Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ನಮ್ಮ ಮೆಟ್ರೋಗೆ ಲೋಕಲ್ ಟ್ರೖೆನ್ ಸಾಥ್

Friday, 02.02.2018, 3:05 AM       No Comments

ರೈಲ್ವೆ ಇಲಾಖೆಗೆ ಈ ಬಾರಿ ಬಜೆಟ್​ನಲ್ಲಿ ನೀಡಲಾಗಿರುವ 1.48 ಲಕ್ಷ ಕೋಟಿ ರೂ. ಅನುದಾನ ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಕಳೆದ ಬಾರಿ 1.31 ಲಕ್ಷ ಕೋಟಿ ರೂ. ಅನುದಾನ ಘೊಷಿಸಲಾಗಿತ್ತು. ಜತೆಗೆ ರೈಲು ಹಾಗೂ ನಿಲ್ದಾಣಗಳಲ್ಲಿ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದಾಗಿ ಪ್ರಕಟಿಸಲಾಗಿದೆ. ಟಿಕೆಟ್ ದರ ಏರಿಳಿತವಿಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಘೊಷಿಸಲಾದ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಜತೆಗೆ, ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ರೈಲು ಜಾಲದ ಬಲವರ್ಧನೆ, ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು ದೊರೆತಿದೆ.

ಬೆಂಗಳೂರಿನ ಹಲವು ದಶಕಗಳ ಕನಸಾದ ಉಪನಗರ (ಸಬ್​ಅರ್ಬನ್) ರೈಲು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಮೊಟ್ಟ ಮೊದಲ ಬಾರಿಗೆ ಬಜೆಟ್​ನಲ್ಲಿ ಯೋಜನೆ ಅನುಷ್ಠಾನ ಘೋಷಿಸುವುದರ ಮೂಲಕ ಬೆಂಗಳೂರಿಗರಿಗೆ ದೊಡ್ಡ ಕೊಡುಗೆ ನೀಡಿದೆ.

ನಗರದ ಅಭಿವೃದ್ಧಿಗೆ ಪೂರಕವಾಗುವಂತೆ ಅಂದಾಜು 17 ಸಾವಿರ ಕೋಟಿ ರೂ. ವೆಚ್ಚದ 160 ಕಿಮೀ ಉಪನಗರ ರೈಲು ಜಾಲದ ಯೋಜನೆ ರೂಪಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ. ಆದರೆ, ಯೋಜನಾ ವೆಚ್ಚ ಹಂಚಿಕೆಯ ಕುರಿತು ನಿಖರ ಅಂಕಿ-ಅಂಶವನ್ನು ಬಜೆಟ್​ನಲ್ಲಿ ಉಲ್ಲೇಖಿಸಿಲ್ಲ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಡಿ.ವಿ.ಸದಾನಂದಗೌಡ ರೈಲ್ವೆ ಸಚಿವರಾಗಿದ್ದಾಗ ಮಂಡಿಸಿದ ಬಜೆಟ್​ನಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತ ರೈಲು ಜಾಲ ವಿಸ್ತರಣೆಗೆ ಅಗತ್ಯ ಅಧ್ಯಯನ ನಡೆಸಲಾಗುವುದು ಎಂದಿದ್ದರು. ಆದರೆ ಯೋಜನೆ ಅನುಷ್ಠಾನ ಘೋಷಿಸಿರಲಿಲ್ಲ.

ಕೇಂದ್ರ ಬಜೆಟ್​ನಲ್ಲಿ ಉಪನಗರ ರೈಲು ಯೋಜನೆ ಘೋಷಣೆಯ ಮುನ್ಸೂಚನೆ ರಾಜ್ಯ ಸರ್ಕಾರಕ್ಕೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಯೋಜನೆಯ ಮೊದಲ ಹಂತದ 1,745 ಕೋಟಿ ರೂ. ವೆಚ್ಚದ ಪೈಕಿ ತನ್ನ ಪಾಲಿನ ಶೇ. 20 ಪಾಲು (349 ಕೋಟಿ ರೂ.) ನೀಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿತ್ತು.

3 ಹಂತದಲ್ಲಿ ಯೋಜನೆ ಅನುಷ್ಠಾನ: ಉಪನಗರ ರೈಲು ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಡೆಮು ರೈಲುಗಳನ್ನು ಮೆಮು ರೈಲಾಗಿ ಪರಿವರ್ತಿಸಲು 615 ಕೋಟಿ ರೂ, ಎರಡನೇ ಹಂತದ ಕಾಮಗಾರಿಗೆ 1,812 ಕೋಟಿ ರೂ. ಮತ್ತು 8,502 ಕೋಟಿ ರೂ. ವೆಚ್ಚದಲ್ಲಿ 3 ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಹೊಂದಲಾಗಿದೆ.

ಮೊದಲ ಹಂತ

ಮೊದಲ ಹಂತದಲ್ಲಿ 160 ಕಿ.ಮೀ. ಉಪನಗರ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-ಯಶವಂತಪುರ- ಯಲಹಂಕ-ಚನ್ನಸಂದ್ರ- ಬೈಯಪ್ಪನಹಳ್ಳಿ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(45 ಕಿ.ಮೀ.), ಲೊಟ್ಟಗೊಲ್ಲಹಳ್ಳಿ-ಹೆಬ್ಬಾಳ- ಬಾಣಸವಾಡಿ-ಬೈಯಪ್ಪನಹಳ್ಳಿ(15 ಕಿ.ಮೀ), ಹಾಗೂ ಬೈಯಪ್ಪನಹಳ್ಳಿ- ವೈಟ್​ಫೀಲ್ಡ್, ಯಶವಂತಪುರ-ಚಿಕ್ಕಬಾಣಾವರ-ನೆಲಮಂಗಲ, ಯಲಹಂಕ-ರಾಜಾನುಕುಂಟೆ, ಯಲಹಂಕ-ದೇವನಹಳ್ಳಿ, ಕೆಎಸ್​ಆರ್ ಬೆಂಗಳೂರು-ಕೆಂಗೇರಿ(ಒಟ್ಟು 100 ಕಿ.ಮೀ.) ಜಾಲವಿದೆ. ಭೂಸ್ವಾಧೀನ ಸಮಸ್ಯೆ ಎದುರಾದಲ್ಲಿ ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ವಿುಸಲು ನಿರ್ಧರಿಸಲಾಗಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾರೆ.

ಸಮನ್ವಯ ಕೊರತೆ, ಗೊಂದಲ

2012ರಲ್ಲಿ ರೈಟ್ಸ್ ಸಂಸ್ಥೆ ತಯಾರಿಸಿದ್ದ ಕಾರ್ಯಸಾಧ್ಯತಾ ವರದಿ ಅನ್ವಯ ಬೆಂಗಳೂರು ನಗರಕ್ಕೆ 10,929 ಕೋಟಿ ರೂ. ವೆಚ್ಚದ 440.8 ಕಿಮೀ ಉಪನಗರ ರೈಲು ಮಾರ್ಗದ ಉಲ್ಲೇಖವಿತ್ತು. ಆದರೆ, ಬಜೆಟ್​ನಲ್ಲಿ ಕೇವಲ 160 ಕಿಮೀ ಜಾಲ ಮತ್ತು ಇದಕ್ಕೆ 17 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಉಲ್ಲೇಖಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ನೂತನ ಉಪನಗರ ರೈಲು ನೀತಿ ಅನ್ವಯ ಯೋಜನಾ ವೆಚ್ಚದ ಶೇ. 40 ಪಾಲನ್ನು ರೈಲ್ವೆ ಹಾಗೂ ರಾಜ್ಯ ಸರ್ಕಾರ ಭರಿಸಿದರೆ, ಉಳಿದ ಶೇ. 60ರಷ್ಟು ಹಣವನ್ನು ಇದಕ್ಕೆಂದೇ ರಚನೆಯಾಗುವ ಪ್ರತ್ಯೇಕ ಸಂಸ್ಥೆ (ಸ್ಪೆಷಲ್ ಪರ್ಪಸ್ ವೆಹಿಕಲ್) ಭರಿಸಬೇಕು. ಇದರ ಸ್ಪಷ್ಟ ನಿಲುವೂ ಪ್ರಕಟವಾಗಿಲ್ಲ.

ನಗರದಲ್ಲಿ ಈಗಾಗಲೇ ಇರುವ ರೈಲು ಜಾಲ ವಿಸ್ತರಣೆಗೆ ತೊಡಕುಗಳಿದ್ದು, ಮೆಟ್ರೋ ಮಾದರಿಯಲ್ಲಿ ಈಗಿರುವ ರೈಲು ಹಳಿಗಳ ಮೇಲೆಯೇ ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ವಿುಸಿ ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಇದು ಯೋಜನಾ ವೆಚ್ಚ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ ಸಚಿವ ಪಿಯೂಷ್ ಗೋಯಲ್, ನಗರದಲ್ಲಿ ಲಭ್ಯವಿರುವ 108 ಕಿಮೀ ರೈಲು ಜಾಲದಲ್ಲಿ ಉಪನಗರ ರೈಲು ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈಗಾಗಲೇ ಇರುವ ರೈಲು ಹಳಿಗಳ ಮೇಲೆ ಎಲಿವೇಟೆಡ್ ಮಾರ್ಗ ನಿರ್ವಣದ ಕುರಿತು ಪ್ರಸ್ತಾವನೆಯಲ್ಲಿ ಉಲ್ಲೇಖವಿದ್ದು, ಇದು ಹಣಕಾಸು ಇಲಾಖೆ ಮತ್ತು ರೈಲ್ವೆ ಬೋರ್ಡ್ ಮುಂದಿದೆ ಎಂದಿದ್ದರು.

ವಡೋದರದಲ್ಲಿ ರೈಲ್ವೆ ವಿವಿ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಸಿಬ್ಬಂದಿ ತರಬೇತಿಗಾಗಿ ವಡೋದರದಲ್ಲಿ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ನ್ಯಾಷನಲ್ ಹೈಸ್ಪೀಡ್ ರೈಲ್ ಕಾಪೋರೇಷನ್​ಗೆ ಸೇರಿದ 5 ಹೆಕ್ಟೇರ್ ಜಾಗದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಚಲಿಸುವ ಬುಲೆಟ್ ರೈಲುಗಳ ಪರೀಕ್ಷೆಗೆ ತರಬೇತಿ ಕೇಂದ್ರವು ಓವರ್​ಹೆಡ್ ವಿದ್ಯುತ್ ಸಂಪರ್ಕವಿರುವ ಮಾದರಿ ಟ್ರ್ಯಾಕ್ ಹೊಂದಿರಲಿದೆ.

ಮುಂಬೈ ಉಪನಗರ ರೈಲು ವಿಸ್ತರಣೆ

ಮುಂಬೈನ ಜೀವನಾಡಿಯಾಗಿರುವ ಲೋಕಲ್ ರೈಲು ಜಾಲ ವಿಸ್ತರಣೆಗೆ ಈ ಬಾರಿ ಮಹತ್ವ ನೀಡಲಾಗಿದೆ. ಈಗಿರುವ ಜೋಡಿ ಹಳಿಗಳನ್ನು 11,000 ಕೋಟಿ ರೂ. ವೆಚ್ಚದಲ್ಲಿ 90 ಕಿಮೀ. ನಷ್ಟು ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಇದಲ್ಲದೆ 150 ಕಿಮೀ. ಹೊಸ ರೈಲು ಮಾರ್ಗ ನಿರ್ವಿುಸಲಾಗುತ್ತಿದೆ. ಇದರಲ್ಲಿ ಸಾಮಾನ್ಯ ರೈಲು ಹಳಿಗಳ ಜತೆಗೆ ಎತ್ತರಿಸಿದ ಮಾರ್ಗವೂ (ಎಲಿವೆಟೇಡ್) ಇರಲಿದೆ. ಇದಕ್ಕೆ 40,000 ಕೋಟಿ ರೂ. ಮೀಸಲಿಡಲಾಗಿದೆ.

700 ಇಂಜಿನ್ ಹೊಂದುವ ಗುರಿ

ಪೂರ್ವ ಮತ್ತು ಪಶ್ಚಿಮ ರೈಲ್ವೆ ವಲಯದಲ್ಲಿ ನಿರ್ವಿುಸಲಾಗುತ್ತಿರುವ ಪ್ರತ್ಯೇಕ ಸರಕು ಸಾಗಣೆ ರೈಲು ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ. ರೈಲ್ವೆ ಇಲಾಖೆಗೆ ಅಗತ್ಯವಾದ ಯಂತ್ರೋಪಕರಣಗಳ ಉತ್ಪಾದನೆಗೆ ವಿಶೇಷ ಕ್ರಮ ಕೈಗೊಳ್ಳ ಲಾಗುತ್ತಿದೆ. 2018-19 ನೇ ಸಾಲಿನಲ್ಲಿ 12,000 ಸರಕು ಸಾಗಣೆ ಬೋಗಿ, 5160 ಪ್ರಯಾಣಿಕರ ಬೋಗಿ, ಹಾಗೂ 700 ಇಂಜಿನ್​ಗಳನ್ನು ಹೊಂದುವ ಗುರಿಯಿದ್ದು, ಗೂಡ್ಸ್​ಶೆಡ್​ಗಳಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ.

 

 

 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಉಪನಗರ ರೈಲು ಯೋಜನೆಗೆ ಹೆಜ್ಜೆ ಇಟ್ಟಿರುವುದು ಆಶಾಭಾವನೆ ಮೂಡಿಸಿದೆ. ಶೀಘ್ರವೇ ಪ್ರತ್ಯೇಕ ಸಂಸ್ಥೆಯೊಂದನ್ನು ರಚಿಸಬೇಕು. ರೈಲ್ವೆ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಹಂಚಿಕೆಯಾಗಬೇಕು.

| ಕೃಷ್ಣ ಪ್ರಸಾದ್ ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ

ಉಪನಗರ ರೈಲು ಯೋಜನೆಗೆ ಮಹತ್ವ ನೀಡಿರುವುದು ಬೆಂಗಳೂರು ನಗರದ ಟ್ರಾಫಿಕ್ ದಟ್ಟಣೆಗೆ ಪರಿಹಾರವಾಗಲಿದೆ. ನಗರ ಕೇಂದ್ರದಿಂದ ವೈಟ್​ಫೀಲ್ಡ್​ಗೆ ರೈಲು ಸಂಚಾರ ಆರಂಭವಾಗಲಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ.

ಡಾ.ಸಿ. ಪೂರ್ಣಚಂದ್ರ ರಾವ್ ವೈಟ್​ಫೀಲ್ಡ್ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ

2022ರೊಳಗಾಗಿ ಎಲ್ಲರಿಗೂ ಸೂರು, ಆರೋಗ್ಯ ವಿಮೆ ಯೋಜನೆ ಅತ್ಯದ್ಭುತ. ರೈತರ ಆದಾಯ ದುಪ್ಪಟ್ಟುಗೊಳಿಸುವ ಕ್ರಮ ಅಭಿನಂದನಾರ್ಹ. ಐದು ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಉತ್ತಮ ಕೊಡುಗೆ. ಬೆಂಗಳೂರು ಉಪನಗರ ರೈಲ್ವೆ ಮಾರ್ಗಕ್ಕೆ ಅನುಮೋದನೆ ಸಿಕ್ಕಿರುವುದು ಸಂತಸದ ಸಂಗತಿ.

| ಬಿ.ಎಸ್. ಯಡಿಯೂರಪ್ಪ ಸಂಸದ, ಮಾಜಿ ಸಿಎಂ

ಮೂಲಸೌಕರ್ಯಗಳಿಗೆ ಆದ್ಯತೆ ನೀಡಿರುವುದು ದೇಶದ ಪ್ರಗತಿಗೆ ಸಹಕಾರಿ. ವೈಯಕ್ತಿಕ ಆದಾಯದ ಮೇಲಿನ ತೆರಿಗೆ ಹೆಚ್ಚಳ ಬದಲಿಗೆ ಸ್ಟಾ್ಯಂಡರ್ಡ್ ಡಿಡಕ್ಷನ್ ಪರಿಚಯಿಸಲಾಗಿದೆ. ಇದರಿಂದ ವೇತನದಾರರಿಗೆ ಅನುಕೂಲ. ಆದಾಯ, ಖರ್ಚನ್ನು ಸರಿದೂಗಿಸಿದ್ದು ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ.

| ಡಾ.ಕೆ. ಗಾಯತ್ರಿ ಆರ್ಥಿಕ ತಜ್ಞೆ


 ರೈಲ್ವೆಯಲ್ಲಿ ರಾಜ್ಯಕ್ಕೇನು?

ಹೊಸ ಮಾರ್ಗ

ಗಂಗಾವತಿ- ಕಾರಟಗಿ ನಡುವಿನ 28 ಕಿ.ಮೀ. ಮಾರ್ಗವನ್ನು 2018-19ನೇ ಸಾಲಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವಿದ್ಯುದೀಕರಣ ಯೋಜನೆ

# ಕಲಬುರಗಿ- ಅಕ್ಕಲಕೋಟ್​ನ 40 ಕಿಮೀ ಮಾರ್ಗ 2018-19ನೇ ಸಾಲಿನಲ್ಲಿ ಪೂರ್ಣಗೊಳ್ಳಲಿವೆ.

# ಗುಂತಕಲ್- ಕಲ್ಲೂರು 40 ಕಿಮೀ, ಮಿರಜ್- ಬೆಳಗಾವಿಯ 137 ಕಿಮೀ ಕೂಡ ಇದೇ ಅವಧಿಯಲ್ಲಿ ಮುಗಿಸಲಾಗುವುದು.


ಉತ್ತರ ಕರ್ನಾಟಕಕ್ಕೆ ನಿರಾಸೆ

| ಕುತುಬುದ್ದೀನ್ ಖಾಜಿ, ಬಾಗಲಕೋಟೆ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ

