ಮಾಲ್ಡೀವ್ಸ್ ಅಧ್ಯಕ್ಷರಿಗೆ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರವಿರುವ ಬ್ಯಾಟ್​ ಗಿಫ್ಟ್​ ನೀಡಿ ಪ್ರಧಾನಿ ಮೋದಿ ಹೇಳಿದ್ದೇನು?​

ಮಾಲೆ: ಕ್ರಿಕೆಟ್​ ಉತ್ತೇಜನದೊಂದಿಗೆ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬೆಸೆಯಲು ಸಹಕಾರಿಯಾಗುವ ಕ್ರೀಡೆಯನ್ನು ಅಭಿವೃದ್ಧಿ ಪಡಿಸುವ ಮಾಲ್ಡೀವ್ಸ್​ ಅಧ್ಯಕ್ಷ ಇಬ್ರಾಹಿಂ ಮೊಹಮದ್​ ಸೊಲಿಹ್ ಅವರ ಗುರಿಯನ್ನು ಈಡೇರಿಸಲು ಭಾರತ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಇಂದು(ಶನಿವಾರ) ದ್ವೀಪ ರಾಷ್ಟ್ರ ಮಾಲ್ಡೀವ್ಸ್​ಗೆ ಭೇಟಿ ನೀಡಿದರು.

ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರವಿರುವ ಬ್ಯಾಟ್​ ಅನ್ನು ಮಾಲ್ಡೀವ್ಸ್​ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು. ಕ್ರೀಡಾ ಉತ್ತೇಜನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ ಪ್ರಧಾನಿ, ದೇಶಗಳ ನಡುವಿನ ಸಂಬಂಧ ಬೆಸೆಯಲು ಕ್ರೀಡೆ ಸಹಕಾರಿಯಾಗಲಿದ್ದು, ಕ್ರಿಕೆಟ್​ ಅನ್ನು ರಾಜತಾಂತ್ರಿಕ ನಡೆಯನ್ನಾಗಿ ಪ್ರಧಾನಿ ಬಳಸಿಕೊಂಡರು.

ನನ್ನ ಸ್ನೇಹಿತ ಸೊಲಿಹ್ ಅವರು ಬಹುದೊಡ್ಡ ಕ್ರಿಕೆಟ್​ ಅಭಿಮಾನಿಯಾಗಿದ್ದು, ಪ್ರಸ್ತುತ ವಿಶ್ವಕಪ್ ಆಡುತ್ತಿರುವ​ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ಬ್ಯಾಟ್​ ಅನ್ನು ಈ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ನೆರೆಹೊರೆಯ ರಾಷ್ಟ್ರಗಳು ಮೊದಲು ಎಂಬ ನೀತಿಗೆ ಅನುಗುಣವಾಗಿ ಇಂದು ಮಾಲ್ಡೀವ್ಸ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ನಾಳೆ(ಭಾನುವಾರ) ಶ್ರೀಲಂಕಾಕ್ಕೆ ತೆರಳಲಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *