ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ಚಿಕ್ಕಮಗಳೂರು: ಹೂವು, ತರಕಾರಿ ಮತ್ತು ಅಲಂಕಾರಿಕ ಸಸ್ಯಗಳನ್ನು ಬಳಸಿ ಅಲ್ಲೊಂದು ದೃಶ್ಯ ಕಾವ್ಯವನ್ನೇ ನಿರ್ವಿುಸಲಾಗಿದೆ. ಎಷ್ಟು ನೋಡಿದರೂ ಮತ್ತಷ್ಟು ನೋಡಬೇಕೆಂಬ ಹಂಬಲ. ಹೂವು, ಹಣ್ಣು, ಸಸ್ಯಗಳಿಂದ ನಿರ್ವಿುಸಿರುವ ಅಲ್ಲಿನ ಬಣ್ಣದ ಲೋಕಗಮನ ಸೆಳೆಯುತ್ತವೆ.

ಹಸಿರತ್ತಲ್, ಹಸಿರಿತ್ತಲ್, ಹಸಿರ್ಪೆತ್ತಲ್…ಎಂದು ಮಲೆನಾಡು ಕುರಿತು ಕುವೆಂಪು ಬಣ್ಣಿಸಿದ ಕವನದ ಸಾಲು ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ನೋಡಿದಾಗ ನೆನಪಾಗುತ್ತದೆ. ನಗರದ ಸಾವಿರಾರು ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಹೂವಿನ ಲೋಕದ ಸೊಬಗು ಸವಿಯುತ್ತಿದ್ದಾರೆ.

ಹಣ್ಣು ತರಕಾರಿಗಳಲ್ಲಿ ಕೆತ್ತಿದ ನವಿಲು, ತೆಂಗಿನಕಾಯಿ, ಮೀನು ಮುಂತಾದ ಚಿತ್ರಗಳು ಚಿತ್ತಾಕರ್ಷಕವಾಗಿವೆ. ತರಕಾರಿ ಹಾಗೂ ಹೂವುಗಳ ರಂಗೋಲಿಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರಗು ತಂದಿವೆ. ಕಲ್ಲಂಗಡಿ ಹಣ್ಣಿನ ಮೇಲೆ ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ, ಸುಭಾಷ್​ಚಂದ್ರ ಬೋಸ್, ಡಾ. ರಾಜ್​ಕುಮಾರ್, ವಿಷ್ಣುವರ್ಧನ್ ಚಿತ್ರ ಕೆತ್ತಿರುವ ಭರತ್ ಅವರ ನೈಪುಣ್ಯತೆ ಎದ್ದು ಕಾಣುತ್ತಿದೆ. ಹೆಣ್ಣು ಮಗುವನ್ನು ರಕ್ಷಿಸಬೇಕೆಂಬ ವಿಚಾರ ಬಿತ್ತುವ ಎರಡು ಹಸ್ತದ ನಡುವೆ ಹೆಣ್ಣು ಮಗುವೊಂದು ಕುಳಿತಿರುವ ಚಿತ್ರ ಚಿತ್ತಾಕರ್ಷಕವಾಗಿದೆ.

ಸ್ವಚ್ಛ ಭಾರತ ಅರಿವಿನ ಚಿತ್ರ: ಸ್ವಚ್ಛ ಭಾರತ ಪರಿಕಲ್ಪನೆ ಹಾಗೂ ಅದರ ಮಹತ್ವ ಸಾರುವ ಚಿತ್ರಗಳನ್ನು ಹೂವಿನಲ್ಲಿಯೇ ನಿರ್ವಿುಸಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಾತ್ಮ ಗಾಂಧಿ ಮೂರ್ತಿ ನಿಲ್ಲಿಸಿ ಅದರ ಪಕ್ಕದಲ್ಲಿಯೇ ಕಸವನ್ನು ವಿಂಗಡಿಸಿ ಹಾಕಬೇಕಾದ ವಿವಿಧ ಬಣ್ಣದ ಡಸ್ಟ್ ಬಿನ್​ಗಳನ್ನು ಹೂವಿನಲ್ಲಿ ನಿರ್ವಿುಸಲಾಗಿದೆ.