ರೈಲ್ವೆ ಬಜೆಟ್ ಅನ್ನು ಕೇಂದ್ರ ಮುಂಗಡಪತ್ರದಲ್ಲಿ ವಿಲೀನಗೊಳಿಸಿದ ಬಳಿಕ ರೈಲ್ವೆ ಸೇವೆ ಹಾಗೂ ಸೌಲಭ್ಯವನ್ನೇ ಕಡೆಗಣಿಸಲಾಗಿದೆ. ಬೆಂಗಳೂರು ಉಪನಗರ ಸೇರಿ ಕೆಲವು ವಿಷಯಗಳಿಗೆ ಮಾತ್ರ ಆದ್ಯತೆ ನೀಡಿದ್ದರೂ, ಉತ್ತರ ಕರ್ನಾಟಕ ಭಾಗದ ಬೇಡಿಕೆಗಳಾದ ಹುಬ್ಬಳ್ಳಿ-ಅಂಕೋಲಾ ಸೇರಿ ಅನೇಕ ಯೋಜನೆಗಳ ಪ್ರಸ್ತಾಪವೇ ಇಲ್ಲ. ಇದರಿಂದ ಎಂದಿನಂತೆ ಈ ಬಾರಿಯೂ ಉತ್ತರ ಕರ್ನಾಟಕ ಮಂದಿಗೆ ನಿರಾಸೆಯೇ ಆಗಿದೆ.

ಕೇಂದ್ರ ಮುಂಗಡಪತ್ರದಲ್ಲಿ ರೈಲ್ವೆಯನ್ನು ವಿಲೀನಗೊಳಿಸಿದಾಗ ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು, ಸೂಕ್ತ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅಂತಹ ಯಾವ ಯೋಜನೆಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬುದರ ಬಗ್ಗೆ ಪ್ರಸ್ತುತ ಮುಂಗಡಪತ್ರದಲ್ಲಿ ಸ್ಪಷ್ಟತೆ ಇಲ್ಲ. ಸರಿಯಾದ ಪ್ರಸ್ತಾಪವೂ ಇಲ್ಲವಾಗಿದೆ. ಇಂತಹ ಅಪಸವ್ಯಗಳನ್ನೆಲ್ಲ ಕಂಡಾಗ ವಿಲೀನಗೊಳಿಸುವ ಬದಲು ಹಿಂದೆ ಇದ್ದಂತೆ ಪ್ರತ್ಯೇಕ ರೈಲ್ವೆ ಆಯವ್ಯಯಪತ್ರವೇ ಇರಬೇಕಿತ್ತು ಎನಿಸುತ್ತದೆ.

ರೈಲ್ವೆ ಈಗಲೂ ಹೆಚ್ಚಿನ ಬಡವರು, ಮಧ್ಯಮ ವರ್ಗದವರ ಪ್ರೀತಿಯ ವಾಹನ. ಅವರಿಗೆ ಅನುಕೂಲ ಹೆಚ್ಚಿಸುವಂಥ, ನಿರ್ದಿಷ್ಟ ರೈಲು ಸಾರಿಗೆಯನ್ನು ಹೊಸದಾಗಿ ಆರಂಭಿಸುವಂಥ ಪ್ರಸ್ತಾವನೆ ಇಲ್ಲ. ರಾಜ್ಯ ಸರ್ಕಾರದ ಗರಿಷ್ಠ ಸಹಯೋಗ ಪಡೆದುಕೊಳ್ಳುವುದು, ಕಾಲಮಿತಿಯ ಅನುಷ್ಠಾನ ಸೇರಿ ಅನೇಕ ವಿಷಯದಲ್ಲಿ ಖಚಿತತೆ ಕಾಣುತ್ತಿಲ್ಲ. ಹೀಗಾಗಿ ಇದು ತೃಪ್ತಿಕರ (ರೈಲ್ವೆ) ಮುಂಗಡಪತ್ರ ಅಲ್ಲ ಎನ್ನಬೇಕಾಗುತ್ತದೆ. ನಿಲ್ದಾಣಗಳ ಉನ್ನತೀಕರಣ, ವೈ-ಫೈ, ವಿದ್ಯುದೀಕರಣ ಇತ್ಯಾದಿಯನ್ನು ಪ್ರಸ್ತಾಪಿಸಿದ್ದಕ್ಕಷ್ಟೇ ಸಮಾಧಾನಪಟ್ಟುಕೊಳ್ಳಬೇಕಿದೆ. ಬರೀ ಇಂಥದ್ದಕ್ಕಾಗಿ ಮುಖ್ಯ ಬಜೆಟ್​ನಲ್ಲಿ ವಿಲೀನಗೊಳಿಸಲಾಗಿದೆಯೆ ಎಂಬ ಪ್ರಶ್ನೆ ಕಾಡುವಂತಿದೆ.


ಬದಲಾಗಲಿದೆ ರೈಲು ನಿಲ್ದಾಣದ ಸ್ವರೂಪ

ರೈಲು ಹಾಗೂ ನಿಲ್ದಾಣಗಳಲ್ಲಿ ಸುರಕ್ಷತೆ-ಸವಲತ್ತುಗಳಿಗೆ ಈ ಬಾರಿ ಒತ್ತು ನೀಡಲಾಗಿದೆ. ವಿಶ್ವದರ್ಜೆಯ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ. 25 ಸಾವಿರಕ್ಕೂ ಅಧಿಕ ಪ್ರಯಾಣಿಕರ ದಟ್ಟಣೆ ಇರುವ ನಿಲ್ದಾಣಗಳ ಸ್ವರೂಪವೇ ಬದಲಾಗಲಿದ್ದು ಎಸ್ಕಲೇಟರ್, ಸಿಸಿ ಕ್ಯಾಮರಾ, ವೈ-ಫೈ ಅಳವಡಿಕೆಯಾಗಲಿದೆ.

# ‘ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶ’ದ ಮೂಲಕ ಅನುದಾನದ ಭರವಸೆ.

# ರೈಲುಮಾರ್ಗದಲ್ಲಿ ಅಳವಡಿಸಲಾಗಿರುವ ‘ನಿಯಂತ್ರಕ ಸಂಜ್ಞೆಗಳು’ ತೀವ್ರ ಮಂಜು ಮುಸುಕಿದ ವಾತಾವರಣದಿಂದಾಗಿ ಗೋಚರಿಸದಂತಾಗುವ ಸಂದರ್ಭದಲ್ಲಿ ಚಾಲಕರಿಗೆ ಎಚ್ಚರಿಸಲು ಬಳಸಲಾಗುವ ವ್ಯವಸ್ಥೆ (ಫಾಗ್ ಸೇಫ್), ರೈಲು ರಕ್ಷಣೆ ಮತ್ತು ಮುನ್ಸೂಚನೆ ವ್ಯವಸ್ಥೆಯಂಥ ತಂತ್ರಜ್ಞಾನದ ಬಳಕೆಯಲ್ಲಿ ಹೆಚ್ಚಳ.

#  2018-19ರ ವರ್ಷಾವಧಿಯಲ್ಲಿ 3,600 ಕಿ.ಮೀ.ಗೂ ಹೆಚ್ಚು ರೈಲುಮಾರ್ಗ ನವೀಕರಣ ಗುರಿ.

# ಅತ್ಯಾಧುನಿಕ ಸವಲತ್ತು-ಸಾಧನಗಳು ಮತ್ತು ವೈಶಿಷ್ಟ್ಯಳನ್ನು ಒಳಗೊಂಡಿರುವ ವಿನೂತನ ರೈಲುಗಳನ್ನು ಪೆರಂಬೂರಿನ ಇಂಟಿಗ್ರೇಟೆಡ್ ಕೋಚ್ ಕಾರ್ಖಾನೆಯಲ್ಲಿ ವಿನ್ಯಾಸಗೊಳಿಸಲಾಗುತ್ತಿದ್ದು, ಇಂಥ ಮೊದಲ ರೈಲು 2018-19ರಲ್ಲಿ ಸಂಚಾರಕ್ಕೆ ಅಣಿಯಾಗಲಿದೆ.

# ಬ್ರಾಡ್​ಗೇಜ್ ರೈಲುಮಾರ್ಗಗಳ ಜಾಲದಲ್ಲಿರುವ 4,267ರಷ್ಟು ಕಾವಲುರಹಿತ ಲೆವೆಲ್ ಕ್ರಾಸಿಂಗ್​ಗಳನ್ನು ಮುಂಬರುವ ಎರಡು ವರ್ಷಗಳಲ್ಲಿ ತೆಗೆದುಹಾಕುವ ಭರವಸೆ.

# 600 ಪ್ರಮುಖ ರೈಲು ನಿಲ್ದಾಣಗಳ ಮರು ಅಭಿವೃದ್ಧಿಯನ್ನು ‘ಇಂಡಿಯನ್ ರೇಲ್ವೆ ಸ್ಟೇಷನ್ ಡೆವಲಪ್​ವೆುಂಟ್ ಕಂಪನಿ ಲಿಮಿಟೆಡ್’ ಕೈಗೆತ್ತಿಕೊಂಡಿದ್ದು, 25,000ಕ್ಕೂ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಎಲ್ಲ ನಿಲ್ದಾಣಗಳಲ್ಲಿ ಎಸ್ಕಲೇಟರ್​ಗಳ ಅಳವಡಿಕೆಯಾಗಲಿದೆ.

# ಎಲ್ಲ ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಹಂತಹಂತವಾಗಿ ವೈ-ಫೈ ಸೌಲಭ್ಯ ಒದಗಿಸಲಾಗುವುದು.

# ಪ್ರಯಾಣಿಕರ ಸುರಕ್ಷತೆಗೆ ಇನ್ನೂ ಹೆಚ್ಚಿನ ಕ್ರಮವಾಗಿ ಎಲ್ಲ ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಕ್ಲೋಸ್ಡ್ ಸರ್ಕ್ಯೂಟ್(ಸಿಸಿ) ಕ್ಯಾಮರಾ ಸೌಲಭ್ಯವನ್ನು ಕಲ್ಪಿಸಲಾಗುವುದು.

ಹೊಸ ಮಾರ್ಗ, ಕೋಚ್ ನಿರ್ವಣಕ್ಕೆ ಸಿಂಹಪಾಲು

ರೈಲ್ವೆ ಮಾರ್ಗಗಳ ವಿಸ್ತರಣೆ ಮತ್ತು ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಕಡೆಗೆ ಹೆಚ್ಚು ಒತ್ತು ನೀಡಲಾಗಿರುವ ಈ ಬಾರಿಯ ಬಜೆಟ್​ನಲ್ಲಿ ಹೊಸ ಮಾರ್ಗಗಳಿಗಾಗಿ 28,490 ಕೋಟಿ ರೂ. ಮೀಸಲಿಡಲಾಗಿದೆ. ಉಳಿದಂತೆ ಗೇಜ್ ಪರಿವರ್ತನೆಗೆ 4,016 ಕೋಟಿ ರೂ., ಜೋಡಿ ಹಳಿ ನಿರ್ವಣಕ್ಕೆ 17359 ಕೋಟಿ ರೂ. ಮೊತ್ತ ನಿಗದಿಪಡಿಸಲಾಗಿದೆ. ವಿದ್ಯುದೀಕರಣ ಯೋಜನೆಗಳಿಗೆ 6,302 ಕೋಟಿ ರೂ. ಮತ್ತು ಕೋಚ್ ನಿರ್ಮಾಣ ಹಾಗೂ ಲೊಕೊಮೋಟಿವ್​ಗೆ 32,006 ಕೋಟಿ ರೂ. ಮೀಸಲಿರಿಸಲಾಗಿದೆ.

ಎಲ್​ಇಡಿ ಸಿಗ್ನಲ್ ಅಳವಡಿಕೆ ಹಾಗೂ ಸುರಕ್ಷತೆ ಮತ್ತು ಮುನ್ಸೂಚನೆ ವ್ಯವಸ್ಥೆಗಳಿಗಾಗಿ 2,025 ಕೋಟಿ ರೂ. ನಿಗದಿಯಾದರೆ ಹಳೆಯ ಹಳಿಗಳ ಬದಲಾವಣೆಗೆ 11,450 ಕೋಟಿ ರೂ. ಮೀಸಲಿಡಲಾಗಿದೆ.

ಸಂರಕ್ಷಣಾ ಕೋಶಕ್ಕೆ ಬಲ : ಕಳೆದ ವರ್ಷ ರಚನೆಯಾದ ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶಕ್ಕೆ ನಿಧಿ ಸೇರಿ ಸುರಕ್ಷತೆಗಾಗಿ ಪ್ರಸಕ್ತ ಸಾಲಿನಲ್ಲಿ 73,065 ಕೋಟಿ ರೂ. ಮೀಸಲಿರಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ ಸಂಪೂರ್ಣ ರೈಲ್ವೆ ಜಾಲದ ವಿದ್ಯುದೀಕರಣಕ್ಕೆ ಇಲಾಖೆ ಮುಂದಾಗಲಿದ್ದು, ಇದರಿಂದಾಗಿ ರೈಲ್ವೆಗೆ ವಾರ್ಷಿಕ 10,000 ಕೋಟಿ ರೂ. ಉಳಿತಾಯವಾಗಲಿದೆ.


ಅಭಿವೃದ್ಧಿಪರ, ನವಭಾರತದ ದೃಷ್ಟಿಕೋನ

2018-19ನೇ ಸಾಲಿನ ಕೇಂದ್ರ ಬಜೆಟ್ ಅಭಿವೃದ್ಧಿಪರ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಗ್ರಾಮೀಣ ಪ್ರದೇಶಗಳ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಮಂಡಿಸಿದ್ದು, ನವಭಾರತದ ದೃಷ್ಟಿಕೋನ ಹೊಂದಿದೆ ಎಂದಿದ್ದಾರೆ.

