ಸಾಗರ: ಯಾರಿಂದಲೂ ಕಸಿದುಕೊಳ್ಳಲಾಗದ ಸಂಪತ್ತು ಎಂದರೆ ವಿದ್ಯೆ. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳು ವಿದ್ಯಾಭ್ಯಾಸ ಸಂದರ್ಭದಲ್ಲಿ ಹೆಚ್ಚು ಕಾಳಜಿಯಿಂದ ತೊಡಗಿಸಿಕೊಳ್ಳಬೇಕು ಎಂದು ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ವಿ.ನವೀನ್ ಹೇಳಿದರು.
ತಾಲೂಕಿನ ಕೋಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ನಮ್ಮ ಶಾಲೆ- ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಪ್ರತಿ ಮಗುವೂ ತಪ್ಪದೆ ಶಾಲೆಗೆ ಹಾಜರಾಗಬೇಕು. ಪಾಲಕರು ಸಹ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸುತ್ತ ಇರಬೇಕು. ಶಿಕ್ಷಣ ಸಾಮೂಹಿಕ ಜವಾಬ್ದಾರಿ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಸಮುದಾಯ ಹಾಗೂ ಪಾಲಕರು ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೊಣೆ ನಮ್ಮೆಲ್ಲರ ಮೇಲಿದೆ. ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಉತ್ತಮ ಶಿಕ್ಷಕರು, ಪೂರಕ ಶೈಕ್ಷಣಿಕ ವಾತಾವರಣ, ಸರ್ಕಾರದ ಅನೇಕ ಸವಲತ್ತು ಶಾಲೆಗಳಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ತಾಪಂ ಇಒ ಶಿವಪ್ರಕಾಶ್, ಬಿಇಒ ಪರಶುರಾಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್, ಪ್ರಮುಖರಾದ ಸುವರ್ಣಾ ಟೀಕಪ್ಪ, ಸುಮಿತ್ರಮ್ಮ, ನಾಗರಾಜ ಹೆಗಡೆ, ದೇವೇಂದ್ರಪ್ಪ, ಕೆ.ಜಗನ್ನಾಥ್, ಚೈತ್ರಾ, ಮನೋಹರಪ್ಪ, ಭೂಮೇಶ್, ರಾಜಭಕ್ಷ್, ರವಿಕುಮಾರ್ ಇತರರಿದ್ದರು.
