ಜಾನಪದ ವಿವಿ 4ನೇ ಘಟಿಕೋತ್ಸವ ನಾಳೆ

ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಅ. 31ರಂದು ನಡೆಯಲಿದೆ. ದೊಡ್ಡಾಟ ಕಲಾವಿದ ಹಾಗೂ ಉತ್ಸವ ರಾಕ್​ ಗಾರ್ಡನ್ ರೂವಾರಿ ಪ್ರೊ. ಟಿ.ಬಿ. ಸೊಲಬಕ್ಕನವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ಡಿ.ಬಿ. ನಾಯಕ ತಿಳಿಸಿದರು.

ನಗರದ ವಾರ್ತಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016-17ನೇ ಸಾಲಿನ ಘಟಿಕೋತ್ಸವವನ್ನು ಅ. 31ರಂದು ಬೆಳಗ್ಗೆ 11 ಗಂಟೆಗೆ ವಿವಿ ಆವರಣದಲ್ಲಿರುವ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಗೌರವ ಡಾಕ್ಟರೇಟ್ ಹಾಗೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಸಾಹಿತಿ ಬರಗೂರ ರಾಮಚಂದ್ರಪ್ಪ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ ವಿಭಾಗದಿಂದ ಮೀರಾ ಎಚ್.ಎನ್. ಅವರು ಮಂಡಿಸಿರುವ ಪ್ರಬಂಧಕ್ಕೆ ವಿವಿಯಿಂದ ಮೊದಲ ಪಿಎಚ್​ಡಿ ಪದವಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುವುದು. ಎಂಎ, ಎಂಬಿಎ ವಿಭಾಗದ 29, ಪಿಜಿ ಡಿಪ್ಲೋಮಾದ 23, ಡಿಪ್ಲೋಮಾದ 937 ಹಾಗೂ ಸರ್ಟಿಫಿಕೇಟ್ ಕೋರ್ಸ್ ಪಡೆದ 341 ಸೇರಿ 1,331 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಜನಪದ ಸಾಹಿತ್ಯ ವಿಭಾಗದ ವಿದ್ಯಾರ್ಥಿನಿ ಸುಜಾತಾ ಮಲ್ಲೊಳ್ಳಿ ಅವರು ಮೊದಲ ರ್ಯಾಂಕ್ ಹಾಗೂ ಮೂರು ಚಿನ್ನದ ಪದಕ ಪಡೆದಿದ್ದಾರೆ. ವಿವಿಧ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಜಾನಪದ ವಿವಿಯು ದೇಶೀಯ ಜ್ಞಾನ ಪರಂಪರೆಗಳ ಅಧ್ಯಯನಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಈ ವಿಷಯದ ಸಂಶೋಧನೆಗಳನ್ನು ಉತ್ತೇಜಿಸಲಾಗುತ್ತಿದೆ. ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸುವ ಜೊತೆಗೆ ಸರ್ಕಾರದ ಆದೇಶದಂತೆ ಅಂಗವಿಕಲ ವಿದ್ಯಾರ್ಥಿಗಳು ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು ಯೋಜನೆ ರೂಪಿಸಲಾಗಿದೆ. ಜಾನಪದ ಜ್ಞಾನ ವಿಸ್ತಾರಗೊಳಿಸಲು ಕೃತಿಗಳ ಪ್ರಕಟಣೆಗೂ ಒತ್ತು ನೀಡಿದ್ದು, ಈಗಾಗಲೇ 100ಕ್ಕೂ ಹೆಚು ಕೃತಿಗಳನ್ನು ಪ್ರಕಟಿಸಲಾಗಿದೆ. ಅಧ್ಯಯನ ಗ್ರಂಥಗಳು, ದೇಶಿ ಕೃಷಿ ವಿಜ್ಞಾನ ಕೋಶ, ವಿಸõತ ಜಾನಪದ ಗ್ರಂಥಸೂಚಿ, ಸಂಶೋಧನಾ ಜಾನಪದ, ದೇಶಿ ಆಹಾರ ಪದ್ಧತಿ ಮೊದಲಾದ ಸಂಪುಟಗಳನ್ನು ಪ್ರಕಟಿಸಲಾಗಿದೆ. 12 ಜಿಲ್ಲೆಗಳ ಗ್ರಾಮಚರಿತ್ರೆ ಕೋಶ ಪ್ರಕಟಣೆ, ಕಲೆ ಕಲಾವಿದರ ಪೋಷಣೆಯೊಂದಿಗೆ ಕಲಾ ಪ್ರದರ್ಶನ ಮತ್ತು ಅದಕ್ಕೆ ಪೂರಕ ವಾತಾವರಣ ಕಲ್ಪಿಸಲು ವಿಶ್ವವಿದ್ಯಾಲಯ ಶ್ರಮಿಸುತ್ತಿದೆ ಎಂದರು.

ಸಿಬ್ಬಂದಿ ನೇಮಕಾತಿ ಶೀಘ್ರ: ವಿವಿ ಸ್ಥಾಪನೆಯಾಗಿ ಐದು ವರ್ಷವಾದರೂ ಕಾಯಂ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಾಗಿಲ್ಲ. 6 ತಿಂಗಳ ಹಿಂದೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ ನಾನಾ ಕಾರಣಗಳಿಂದ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಧಿಸೂಚನೆಯನ್ನು ಮುಂದುವರಿಸಿ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕುಲಪತಿ ಡಿ.ಬಿ. ನಾಯಕ ತಿಳಿಸಿದರು.

ವಿವಿ ಕುಲಸಚಿವರಾದ ಚಂದ್ರಶೇಖರ, ಡಾ. ಎಂ.ಎನ್. ವೆಂಕಟೇಶ ಸುದ್ದಿಗೋಷ್ಠಿಯಲ್ಲಿದ್ದರು.