ಕೃಷಿಯಿಂದ ತೊಡಗಿ ಮೂಲಸೌಕರ್ಯದವರೆಗೆ ಎಲ್ಲ ಪ್ರಮುಖ ವಲಯಗಳನ್ನು ಕೂಡ ಬಜೆಟ್​ನಲ್ಲಿ ಪರಿಗಣಿಸಲಾಗಿದೆ. ಹೀಗಾಗಿ ಇದೊಂದು ರೈತಸ್ನೇಹಿ, ಜನಸಾಮಾನ್ಯರ ಪರ, ಉದ್ಯಮ ಸ್ನೇಹಿ ಮತ್ತು ಅಭಿವೃದ್ಧಿ ಸ್ನೇಹಿ ಬಜೆಟ್ ಆಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಧಾನಿ, ಜೇಟ್ಲಿ ಮತ್ತವರ ಬಜೆಟ್ ತಂಡವನ್ನು ಅಭಿನಂದಿಸಿದ್ದಾರೆ. ಗ್ರಾಮೀಣ ಭಾರತದಲ್ಲಿ ಹೆಚ್ಚಿನ ಅವಕಾಶವನ್ನು ಸೃಷ್ಟಿಸುವ ದೂರದೃಷ್ಟಿ ಇರಿಸಿಕೊಂಡು ಬಜೆಟ್ ತಯಾರಿಸಲಾಗಿದೆ. ದೇಶದ ಬೆಳವಣಿಗೆಗೆ ಈ ಬಜೆಟ್ ಹೊಸ ವೇಗ ನೀಡಲಿದೆ. ಸರ್ಕಾರ ಉದ್ಯಮಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದು ಮಾತ್ರವಲ್ಲದೆ, ಜನಸಾಮಾನ್ಯರಿಗೂ ಜೀವನಮಟ್ಟ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಮುಂಚಿನ ಎನ್​ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಶೌಚಗೃಹ ನಿರ್ವಣ, ವಸತಿ ಸೌಲಭ್ಯ, ಇಂಧನ ಮತ್ತು ಆರೋಗ್ಯ ಸಹಿತ ವಿವಿಧ ಯೋಜನೆಗಳ ಕುರಿತು ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ವಿವಿಧ ವಲಯಗಳಿಗೆ ಬಜೆಟ್​ನಲ್ಲಿ ನೀಡಲಾಗಿರುವ ಆದ್ಯತೆಗಳ ಕುರಿತು ವಿವರಿಸಿದರು.

ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರಸಕ್ತ ಬಜೆಟ್​ನಲ್ಲಿ ಈ ಮೂರು ಕ್ಷೇತ್ರಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ದರವನ್ನು ಶೇ.30ರಿಂದ ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ ಈ ವಲಯಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಸಕ್ತ ಬಜೆಟ್​ನಲ್ಲಿ ಘೋಷಿಸಲಾದ ‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಮಾತನಾಡಿದ ಮೋದಿ, ಇದು ಸರ್ಕಾರ ಒದಗಿಸುತ್ತಿರುವ ಜಗತ್ತಿನ ಅತಿದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಬಡವರ್ಗದ ಜನರಿಗೆ 5 ಲಕ್ಷ ರೂ. ವರೆಗಿನ ಮೊತ್ತದ ವಾರ್ಷಿಕ ಚಿಕಿತ್ಸಾ ಸೌಲಭ್ಯ ಆಯ್ದ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಗುಣಮಟ್ಟದ ಚಿಕಿತ್ಸೆ ನೀಡುವ ಈ ಕ್ರಮದಿಂದ 10 ಕೋಟಿ ಕುಟುಂಬಗಳ ಅಂದಾಜು 45-50 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದ್ದು, ಹೊಸ ವಿಮಾನ ನಿಲ್ದಾಣ, ಬಂದರು, ರೈಲು ಹಳಿ ಮತ್ತು ಮೆಟ್ರೋ ಯೋಜನೆಗಳು ಜನರಿಗೆ ಉದ್ಯೋಗ ದೊರಕಿಸಿಕೊಡುವ ಜತೆಗೆ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲಿವೆ. 125 ಕೋಟಿ ಭಾರತೀಯರಿಗೆ ಶಕ್ತಿ ನೀಡುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ರೈತರು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜತೆಗೆ ಸರ್ಕಾರದ ವಿವಿಧ ಯೋಜನೆಗಳು ದಲಿತರು, ಬಡ ಮತ್ತು ಹಿಂದುಳಿದ ವರ್ಗಗಳ ಜನತೆಗೆ ನೇರ ಪ್ರಯೋಜನ ನೀಡಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top