ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಕಂಡುಬಂದ ನೊರೆ!

ಕೆ.ಆರ್.ಪುರ: ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ.

ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಿದ್ದ ದೃಶ್ಯವೀಗ ಬೇಸಿಗೆಯಲ್ಲಿಯೇ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ನೊರೆ ತೀವ್ರ ಘಾಟು ಹೊಂದಿರು ವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆಯೂ ಪರಿಣಾಮ ಬೀರುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ, ಬಿಬಿಎಂಪಿ ಮತ್ತು ಜಲಮಂಡಳಿಗಳು ಕೂಡಲೇ ಎಚ್ಚೆತ್ತುಕೊಂಡು ಕೆರೆ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದ್ದಾರೆ.

900 ಎಕರೆ ಪ್ರದೇಶದಲ್ಲಿರುವ ಬೆಳ್ಳಂದೂರು ಕೆರೆಗೆ ರಾಜಧಾನಿಯ ಶೇ. 40 ತ್ಯಾಜ್ಯ ಹರಿದುಬರುತ್ತದೆ ಎಂದು ಅಂದಾಜಿಸಲಾಗಿದೆ.ಅದರ ಪರಿಣಾಮವೇ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಳ್ಳುತ್ತದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲು ಇತ್ತೀಚೆಗೆ ಯೋಜನೆ ಆರಂಭಿಸಿದಾಗ ಕೆರೆಗೆ ಒಳಹರಿವು ಕಡಿಮೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು. ಆದರೆ ಆ ಜಿಲ್ಲೆಗಳಿಗೂ ನೊರೆ, ವಿಷನೀರು ಹರಿಯುವುದು ಬೇಡ ಎಂಬ ಕಾರಣಕ್ಕೆ ಕೆಲವರು ಕೋರ್ಟ್ ಮೊರೆ ಹೋಗಿರುವುದರಿಂದ ಅದಕ್ಕೆ ತಡೆ ನೀಡಲಾಗಿದೆ. ಹೀಗಾಗಿ ಕೆರೆಯ ಒಳಹರಿವು ಮತ್ತೆ ಹೆಚ್ಚಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ನೊರೆ ಕಾಟ ಆರಂಭಗೊಂಡಿದೆ.

ಮಳೆಗಾಲದ ಸಿದ್ಧತೆಯನ್ನು ಬಿಬಿಎಂಪಿ ಕೈಗೊಳ್ಳುವುದಾಗಿ ಹೇಳಿದೆ. ಬೆಳ್ಳಂದೂರು ನೊರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಕೆರೆಯನ್ನು ಯಾವ ರೀತಿ ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಮಸ್ಯೆಗೆ ನೆರವಾಗುತ್ತಿಲ್ಲ

ಮಳೆಗಾಲದ ಪೂರ್ವದಲ್ಲಿ ನೊರೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಸಮಸ್ಯೆ ಹೆಚ್ಚಾಗುತ್ತಿದೆ. ಸ್ಥಳೀಯ ಪ್ರಾಧಿಕಾರಗಳಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಮತದಾನದ ಪೂರ್ವದಲ್ಲಿ ಜನಪ್ರತಿನಿಧಿಗಳು ಸಮಸ್ಯೆ ಆಲಿಸುತ್ತಿದ್ದರು. ಈಗ ಯಾರೊಬ್ಬರೂ ನಮ್ಮ ಸಮಸ್ಯೆಗೆ ನೆರವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *