ಮುಂಬೈ: ೆಬ್ರವರಿ 19ರಂದು ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿಯಾಗಿ ಭಾರತ ತಂಡ ಶನಿವಾರ ರಾತ್ರಿ ದುಬೈ ತಲುಪಿತು. ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ರೋಹಿತ್ ಶರ್ಮ ಪಡೆಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಶುಭಹಾರೈಸಿ ಬೀಳ್ಕೊಡುಗೆ ನೀಡಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಕ್ಲೀನ್‌ಸ್ವೀಪ್‌ನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಕೋಚ್ ಗೌತಮ್ ಗಂಭೀರ್, ಉಪನಾಯಕ ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಮೊಹಮದ್ ಶಮಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶ್ರೇಯಸ್ ಅಯ್ಯರ್ ಸಹಿತ ಸಹಾಯಕ ತರಬೇತಿ ಬಳಗದ ಬಹುತೇಕರು ಒಂದೇ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ರೋಹಿತ್ ಶರ್ಮ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಳಿಕ ತಂಡ ಕೂಡಿಕೊಂಡರು. ಕಳೆದ ವರ್ಷ ಜೂನ್‌ನಲ್ಲಿ ಟಿ20 ವಿಶ್ವಕಪ್ ಜಯದ ಬಳಿಕ ಮತ್ತೊಂದು ಐಸಿಸಿ ಟ್ರೋಫಿ ನಿರೀಕ್ಷೆಯಲ್ಲಿ ಆಟಗಾರರು ಮುಂಬೈನಿಂದ ಮಧ್ಯಾಹ್ನ ನಿಗದಿಯಾಗಿದ್ದ ದುಬೈ ವಿಮಾನ ಏರಿದರು. ವೇಗಿ ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಭಾರತ ತಂಡ ೆ.20ರಂದು ಬಾಂಗ್ಲಾದೇಶ ಎದುರು ತನ್ನ ಮೊದಲ ಪಂದ್ಯವನ್ನಾಡಲಿದ್ದು, ಟಿ20 ವಿಶ್ವಕಪ್ ವಿಜಯದ ಬಳಿಕ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ರೋಹಿತ್, ಕೊಹ್ಲಿಗೆ ಕೊನೇ ಅವಕಾಶ?
ಭಾರತ ತಂಡದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಕೊನೆಯ ಐಸಿಸಿ ಟೂರ್ನಿ ಎಂದು ವರದಿಯಾಗಿದೆ. 2024ರ ಜೂನ್‌ನಲ್ಲಿ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಟ್ರೋಫಿಯನ್ನು ಹೆಗಲ ಮೇಲೆ ಎತ್ತಿಕೊಂಡು ಭಾರತಕ್ಕೆ ಬಂದಿಳಿದ ದೃಶ್ಯ ಹಾಗೂ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಜಯೋತ್ಸವದ ದೃಶ್ಯಗಳು ಮತ್ತೊಮ್ಮೆ ಪುನರಾರ್ವತನೆಗೊಳ್ಳಲು ರೋಹಿತ್, ಕೊಹ್ಲಿ ಆಟ ನಿರ್ಣಾಯಕ ಎನಿಸಿದೆ.
ರೋಹಿತ್, ಕೊಹ್ಲಿ 2024ರ ಟಿ20 ಏಕದಿನ ವಿಶ್ವಕಪ್ ಬಳಿಕ ಸೀಮಿತ ಓವರ್ ಸೇರಿ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸಿದರು. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಶತಕ ಸಿಡಿಸಿರುವ ರೋಹಿತ್, ಅಹಮದಾಬಾದ್‌ನಲ್ಲಿ 73ನೇ ಏಕದಿನ ಅರ್ಧಶತಕ ಗಳಿಸಿದ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ಇದು ಅಭಿಮಾನಿಗಳ ಜತೆಗೆ ಇವರಿಬ್ಬರಿಗೂ ತಾತಾಲ್ಕಿಕವಾಗಿ ಸಮಾಧಾನ ಮೂಡಿಸಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿ ಹಾಗೂ 2027ರ ಏಕದಿನ ವಿಶ್ವಕಪ್‌ಗೆ ಭವಿಷ್ಯದ ತಂಡ ಕಟ್ಟಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಲು ಕೊಹ್ಲಿಗೆ 37 ರನ್ ಅಗತ್ಯವಿದ್ದು, ರೋಹಿತ್ ಶರ್ಮ 11 ಸಾವಿರ ರನ್‌ಗಳಿಂದ ಕೇವಲ 12 ರನ್ ದೂರದಲ್ಲಿದ್ದಾರೆ.