More

  ವಿಶೇಷ ಸ್ಥಾನಮಾನದ ಪಟ್ಟು; ಹಲವು ಪ್ಯಾಕೇಜ್​ಗಳ ಬಳಿಕವೂ ಬದಲಾಗಿಲ್ಲ ಬಿಹಾರದ ಸ್ಥಿತಿ

  ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಮತ್ತೆ ಕೋರಿಕೆ ಸಲ್ಲಿಸುವ ನಿರ್ಣಯವನ್ನು ಬಿಹಾರ ಸಚಿವ ಸಂಪುಟ ಅಂಗೀಕರಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ನಿತೀಶ್ ಎಚ್ಚರಿಸಿದ್ದಾರೆ.

  ಪ್ರಧಾನಿ ಸ್ಥಾನದ ಆಕಾಂಕ್ಷಿ ಆಗಿರುವ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ನಡೆಗಳನ್ನು ಊಹಿಸುವುದು ಸುಲಭವಲ್ಲ. ಮೊದಲಿನ ಯುಪಿಎ ಮೈತ್ರಿಕೂಟ, ಆ ಬಳಿಕ ಎನ್​ಡಿಎ ಮೈತ್ರಿಕೂಟ, ನಂತರ ರಾಷ್ಟ್ರೀಯ ಜನತಾ ದಳದೊಂದಿಗೆ ಮೈತ್ರಿ ಸಾಧಿಸಿದ್ದರು ನಿತೀಶ್. ಇದ್ದಕಿದ್ದಂತೆ ಆರ್​ಜೆಡಿಯೊಂದಿಗಿನ ಮೈತ್ರಿ ತೊರೆದು, ಮತ್ತೆ ಎನ್​ಡಿಎ ಪಾಳಯ ಸೇರಿದ್ದ ಅವರು ಮತ್ತೆ ಈಗ ಅದೇ ಆರ್​ಜೆಡಿಯೊಂದಿಗೆ ಸರ್ಕಾರ ನಡೆಸುತ್ತಿದ್ದಾರೆ. ಐಎನ್​ಡಿಐಎ ಮೈತ್ರಿಕೂಟದೊಂದಿಗೆ ಒಮ್ಮೆ ಸ್ನೇಹ, ಮಗದೊಮ್ಮೆ ಮುನಿಸನ್ನು ಪ್ರದರ್ಶಿಸುತ್ತಿದ್ದಾರೆ.

  2024ರ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ. ಬಿಜೆಪಿ, ಕಾಂಗ್ರೆಸ್ ತಯಾರಿಯನ್ನೂ ಆರಂಭಿಸಿರುವಾಗ ನಿತೀಶ್ ಸುಮ್ಮನಿರಲು ಹೇಗೆ ಸಾಧ್ಯ? ಹಿಂದೊಮ್ಮೆ, ಸಾರಾಯಿ ನಿಷೇಧ ವಿಷಯದಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಭಾವನಾತ್ಮಕವಾಗಿ ಮಾತನಾಡಿ, ಮಹಿಳೆಯರ ಮತಗಳನ್ನು ಸೆಳೆದಿದ್ದ ನಿತೀಶ್, ಈಗ ಮತಗಳಿಕೆಯ ಹೊಸ ಅಸ್ತ್ರವಾಗಿ ‘ವಿಶೇಷ ಸ್ಥಾನಮಾನ’ದ ಬೇಡಿಕೆಯನ್ನು ಮುಂದಿರಿಸಿದ್ದಾರೆ. ಇದು ಹೊಸ ಬೇಡಿಕೆ ಅಲ್ಲವಾದರೂ, ಹಳೆಯ ಆಗ್ರಹಕ್ಕೆ ಮತ್ತೆ ಜೀವ ತುಂಬಲು ಹೊರಟಿದ್ದಾರೆ.

  ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ 2007ರಿಂದಲೂ ಒತ್ತಾಯಿಸುತ್ತಿರುವ ನಿತೀಶ್ ಕುಮಾರ್, ಎನ್​ಡಿಎ ಬಣದಲ್ಲಿದ್ದಾಗ ಕೂಡ ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆ ಇರಿಸಿದ್ದರು. ಈಗ ಬಿಜೆಪಿಯಿಂದ ಬೇರ್ಪಟ್ಟಿರುವ ಅವರು, ಮುಂದಿನ ಚುನಾವಣೆಗೂ ಮುನ್ನ ತಮ್ಮ ರಾಜಕೀಯ ನಡೆಯಾಗಿ ವಿಶೇಷ ಸ್ಥಾನಮಾನದ ಪ್ರಸ್ತಾಪ ಮಾಡಿದ್ದಾರೆ.

  ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಲ್ಲಿ ರಾಜ್ಯಾದ್ಯಂತ ಚಳವಳಿ ನಡೆಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, 2024ರ ಸಾರ್ವತ್ರಿಕ ಚುನಾವಣೆಯ ಬಳಿಕ ಬಿಜೆಪಿಯೇತರ ಪಕ್ಷಗಳು ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದಿದ್ದಾರೆ ನಿತೀಶ್. ‘ನಮಗೆ ಸರ್ಕಾರ ರಚಿಸಲು ಅವಕಾಶ ಸಿಕ್ಕರೆ, ನಾವು ಖಂಡಿತವಾಗಿಯೂ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುತ್ತೇವೆ. ಬಿಹಾರದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ಆದರೆ ವಿಶೇಷ ಸ್ಥಾನಮಾನ ಪಡೆಯಬೇಕಾದ ಇತರ ರಾಜ್ಯಗಳ ಕುರಿತೂ ಹೇಳುತ್ತಿದ್ದೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

  ಹಲವು ಪ್ರಯೋಜನ

  • ರಾಜ್ಯವೊಂದಕ್ಕೆ ವಿಶೇಷ ಸ್ಥಾನಮಾನ ದೊರೆತರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿನ ಕೇಂದ್ರ-ರಾಜ್ಯ ಅನುದಾನದ ಅನುಪಾತವು 90:10ಕ್ಕೆ ಬದಲಾಗುತ್ತದೆ. ಇತರ ರಾಜ್ಯಗಳ ಅನುಪಾತಕ್ಕಿಂತ ಇದು ಬಹಳ ಅನುಕೂಲ.
  • ದೇಶದಲ್ಲಿ ಪ್ರಸ್ತುತ ವಿಶೇಷ ವರ್ಗದ 11 ರಾಜ್ಯಗಳಿವೆ. ಅರುಣಾಚಲ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ (ಈಗ ಕೇಂದ್ರಾಡಳಿತ ಪ್ರದೇಶ), ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಮತ್ತು ಉತ್ತರಾಖಂಡ.
  • ರಾಜ್ಯಗಳಿಗೆ ಯಾವುದೇ ವಿಶೇಷ ವರ್ಗ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ವಿವಿಧ ಕಾರಣಗಳ ಆಧಾರದಲ್ಲಿ 11 ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಆಗಿನ ಯೋಜನಾ ಆಯೋಗದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಶಿಫಾರಸು ಮಾಡಿತ್ತು.
  • ಕಷ್ಟಕರ ಭೂಪ್ರದೇಶ, ಕಡಿಮೆ ಜನಸಂಖ್ಯಾ ಸಾಂದ್ರತೆ ಮತ್ತು ಅಲ್ಪಪ್ರಮಾಣದ ಬುಡಕಟ್ಟು ಸಮುದಾಯ ಇರುವ, ನೆರೆಯ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ, ಆರ್ಥಿಕ ಮತ್ತು ಮೂಲಸೌಕರ್ಯದಲ್ಲಿ ಹಿಂದುಳಿದಿರುವ ಅಂಶಗಳನ್ನು 2018ರಲ್ಲಿ ಸಂಸತ್​ನಲ್ಲಿ ಸರ್ಕಾರ ಪಟ್ಟಿ ಮಾಡಿತ್ತು.
  • 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಅನುಮೋದಿಸಿದ ಬಳಿಕ ರಾಜ್ಯಗಳ ವಿಶೇಷ ಸ್ಥಾನಮಾನ ಪರಿಕಲ್ಪನೆಯನ್ನು ಕೈಬಿಡಲಾಗಿತ್ತು. ಆದರೆ ಬಿಹಾರ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳು ತಮ್ಮ ಹಿಂದುಳಿದಿರುವಿಕೆ ಹಾಗೂ ಬಡತನವನ್ನು ಉಲ್ಲೇಖಿಸಿ, ಬೇಡಿಕೆಗೆ ಪಟ್ಟು ಹಿಡಿದಿವೆ.

  ವಿಶೇಷ ಸ್ಥಾನಮಾನದ ಪರ ನಿತೀಶ್ ವಾದ

  ಹಿಂದೆ ಬಿಹಾರ ವಿದ್ಯಾಕೇಂದ್ರವಾಗಿತ್ತು. ಆದರೆ ಇಂದು ಉದ್ಯೋಗಕ್ಕಾಗಿ ಬಿಹಾರದ ಯುವಕರು ದೆಹಲಿ ಹಾಗೂ ಇತರ ರಾಜ್ಯಗಳಿಗೆ ವಲಸೆ ಹೋಗಬೇಕಾದ ದುಸ್ಥಿತಿ ನಿರ್ವಣವಾಗಿದೆ.

  ರಸ್ತೆ, ವಿದ್ಯುತ್, ರೈಲ್ವೆ, ತಲಾವಾರು ಆದಾಯ ಸೇರಿದಂತೆ ಅಭಿವೃದ್ಧಿ ಸೂಚ್ಯಂಕದ ಹಲವಾರು ಅಂಶಗಳಲ್ಲಿ ಬಿಹಾರ ಹಿಂದುಳಿದಿದೆ.

  ಒಳ್ಳೆಯ ಅಭಿವೃದ್ಧಿ, ಉತ್ತಮ ಜೀವನದ ಹಕ್ಕು ಬಿಹಾರದ ಜನತೆಗಿಲ್ಲವೇ?

  ನಾವು ಭಿಕ್ಷುಕರಲ್ಲ. ಅಭಿವೃದ್ಧಿ ಬಿಹಾರದ ಜನತೆಯ ಹಕ್ಕಾಗಿದೆ.

  ಯಾರಿಗೆ ನೀಡಬಹುದು?: ವಿಶೇಷ ಸ್ಥಾನಮಾನವನ್ನು ಸಾಮಾನ್ಯವಾಗಿ ಭೌಗೋಳಿಕ ಮತ್ತು ಸಾಮಾಜಿಕ-ಆರ್ಥಿಕ ಅನನುಕೂಲಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ನೀಡಲಾಗುತ್ತದೆ, ಉದಾಹರಣೆಗೆ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇರುವಂಥ, ಗುಡ್ಡಗಾಡು ಪ್ರದೇಶ, ಬುಡಕಟ್ಟು ಜನರು ಆರ್ಥಿಕತೆ ಮತ್ತು ಮೂಲಸೌಕರ್ಯದಿಂದ ಹಿಂದುಳಿದಿರುತ್ತಾರೆ. ಅಂತಹ ರಾಜ್ಯಗಳು ಅಭಿವೃದ್ಧಿ ಉದ್ದೇಶಗಳಿಗಾಗಿ ಕೇಂದ್ರ ಹಣಕಾಸು ಮತ್ತು ಹಣಕಾಸಿನ ಬೆಂಬಲದ ಹೆಚ್ಚಿನ ಪಾಲನ್ನು ಪಡೆಯುತ್ತವೆ.

  ಒಡಿಶಾದಿಂದಲೂ ಬೇಡಿಕೆ: ಒಡಿಶಾ ಪ್ರತಿವರ್ಷವೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿದೆ. ಮೂಲಸೌಕರ್ಯ ವ್ಯವಸ್ಥೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ರಾಜ್ಯದ ಅಭಿವೃದ್ಧಿಗೆ ಅಡ್ಡಿಯುಂಟು ಮಾಡಲಿದೆ. ಪ್ರಸ್ತುತ ತಾತ್ಕಾಲಿಕ ಪರಿಹಾರಗಳಿಗಾಗಿ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ಆದರೆ, ರಾಜ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕಿದೆ. ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಬೇಕು. ಇದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.

  ಸಂಚಲನ ಮೂಡಿಸಿತ್ತು ಅಧಿಕಾರ ರ‍್ಯಾಲಿ: ವಿಶೇಷ ಸ್ಥಾನಮಾನ ಬೇಡಿಕೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿತೀಶ್ ’ಅಧಿಕಾರ ರ್ಯಾಲಿ’ ಮೂಲಕ ಜನರ ನಡುವೆ ಹೋಗಿದ್ದರು. ಬಡತನದ ಪ್ರಮಾಣ ತಗ್ಗಿಸಲು, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಮೂಲಸೌಕರ್ಯಗಳನ್ನು ವಿಸ್ತರಿಸಲು ಸೇರಿದಂತೆ ಬಿಹಾರದ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಅಗತ್ಯವಾಗಿದೆ ಎಂದು ಪ್ರತಿಪಾದಿಸುತ್ತ ಬಂದಿದ್ದಾರೆ. 2012 ನವೆಂಬರ್ 4ರಂದು ಪಟನಾದಲ್ಲಿ ಮತ್ತು 2013ರ ಮಾರ್ಚ್ 17ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಧಿಕಾರ ರ‍್ಯಾಲಿ ನಡೆಸಿದ್ದರು. ಆ ಬಳಿಕ 2013ರಲ್ಲಿ ಆಗಿನ ಯುಪಿಎ ಸರ್ಕಾರ ಆರ್ಥಿಕ ತಜ್ಞ ರಘುರಾಮ್ ರಾಜನ್ ನೇತೃತ್ವದಲ್ಲಿ ಸಮಿತಿ ಯನ್ನು ರಚಿಸಿತ್ತು. 2013ರ ಸೆಪ್ಟೆಂಬರ್​ನಲ್ಲಿ ರಾಜನ್ ಸಮಿತಿಯ ವರದಿ ಬಂತಾದರೂ, ಆ ಕುರಿತು ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 2017ರ ಮೇನಲ್ಲಿ ಬಿಹಾರ ಸರ್ಕಾರ ಮತ್ತೆ ಇದೇ ಬೇಡಿಕೆಯನ್ನು ಕೇಂದ್ರದ ಮುಂದೆ ಇಟ್ಟಿತ್ತಾದರೂ, ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿಲ್ಲ.

  ಬಿಹಾರದ ಯುವಜನತೆಗೆ, ದುಡಿಯುವ ಕೈಗಳಿಗೆ ಹೇಗೆ ಉದ್ಯೋಗ ಒದಗಿಸಬೇಕು ಎಂಬ ಬಗ್ಗೆ ನೀಲಿನಕ್ಷೆ ತಯಾರಿಸಿದ್ದೇವೆ. ಬಿಹಾರ ಜನಸಂಖ್ಯೆಯ ಶೇಕಡ 70ರಷ್ಟು ಜನ ಯುವಕ/ಯುವತಿಯರು. ಇವರ ಕೌಶಲವನ್ನು ವೃದ್ಧಿಸಿ ಅವರ ಕೈಗೆ ಕೆಲಸ ನೀಡಿದರೆ ರಾಜ್ಯದ ಚಿತ್ರಣವೇ ಬದಲಾಗುತ್ತದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಇದೇ ಉದ್ದೇಶಕ್ಕಾಗಿ ಜಾರಿಗೆ ತಂದಿದ್ದೇವೆ. ಮತ್ತು ಇಡೀ ದೇಶವನ್ನು ಗಮನವಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದ್ದೇವೆಯೇ ಹೊರತು ಅವುಗಳನ್ನು ಬಿಡಿ-ಬಿಡಿಯಾಗಿಸಿಲ್ಲ. ನಾವು ‘ಮೇಕ್ ಇನ್ ಇಂಡಿಯಾ’ಗೆ ಕರೆನೀಡಿದೆವು. ಅದರ ಫಲಸ್ವರೂಪ ಎಂಬಂತೆ ಇಂದು ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದೆ, ಕಾರ್ಖಾನೆಗಳು ಸ್ಥಾಪನೆಯಾಗುತ್ತಿವೆ.

  | ನರೇಂದ್ರ ಮೋದಿ, ಪ್ರಧಾನಿ (ಚುನಾವಣೆ ರ‍್ಯಾಲಿಯಲ್ಲಿ ಹೇಳಿದ್ದು)

  ಬಿಹಾರದ ಜನರು ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಮಾನವ ಸಂಪನ್ಮೂಲವನ್ನು ರಾಜ್ಯದ ಉತ್ಪಾದಕತೆ ಹೆಚ್ಚಿಸಲು ಬಳಸುವ ನಿಟ್ಟಿನಲ್ಲಿ ಸರ್ಕಾರ ವಿಫಲವಾಗಿದೆ. 1990ರಲ್ಲಿ ಬಿಹಾರವು ಅತ್ಯಂತ ಬಡ ಮತ್ತು ಹಿಂದುಳಿದ ರಾಜ್ಯವಾಗಿತ್ತು. 2023ರಲ್ಲಿ ಅದು ಇನ್ನೂ ಹಾಗೆಯೇ ಉಳಿದಿದೆ. ಅಭಿವೃದ್ಧಿ ಸಾಕಾರಗೊಳ್ಳದಿರುವುದರಿಂದಲೇ ಇಲ್ಲಿನ ಜನರು ಜೀವನಭದ್ರತೆಗಾಗಿ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ.

  | ಪ್ರಶಾಂತ್ ಕಿಶೋರ್ ಚುನಾವಣೆ ತಂತ್ರಗಾರಿಕೆ ನಿಪುಣ

  ನಿತೀಶ್ ಕುಮಾರ್ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಆಗ ಏಕೆ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನ ಕೊಡಿಸಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಬಿಹಾರಕ್ಕೆ ವಿಶೇಷ ಪ್ಯಾಕೇಜುಗಳನ್ನು ನೀಡಿವೆ. ಅವುಗಳನ್ನು ಸಮರ್ಪಕವಾಗಿ ಬಳಸುವಲ್ಲಿ ವಿಫಲವಾದ ನಿತೀಶ್, ಈಗ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿಶೇಷ ಸ್ಥಾನಮಾನದ ಬೇಡಿಕೆ ಮುಂದಿರಿಸಿದ್ದಾರೆ.

  | ಸುಶೀಲಕುಮಾರ್ ಮೋದಿ ಮಾಜಿ ಉಪಮುಖ್ಯಮಂತ್ರಿ (ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೇಳಿದ್ದು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts