯಾಲಯ ಈ ಎಲ್ಲ ಬೇಡಿಕೆಗಳನ್ನು 50 ವರ್ಷಗಳ 1967ರಲ್ಲಿ ಹಿಂದೆ ತರೀಕೆರೆಯಲ್ಲಿ ನಡೆದ ರಾಜ್ಯಮಟ್ಟದ ಜಾನಪದ ಸಮ್ಮೇಳನದಲ್ಲಿ ಆಗ್ರಹಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಬೇಡಿಕೆಗಳು ಈಡೇರಿವೆ ಎಂದರು.