23.9 C
Bengaluru
Wednesday, August 3, 2022

ರಾಜ್ಯದಲ್ಲಿ ಫ್ಲೋರೈಡ್ ನೀರಿನ ಆತಂಕ: ಕರ್ನಾಟಕದ 30 ಜಿಲ್ಲೆಗಳಲ್ಲಿ 1.5 ಎಂ.ಜಿ.ಗಿಂತ ಹೆಚ್ಚು ಅಂಶ

Author

Date

| ಕೀರ್ತಿನಾರಾಯಣ ಸಿ. ಬೆಂಗಳೂರು

ಇನ್ನು ಎರಡು ವರ್ಷದಲ್ಲಿ ದೇಶದ ಪ್ರತಿ ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ‘ಜಲಜೀವನ್ ಮಿಷನ್’ ಯೋಜನೆ ಅನುಷ್ಠಾನ ಪ್ರಗತಿಯಲ್ಲಿರುವ ನಡುವೆಯೇ ದೇಶದ 23 ರಾಜ್ಯಗಳ 370 ಜಿಲ್ಲೆಗಳ ಅಂತರ್ಜಲದಲ್ಲಿ ‘ಫ್ಲೋರೈಡ್’ ಅಂಶ ಅಪಾಯದ ಮಟ್ಟ (1.5 ಎಂ.ಜಿ.ಗಿಂತ ಜಾಸ್ತಿ) ಮೀರಿರುವ ವಿಚಾರ ಬಹಿರಂಗವಾಗಿದೆ.

ಬೆಂಗಳೂರು ಸೇರಿ ಕರ್ನಾಟಕದ 30 ಜಿಲ್ಲೆಗಳಲ್ಲಿ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಅಂಶವಿರುವುದು ದೃಢಪಟ್ಟಿದೆ. ಫ್ಲೋರೈಡ್ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬಗ್ಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದಾಗ್ಯೂ ಈವರೆಗೆ ಫ್ಲೋರೈಡ್ ಮುಕ್ತ ನೀರು ಸೇವಿಸುವ ಭಾಗ್ಯ ಜನರಿಗೆ ಸಿಕ್ಕಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ.

ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಉದ್ದೇಶಕ್ಕಾಗಿ 2021-22 ವರ್ಷಕ್ಕೆ ಕೇಂದ್ರ ಸರ್ಕಾರ 5008 ಕೋಟಿ ರೂ. ಅನುದಾನ ಕೊಟ್ಟಿದೆ. 2022ರ ಮಾ.17ರವರೆಗೆ 1252 ಕೋಟಿ ರೂ. ಡ್ರಾ ಮಾಡಿಕೊಂಡಿದ್ದು, ಅದರಲ್ಲಿ 1208 ಕೋಟಿ ರೂ. ಖರ್ಚು ಮಾಡಿದೆ.

ದೇಶಾದ್ಯಂತ ಪ್ರಾದೇಶಿಕ ಮಟ್ಟದಲ್ಲಿ ವಿವಿಧ ವೈಜ್ಞಾನಿಕ ಅಧ್ಯಯನಗಳ ಮೂಲಕ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲುಬಿ) ಅಂತರ್ಜಲ ಗುಣಮಟ್ಟದ ಮೇಲ್ವಿಚಾರಣೆ ವಹಿಸುತ್ತಿದೆ. ಅದರ ವರದಿ ಪ್ರಕಾರ 43 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಹೊಂದಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಉತ್ತರ ಪ್ರದೇಶ (34 ಜಿಲ್ಲೆ), 3ನೇ ಸ್ಥಾನದಲ್ಲಿ ರಾಜಸ್ಥಾನ (33 ಜಿಲ್ಲೆ) ಹಾಗೂ 30 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಪತ್ತೆಯಾಗುವುದರೊಂದಿಗೆ ಕರ್ನಾಟಕ 4ನೇ ಸ್ಥಾನದಲ್ಲಿ ಉಳಿದಿದೆ.

ಫ್ಲೋರೈಡ್ ನಿಯಂತ್ರಣ ಹೇಗೆ?

  • ಕೊಳವೆಬಾವಿಗಳಿಂದ ನೇರವಾಗಿ ಪೂರೈಕೆಯಾಗುವ ನೀರು ಸೇವನೆಯಿಂದ ಫ್ಲೋರೈಡ್ ಅಂಶ ದೇಹಕ್ಕೆ ಸೇರ್ಪಡೆಯಾಗುತ್ತದೆ.
  • ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ, ಅದರ ಮೂಲಕ ಸಂಸ್ಕೃರಿಸಿದ ನೀರು ಸರಬರಾಜು ಮಾಡಿದರೆ ಫ್ಲೋರೈಡ್ ಅಂಶ ಹೊರತೆಗೆಯಬಹುದು.
  • ಬೇವಿನ ಎಲೆ, ರೆಂಬೆಗಳನ್ನು ಸುಟ್ಟು ಅದರ ಇದ್ದಲಿನ ಮೂಲಕ ನೀರು ಹಾಯಿಸುವುದರಿಂದ ಫ್ಲೋರೈಡ್​ವುುಕ್ತವಾಗುತ್ತದೆ ಎಂಬುದು ಸಾಬೀತಾಗಿದೆ. ಹಳ್ಳಿಗಳ್ಳಿ ಇದನ್ನು ಬಳಸಬಹುದು.
  • ರಿವರ್ಸ್ ಇಸ್ಮಾಸಿಸ್ (ಆರ್​ಒ) ಪ್ರಕ್ರಿಯೆಗೆ ಒಳಪಡಿಸುವುದರಿಂದ ನೀರಿನಲ್ಲಿರುವ ಎಲ್ಲ ಮಿನರಲ್ಸ್ ಹೊರಹಾಕುವುದರಿಂದ ಅಡ್ಡಪರಿಣಾಮ ಬೀರುವ ಸಾಧ್ಯತೆಯೂ ಇದೆ.

ರಾಜ್ಯದ ಎಲ್ಲೆಲ್ಲಿ ಫ್ಲೋರೈಡ್ ಆತಂಕ?: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದಕ್ಷಿಣ ಕನ್ನಡ, ಗದಗ, ಕಲಬುರ್ಗಿ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ಉತ್ತರ ಕನ್ನಡ, ಉಡುಪಿ, ಕೊಡಗು.

ಎರಡು ಜಿಲ್ಲೆಗಳಲ್ಲಿ ಅರ್ಸೆನಿಕ್ ಅಂಶ: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಂತರ್ಜಲದಲ್ಲಿ 0.01 ಮಿಲಿ ಗ್ರಾಂಗಿಂತ ಹೆಚ್ಚು ಅರ್ಸೆನಿಕ್ (ನಂಜು) ಅಂಶ ಪತ್ತೆಯಾಗಿದೆ. ಈ ನೀರು ಸೇವನೆಯಿಂದ ಚರ್ಮದ ಸಮಸ್ಯೆ, ಹೊಟ್ಟೆ ನೋವು, ವಾಂತಿ ಸೇರಿ ಇನ್ನಿತರ ಗಂಭೀರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನೀರಿನ ಪರೀಕ್ಷೆಗೆ ಫೀಲ್ಡ್ ಟೆಸ್ಟ್ ಕಿಟ್: ಜಲ ಜೀವನ್ ಮಿಷನ್​ನಡಿಯಲ್ಲಿ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಆದ್ಯತೆ ನೀಡಲಾಗಿದೆ. ಫೀಲ್ಡ್ ಟೆಸ್ಟ್ ಕಿಟ್​ಗಳನ್ನು (ಎಫ್​ಟಿಕೆ) ಬಳಸಿಕೊಂಡು ಯಾವುದೇ ರೀತಿಯ ಮಾಲಿನ್ಯದ ನೀರಿನ ಮಾದರಿಗಳನ್ನು ಪರೀಕ್ಷಿಸಲು ಪ್ರತಿ ಗ್ರಾಮದಲ್ಲಿ ಐವರು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಎಫ್​ಟಿಕೆಗಳನ್ನು ಖರೀದಿಸಿ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುತ್ತದೆ. ಎಫ್​ಟಿಕೆ ಒಂಬತ್ತು ಮಾನದಂಡಗಳ ಮೇಲೆ ನೀರನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.

ಪ್ರತಿ ಮನೆಯಲ್ಲೂ ಸಮಸ್ಯೆ: ಕಲಬುರ್ಗಿಯ ಸೇಡಂ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಫ್ಲೋರೈಡ್ ಸಮಸ್ಯೆಯಿಂದ ತುತ್ತಾದವರಿದ್ದಾರೆ. ಫ್ಲೋರೈಡ್​ಯುುಕ್ತ ನೀರು ಸೇವನೆಯಿಂದ ಹಲ್ಲುಗಳ ಹಳದಿಯಾಗಿರುವುದು, ಕಾಲು ಸೊಟ್ಟಗಾಗಿ ಕುಂಟುವುದು, ಬೆನ್ನು ಗೂನಾಗಿ ನಡೆಯುವಂತಹ ಸಮಸ್ಯೆಗಳಿಗೆ ಜನ ಒಳಗಾಗಿದ್ದಾರೆ. ಈ ಬಗ್ಗೆ 2010-12ರ ಅವಧಿಯಲ್ಲಿ ಅಧ್ಯಯನ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದು ಭೂವಿಜ್ಞಾನಿ ಬಿ.ಸಿ. ಪ್ರಭಾಕರ್ ಮಾಹಿತಿ ನೀಡುತ್ತಾರೆ.

ಫ್ಲೋರೈಡ್ ಹೆಚ್ಚಲು ಕಾರಣ: ಗ್ರಾನೈಟ್ ಶಿಲೆಗಳಿರುವ ಕಡೆ ಫ್ಲೋರೇಡ್ ಅಂಶ ನೀರಿನಲ್ಲಿ ಬೆರೆಯುತ್ತದೆ. ಹಠಾತ್ತನೆ ಫ್ಲೋರೈಡ್ ಅಂಶ ಬೆರೆಯುವುದಿಲ್ಲ. ಗ್ರಾನೈಟ್ ಶಿಲೆ ನೀರಿನ ಸಂಪರ್ಕಕ್ಕೆ ಬಂದಾಗ ನಿಧಾನವಾಗಿ ಫ್ಲೋರೈಡ್ ಅಂಶ ಬಿಡುಗಡೆಯಾಗುತ್ತದೆ. ಪೂರ್ಣಪ್ರಮಾಣದಲ್ಲಿ ನೀರಿನಲ್ಲಿ ಸೇರಲು ನೂರಾರು, ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.

ಫ್ಲೋರೈಡ್ ಅಂಶ 0.5 ಮಿಲಿ ಗ್ರಾಂ ಇದ್ದರೆ ದೇಹದ ಆರೋಗ್ಯಕ್ಕೆ ಅನುಕೂಲ. 1.5 ಮಿಲಿ ಗ್ರಾಂ ಮೀರಿದರೆ ಒಂದಲ್ಲ ಒಂದು ರೀತಿ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಹಲವು ಜಿಲ್ಲೆಗಳಲ್ಲಿ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರಿನಿಂದ ಫ್ಲೋರೈಡ್ ಅಂಶ ತೆಗೆಯುವ ಪರಿಣಾಮಕಾರಿ ವ್ಯವಸ್ಥೆ ಈವರೆಗೂ ಬಂದಿಲ್ಲ.

| ಬಿ.ಸಿ.ಪ್ರಭಾಕರ, ಹಿರಿಯ ಭೂ ವಿಜ್ಞಾನಿ

ಫ್ಲೋರೈಡ್ ನೀರಿನ ಪರಿಣಾಮ

  • ಹಲ್ಲುಗಳು ಹಳದಿಯಾಗುವುದು, ಪಾಚಿ ಕಟ್ಟುವುದು, ಜಗಿಯುವ ಸಾಮರ್ಥ್ಯ ಕಳೆದುಕೊಳ್ಳುವುದು
  • ಮೂಳೆಗಳ ಸವೆತ, ಕಾಲುಗಳು ಸೊಟ್ಟಗಾಗುವುದು, ಬೆನ್ನು ಗೂನು, ಕುಂಟುತ್ತಾ ನಡೆಯುವುದು
  • ಕುತ್ತಿಗೆ ಸಾಮರ್ಥ್ಯ ಕ್ಷೀಣಿಸುವುದು, ಈ ಕಡೆ ಆ ಕಡೆ ಕುತ್ತಿಗೆಯನ್ನು ತಿರುಗಿಸಲು ಕಷ್ಟ ಪಡುವುದು
  • 10ರಿಂದ 60 ವರ್ಷದ ವೃದ್ಧರವರೆಗೂ ಸಮಸ್ಯೆ. ಸುಸ್ತು, ಕೂರಲು, ಮೇಲೇಳಲು ಆಗದಿರುವುದು.

ಪ್ರಮಾಣವೆಷ್ಟು?

  • ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಫ್ಲೋರೈಡ್ ಪ್ರಮಾಣ ಪ್ರತಿ ಲೀಟರ್​ಗೆ 0.5 ನಿಂದ 1 ಮಿ.ಗ್ರಾಂ ಇರಬೇಕು.
  • ಅಮೆರಿಕಾ ಸೇರಿ ಕೆಲ ದೇಶಗಳು ಹವಾಮಾನಕ್ಕನುಗುಣವಾಗಿ 0.7 ಮಿ.ಗ್ರಾಂ ಇರಬೇಕೆಂದು ನಿಗದಿಪಡಿಸಿಕೊಂಡಿವೆ.
  • ಮಾನವನ ದೇಹಕ್ಕೂ 0.5ನಷ್ಟು ಫ್ಲೋರೈಡ್ ಅಗತ್ಯವಿದೆ. ಇದು ಮೀರಿದರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಅಂದಾಜು 6 ಲಕ್ಷ ಜನ ಫ್ಲೋರೈಡ್​ಯುುಕ್ತ ನೀರು ಸೇವಿಸಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..

Recent posts

ಬಂಡೆ ನಾಡಲ್ಲಿ ಬಿರುಸಿನ ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ 24 ಮನೆ, 22 ಎಕರೆ ಬೆಳೆ ಹಾನಿ, ತುಂಬಿ ಹರಿದ ಹಳ್ಳ-ಕೊಳ್ಳಗಳು

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 24 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 6.19 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಗೂ 15.78 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಹಿರಿಯೂರು ಭಾಗದಲ್ಲಿ ಭಾರಿ ಮಳೆ...

ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಸ್ವಚ್ಛತೆಗೆ ತಾಕೀತು; ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತು ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

ಚಿತ್ರದುರ್ಗ: ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಎಚ್ಚರಿಕೆ ನೀಡಿದರು. ಜಿಪಂ ಸಭಾಂಗಣದಲ್ಲಿ ಬಿಸಿಎಂ ಹಾಸ್ಟೆಲ್ ಹಾಗೂ...

ಮುರುಘಾ ಮಠಕ್ಕೆ ಇಂದು ರಾಹುಲ್‌ಗಾಂಧಿ ಭೇಟಿ; ಮಠಾಧೀಶರ ಜತೆ ಸಮಾಲೋಚನೆ, ಭಕ್ತರ ಪ್ರವೇಶಕ್ಕೆ ನಿರ್ಬಂಧ

ಚಿತ್ರದುರ್ಗ: ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಮುರುಘಾ ಮಠಕ್ಕೆ ಬುಧವಾರ ಬೆಳಗ್ಗೆ 11ಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆಯಲಿದ್ದು, 30ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಎಐಸಿಸಿ ನಾಯಕರಾದ...

ಗೋಕರ್ಣದಲ್ಲಿ ನಾಗೇಶ್ವರ ಲಿಂಗಕ್ಕೆ ಪೂಜೆ

ಗೋಕರ್ಣ: ನಾಗರಪಂಚಮಿ ನಿಮಿತ್ತ ಅಸಂಖ್ಯಾತ ಭಕ್ತರು ಪುರಾಣ ಪ್ರಸಿದ್ಧ ನಾಗೇಶ್ವರ ಲಿಂಗಕ್ಕೆ ಮಂದಿರದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮಂಗಳವಾರ ವಿಶೇಷ ಪೂಜಾಭಿಷೇಕ ಕೈಗೊಂಡರು. ಮಂದಿರ ಸುತ್ತ ಪ್ರತಿಷ್ಠಾಪಿಸಿರುವ ನೂರಾರು ನಾಗಪ್ರತಿಮೆಗಳಿಗೆ...

ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಸಿಗಲಿ

ಶಿರಸಿ: ರಾಜಕೀಯವಾಗಿ ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಉದ್ದೇಶದಿಂದ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ, ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ...

ಪ್ರತಿ ಮನೆ ಮೇಲೂ ಧ್ವಜ ಹಾರಿಸಲು ಅನುಮತಿ

ಮುದ್ದೇಬಿಹಾಳ: ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ರಾಜ್ಯ ಸರ್ಕಾರದ ಆದೇಶದಂತೆ ಸಾರ್ವಜನಿಕರು ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬಹುದಾಗಿದೆ ಎಂದು ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಹೇಳಿದರು. ಪಟ್ಟಣದ ವಿಜಯಮಹಾಂತೇಶ ಮಂಗಲಭವನದಲ್ಲಿ ತಾಲೂಕಾಡಳಿತದಿಂದ...