ಹಳ್ಳಿಗಳಲ್ಲಿ ಜನಪದ ಗೀತೆ ಜೀವಂತ

ವಿರಾಜಪೇಟೆ: ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಮಧ್ಯೆ ಜನಪದ ಗೀತೆಗಳು ಮರೆಯಾಗುತ್ತಿದ್ದರೂ ಹಳ್ಳಿಗಳಲ್ಲಿ ಇನ್ನೂ ಭದ್ರವಾಗಿ ನೆಲೆ ಊರಿರುವುದು ಸಮಾಧಾನ ತರುವ ಸಂಗತಿ ಎಂದು ಶಾಸ್ತ್ರೀಯ ಸಂಗೀತ ಗುರು ದಿಲಿಕುಮಾರ್ ಹೇಳಿದರು.

ವಿರಾಜಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿಸಿದ್ದ ಜನಪದ ಗೀತೆಗಳ ಗಾಯನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲೇ ಕರ್ನಾಟಕ ಜನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಾಕಾರಗಳನ್ನು ಸಂಸ್ಕೃತಿಯಲ್ಲಿ ಕಾಣಬಹುದು ಎಂದು ಹೇಳಿದರು.

ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮೂಳೆ ವ್ಯೆದ್ಯ ಡಾ.ಶ್ರೀನಿವಾಸ ಮೂರ್ತಿ ಮಾತನಾಡಿ, ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿ ಎಂದರೆ ಅದು ಜನಪದ ಎಂದು ಹೇಳಿದರು.
ಇದಕ್ಕೂ ಮುನ್ನ ಪುಲ್ವಾಮದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜನಪದ ಗೀತೆ ವಿಜೇತರಿಗೆ ಬಹುಮಾನ: ತಾಲೂಕು ಮಟ್ಟದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಜನಪದ ಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗ: ಸಿದ್ದಾಪುರದ ಕರಡಿಗೋಡು ಹಿರಿಯ ಪ್ರಾಥಮಿಕ ಶಾಲೆಯ ಪೃಥ್ವಿ (ಪ್ರ), ಭೀಮಾ (ದ್ವಿ) ಹಾಗೂ ಭೂಮಿಕಾ (ತೃ) ಸ್ಥಾನ ಗಳಿಸಿದ್ದಾರೆ.
ಪ್ರೌಢಶಾಲಾ ವಿಭಾಗ: ಗೋಣಿಕೊಪ್ಪದ ಕಾಪ್ಸ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಆಯುಷ್ (ಪ್ರ), ಕಾವೇರಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಭಜನ್ ಬೋಪಣ್ಣ (ದ್ವಿ), ಸಂತ ಅನ್ನಮ್ಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಅಮೂಲ್ಯ (ತೃ), ಕಾಲೇಜು ವಿಭಾಗದಲ್ಲಿ ಮಡಿಕೇರಿಯ ಮಹಿಳಾ ಕಾಲೇಜಿನ ಅರ್ಪಿತಾ ರೈ (ಪ್ರ), ಕಾವೇರಿ ಕಾಲೇಜಿನ ಭವನ್‌ಕುಮಾರ್ (ದ್ವಿ) ಹಾಗೂ ಶರವಣ (ತೃ) ಹಾಗೂ ಸಾರ್ವಜನಿಕರ ವಿಭಾಗದಲ್ಲಿ ವಿರಾಜಪೇಟೆಯ ಸುಪ್ರಿತ ದಿಲೀಪ್ (ಪ್ರ), ಬೊಟ್ಟೋಳಂಡ ಕಾಶಿ ಅಚ್ಚಯ್ಯ (ದ್ವಿ), ಸಿದ್ದಾಪುರದ ಕರಡಿಗೋಡುವಿನ ಸಹಲ (ತೃ) ಸ್ಥಾನ ಗಳಿಸಿದ್ದಾರೆ.

ಗೊಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಶ್ರೀ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸಂಗೀತ ಗುರು ದಿಲಿಕುಮಾರ್, ಜನಪದ ಪರಿಷತ್ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಉಪಾಧ್ಯಕ್ಷರಾದ ಮನೆಯಪಂಡ ಕಾಂತಿ ಸತೀಶ್, ಮನೆಯಪಂಡ ದೇಚಮ್ಮ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಬಡಕಡ ರಜಿತಾ ಕಾರ್ಯಪ್ಪ, ಸಂಚಾಲಕ ಚಂಬಂಡ ಮುದ್ದಪ್ಪ ಉಪಸ್ಥಿತರಿದ್ದರು. ತೀರ್ಪಗಾರರಾಗಿ ಸೋಮೆಯಂಡ ಕೌಶಲ್ಯಾ ಸತೀಶ್ ಹಾಗೂ ತಾತಂಡ ಪ್ರತಾಪ್ ಭಾಗವಹಿಸಿದ್ದರು.