More

    ರೈತರಿಗೆ ಮೇವು ಬೀಜದ ಕಿಟ್ ಉಚಿತ

    ಮಂಜುನಾಥ ಅಂಗಡಿ ಧಾರವಾಡ

    ಮಳೆಯ ಕೊರತೆಯಿಂದ ಜಿಲ್ಲೆಯ 5 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ನವಲಗುಂದ ಹಾಗೂ ಕುಂದಗೋಳ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಕಲಘಟಗಿ, ಅಳ್ನಾವರ ಮತ್ತು ಅಣ್ಣಿಗೇರಿ ತಾಲೂಕುಗಳನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ. ಜಿಲ್ಲಾದ್ಯಂತ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದೆ.

    ಜಿಲ್ಲೆಯಲ್ಲಿ ಮುಂಗಾರು ಬೆಳೆ ಕೈ ಕೊಡುವ ಲಕ್ಷಣಗಳಿವೆ. ಹಿಂಗಾರು ಹಂಗಾಮಿಗಾದರೂ ಉತ್ತಮ ಮಳೆಯಾದರೆ ರೈತರು ವರ್ಷವಿಡೀ ಉಣ್ಣಲು ಕಾಳು ಮತ್ತು ಜಾನುವಾರುಗಳಿಗೆ ಮೇವಿನ ಚಿಂತೆಯಾಗದು. ಆದರೆ, ಸದ್ಯ ಬೇಸಿಗೆ ವಾತಾವರಣವಿದ್ದು, ಭೂಮಿ ತೇವಾಂಶವಿಲ್ಲ. ಹೀಗಾಗಿ, ಹಿಂಗಾರು ಕೈ ಕೊಟ್ಟರೆ ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಲಕ್ಷಣಗಳಿವೆ. ಹೀಗಾಗಿ ಸರ್ಕಾರ ಈಗಿನಿಂದಲೇ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಮೇವಿನ ಬೆಳೆಯನ್ನಾದರೂ ಬೆಳೆದು ಜಾನುವಾರುಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತರಿಗೆ ಉಚಿತ ಮೇವಿನ ಮಿನಿ ಕಿಟ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಮೇವು ಸಾಗಣೆ ಮೇಲೆ ನಿಗಾ

    ಕಳೆದ ವರ್ಷ ಹಿಂಗಾರು ಬೆಳೆ ಉತ್ತಮವಾಗಿ ಬಂದಿದ್ದು, ಜಿಲ್ಲೆಯ ರೈತರ ಬಳಿ ಇನ್ನೂ 6 ತಿಂಗಳಿಗಾಗುವಷ್ಟು ಮೇವಿನ ದಾಸ್ತಾನಿದೆ. ಸದ್ಯಕ್ಕೆ ಮೇವಿನ ಕೊರತೆ ಎದುರಾಗದಿದ್ದರೂ ಹಿಂಗಾರು ಮಳೆಯ ಮೇಲೆ ಕೊರತೆ ನಿರ್ಧಾರವಾಗಲಿದೆ. ಹೀಗಾಗಿ, ಇರುವ ಹೊಟ್ಟು ಮತ್ತು ಮೇವನ್ನು ಅಕ್ಕಪಕ್ಕದ ಜಿಲ್ಲೆಗಳಿಗೆ ಸಾಗಣೆ ಮಾಡದಂತೆ ನಿಗಾ ವಹಿಸಲಾಗಿದೆ.

    ನೀರಾವರಿ ಸೌಲಭ್ಯ ಇರುವ ರೈತರು ಅಗತ್ಯ ಬಿದ್ದರೆ ಮೇವಿನ ಬೀಜದ ಮಿನಿ ಕಿಟ್​ಗಳನ್ನು ಉಚಿತವಾಗಿ ಪಡೆದು ಮೇವಿನ ಬೆಳೆ ಬಿತ್ತನೆ ಮಾಡಬಹುದು. ಬೇಸಿಗೆಯಲ್ಲಿ ಅಗತ್ಯ ಬಿದ್ದರೆ ಮೇವು ಬ್ಯಾಂಕ್ ಸ್ಥಾಪನೆಯ ನಿರೀಕ್ಷೆ ಇದ್ದು, ರೈತರು ಬೆಳೆದ ಮೇವನ್ನು ಖರೀದಿಸುವ ಸಾಧ್ಯತೆ ಇದೆ.

    ಸರ್ಕಾರಕ್ಕೆ ಪ್ರಸ್ತಾವ

    ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ವಹಿಸುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಸರ್ಕಾರ ಸೂಚಿಸಿದೆ. ಜಿಲ್ಲೆಯಲ್ಲಿ ನೀರಾವರಿ ವ್ಯವಸ್ಥೆ ಇರುವ ಹಾಗೂ ತೇವಾಂಶವಿರುವ ಜಮೀನುಗಳ ರೈತರ ಪಟ್ಟಿಯನ್ನು ಪಡೆದು ಮೇವಿನ ಬೀಜದ ಕಿರುಪೊಟ್ಟಣಗಳ ಬೇಡಿಕೆಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಇಲಾಖೆಯ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ ಅವರು ತಾಲೂಕುವಾರು ಬೇಡಿಕೆಯ ಪಟ್ಟಿಯನ್ನು ಅಪರ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ವಿವಿಧ ತಳಿಯ 0.5, 3, 5 ಹಾಗೂ 6 ಕೆಜಿಯ 93,000 ಕೆಜಿ ಮೇವಿನ ಬೀಜದ ಪೊಟ್ಟಣಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಧಾರವಾಡ ತಾಲೂಕಿಗೆ 26,000 ಕೆಜಿ, ಹುಬ್ಬಳ್ಳಿ 20,000, ಕಲಘಟಗಿ 14,000, ಕುಂದಗೋಳ 13,000, ನವಲಗುಂದ ತಾಲೂಕಿಗೆ 20,000 ಕೆಜಿ ಪೊಟ್ಟಣಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

    ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಲಾಖೆ ಬಳಿ ನೀರಾವರಿ ವ್ಯವಸ್ಥೆ ಇರುವ ಜಿಲ್ಲೆಯ ರೈತರ ಪಟ್ಟಿ ಇದೆ. ಸರ್ಕಾರದ ನಿರ್ದೇಶನದಂತೆ ಇಲಾಖೆಯ ಅಪರ ನಿರ್ದೇಶಕರಿಗೆ ಮೇವಿನ ಕಿರುಪೊಟ್ಟಣಗಳ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಮೇವಿನ ಬೆಳೆ ಬೆಳೆಯಲು ಉತ್ತೇಜಿಸಲು ರೈತರಿಗೆ ಬೀಜದ ಕಿರುಪೊಟ್ಟಣಗಳನ್ನು ಉಚಿತವಾಗಿ ವಿತರಿಸಲಾಗುವುದು.

    | ಡಾ. ರವಿ ಸಾಲಿಗೌಡರ ಉಪ ನಿರ್ದೇಶಕ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts