ಮೇವಿಗೆ ಬರ?

| ವಿಲಾಸ ಮೇಲಗಿರಿ ಬೆಂಗಳೂರು

ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 156 ತಾಲೂಕುಗಳು ಬರಪೀಡಿತ. ಬರ ಪರಿಹಾರಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಸ್ತುತ ರಾಜ್ಯದಲ್ಲಿ 82 ಲಕ್ಷ ಟನ್ ಮೇವು ಮಾತ್ರ ಲಭ್ಯವಿದೆ. ಇದು 18 ವಾರಗಳಿಗೆ ಮಾತ್ರ ಸಾಲುತ್ತದೆ!

ಜಿಲ್ಲಾವಾರು ಲೆಕ್ಕ ತೆಗೆದುಕೊಂಡರೆ ಗದಗ, ಬಳ್ಳಾರಿ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ 10 ವಾರಕ್ಕೂ ಕಡಿಮೆ ಆಗುವಷ್ಟು ಮೇವಿದೆ.

ಮೇವಿನ ಸಮಸ್ಯೆ ತಲೆದೋರಬಾರದೆಂದು ಪಶು ಸಂಗೋಪನಾ ಇಲಾಖೆ ರೈತರಿಗೆ 8.11 ಲಕ್ಷ ಮೇವು ಬಿತ್ತನೆ ಬೀಜದ ಮಿನಿ ಕಿಟ್ ವಿತರಿಸಿದ್ದು, ಇದರಿಂದ 30 ಲಕ್ಷ ಟನ್ ಹಸಿರು ಮೇವು ದೊರೆಯುವ ನಿರೀಕ್ಷೆಯಲ್ಲಿದೆ. ಈ ಮೇವು ಲಭ್ಯವಾದರೆ ಫೆಬ್ರವರಿ ಅಂತ್ಯದವರೆಗೆ ಮೇವಿನ ಸಮಸ್ಯೆ ಉಂಟಾಗದು. ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಮೇವಿಗಾಗಿ ಟೆಂಡರ್ ಕರೆಯಲಾಗಿದೆ. ರಾಯಚೂರು, ಬಳ್ಳಾರಿಯಲ್ಲಿ ಮೇವನ್ನು ಕಂತೆ ಕಟ್ಟಿ ಇಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 10 ಮೆ.ಟನ್ ಕಾಪು ದಾಸ್ತಾನಿದೆ.

ಮಿನಿ ಕಿಟ್​ಗಳ ವಿತರಣೆ: ವಿಪತ್ತು ನಿರ್ವಹಣಾ ನಿಧಿಯಿಂದ 10 ಕೋಟಿ ರೂ.ವೆಚ್ಚದಲ್ಲಿ 4 ಲಕ್ಷ ಮೇವು ಬೆಳೆಯ ಮಿನಿ ಕಿಟ್ ಕೊಡುತ್ತಿದ್ದು, ಇದರಿಂದ ಏಪ್ರಿಲ್ ವೇಳೆಗೆ 20 ಲಕ್ಷ ಟನ್ ಹಸಿರು ಮೇವು ದೊರೆಯುವುದಾಗಿ ಅಂದಾಜಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ 2.8 ಕೋಟಿ ರೂ.ವೆಚ್ಚದಲ್ಲಿ 72 ಸಾವಿರ ಮಿನಿ ಕಿಟ್ ಕೊಡುತ್ತಿದ್ದು, ಈ ಮೇವು ಮೇ ತಿಂಗಳಲ್ಲಿ ದೊರೆಯಲಿದೆ. ಮಿನಿ ಕಿಟ್​ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಸಹಕಾರ ಸಂಘಗಳಿಗೆ ಗ್ರಾಮ ಪಂಚಾಯಿತಿ ಮೂಲಕ ಕೊಡಲಾಗುತ್ತಿದೆ. ಜತೆಗೆ ರಾಸುಗಳ ಪಾಲನೆ ಸಮಸ್ಯೆಯಾದರೆ ಪ್ರತಿ ಹೋಬಳಿಗೆ ಒಂದರಂತೆ ಮೇವು ಬ್ಯಾಂಕ್, ಗೋಶಾಲೆ ಸ್ಥಾಪಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅಲ್ಲದೆ, ಹೊರ ರಾಜ್ಯಗಳಿಗೆ ಮೇವು ಮಾರಾಟ ನಿರ್ಬಂಧಿಸಲಾಗಿದೆ.

ಜಲ ಕೃಷಿಗೂ ಪ್ರೋತ್ಸಾಹ: ಜಲ ಕೃಷಿ ಮೇವು ಉತ್ಪಾದನೆಯಲ್ಲಿ ಮುಸುಕಿನ ಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ವರ್ಷ ಯೋಜನೆಗೆ ಬಜೆಟ್​ನಲ್ಲಿ 3 ಕೋಟಿ ರೂ. ಮೀಸಲಿಡಲಾಗಿದೆ. 70 ಸಾವಿರ ರೂ. ವೆಚ್ಚದ ಜಲ ಕೃಷಿ ಮೇವು ಘಟಕ ಸ್ಥಾಪನೆಗೆ ಸಾಮಾನ್ಯ ವರ್ಗಕ್ಕೆ 17,500 ರೂ., ಪರಿಶಿಷ್ಟರಿಗೆ 63 ಸಾವಿರ ರೂ. ಸಹಾಯ ಧನ ನೀಡಲಾಗುತ್ತದೆ. ಈ ಸೌಲಭ್ಯ ರಾಜ್ಯದ 485 ಫಲಾನುಭವಿಗಳಿಗೆ ದೊರೆಯಲಿದೆ.

ಮೇವು ಬ್ಯಾಂಕ್ ಮೊದಲ ಆದ್ಯತೆ

ಮೊದಲ ಆದ್ಯತೆ ಮೇವಿನ ಬ್ಯಾಂಕ್ ಆಗಿದ್ದು, 2 ರೂ.ಗೆ ಕೆಜಿಯಂತೆ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ಒದಗಿಸಲಾಗುತ್ತದೆ. ಮೇವು ಬ್ಯಾಂಕ್ ಹಾಗೂ ಗೋ ಶಾಲೆಯ ಅಗತ್ಯತೆಯನ್ನು ಸ್ಥಳೀಯ ಪರಿಸ್ಥಿತಿ ಆಧರಿಸಿ ಜಿಲ್ಲಾಡಳಿತ ನಿರ್ಧರಿಸಲಿದೆ. ರಾಜ್ಯದಲ್ಲಿ ಅನುದಾನ ಪಡೆಯುವ ಒಟ್ಟು 44 ಗೋ ಶಾಲೆಗಳಿದ್ದು, ಈವರೆಗೆ 26ಕ್ಕೆ ಅನುದಾನ ನೀಡಲಾಗಿದೆ. ಇನ್ನು 2 ತಿಂಗಳಲ್ಲಿ 10-12 ಗೋ ಶಾಲೆಗೆ ಅನುದಾನ ಕೊಡಲಾಗುತ್ತದೆ.

ಸರಾಸರಿ 18 ವಾರಗಳಿಗಾಗುವಷ್ಟು ಮೇವು ನಮ್ಮಲ್ಲಿದೆ. ಬರ ಮುಂದುವರಿದರೆ ಮೇವಿನ ಸಮಸ್ಯೆ ನೀಗಿಸಲು ಬೇಕಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ರಾಜ್ಯದಲ್ಲಿ ಮೇವಿನ ಗಂಭೀರ ಸಮಸ್ಯೆಯಿಲ್ಲ.

| ಡಾ.ಎಂ.ಟಿ.ಮಂಜುನಾಥ್ ನಿರ್ದೇಶಕ, ಪಶು ಸಂಗೋಪನಾ ಇಲಾಖೆ