More

    ವಿಜಯವಾಣಿ ವಿಶೇಷ ಫಲಪುಷ್ಪ ಪ್ರದರ್ಶನ ಸಿದ್ಧತೆ

    ಭರತ್ ಶೆಟ್ಟಿಗಾರ್ ಮಂಗಳೂರು
    ಕಣ್ಮನ ಸೆಳೆಯುವ ಬಣ್ಣಬಣ್ಣದ ಆಕರ್ಷಕ ಪುಷ್ಪಗಳು, ನಳನಳಿಸುವ ತರಕಾರಿ… ಇವೆಲ್ಲದರ ಮಧ್ಯೆ ಆಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.
    ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಜ.24ರಿಂದ ಮೂರು ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಪಾರ್ಕ್‌ನ ಒಂದು ಪಾರ್ಶ್ವದಲ್ಲಿ ಫಲಪುಷ್ಪ ಪ್ರದರ್ಶನಕ್ಕೆಂದೇ ಮೀಸಲಿಟ್ಟಿರುವ ಜಾಗವಿದ್ದು, ಅಲ್ಲಿ ಹೂವಿನ ಗಿಡಗಳ ಜೋಡಣೆ ನಡೆಯುತ್ತಿದೆ. 10ಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ವಿವಿಧೆಡೆಯಿರುವ ತೋಟಗಾರಿಕಾ ಇಲಾಖೆಯ ಕ್ಷೇತ್ರಗಳಲ್ಲಿ ಬೆಳೆದ ಉತ್ಪಾದಿಸಿದ ವಿವಿಧ ತರಕಾರಿ ಸಸಿಗಳು, ಹೂವಿನ ಗಿಡಗಳನ್ನು ಕದ್ರಿ ಪಾರ್ಕ್‌ಗೆ ತರಲಾಗಿದೆ. ಪಾರ್ಕ್‌ನಲ್ಲೂ ಪ್ರದರ್ಶನಕ್ಕಾಗಿಯೇ ಬೆಳೆದಿರುವ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ನುರಿತ ಗಾರ್ಡನರ್‌ಗಳು ಅಚ್ಚುಕಟ್ಟಾಗಿ ಜೋಡಿಸಿ, ಆಕರ್ಷಣೀಯವಾಗಿ ಕಾಣುವಂತೆ ಸಿದ್ಧಪಡಿಸುತ್ತಿದ್ದಾರೆ.

    ಯಾವೆಲ್ಲ ಹೂವಿನ ಗಿಡಗಳು?
    ಪುಷ್ಪ ಪ್ರದರ್ಶನ ನಡೆಯುವ ಸ್ಥಳದಲ್ಲಿ ಬಣ್ಣಬಣ್ಣದ ಅಲಂಕಾರಿಕ ಹೂವಿನ ಗಿಡಗಳಾದ ರೆಡ್ ಸಾಲ್ವಿಯಾ, ಮೆರಿಗೋಲ್ಡ್ (ಗೊಂಡೆ ಹೂವು), ಪಿಂಕ್ಸ್, ಸೇವಂತಿಗೆ, ಟೊರೇನಿಯಾ, ಸದಾಪುಷ್ಪ, ಚೈನೀಸ್ ಬಾಕ್ಸ್, ಕೋಲಿಯಾಸ್, ಗಜೇನಿಯಾ, ಕ್ಯಾಲೊಂಡೆಲ್ಲಾ, ಕ್ಯಾಸ್ಮಸ್, ಪಿಟೋನಿಯಾ, ಬಿಗೋನಿಯಾ, ಪೆಂಟಸ್, ಮೊದಲಾದ ಸುಮಾರು 15-20 ಸಾವಿರ ಗಿಡಗಳನ್ನು ಜೋಡಿಸುವ ಕೆಲಸದಲ್ಲಿ ನಡೆಯುತ್ತಿದೆ. ಇವುಗಳಲ್ಲಿ ಶೇ.90ರಷ್ಟು ಗಿಡಗಳನ್ನು ಕದ್ರಿ ಉದ್ಯಾನವನದಲ್ಲೇ ಬೆಳೆಯಲಾಗಿದೆ.

    ಸಿದ್ಧವಾಗಿದೆ ತರಕಾರಿ ತೋಟ
    ಪ್ರದರ್ಶನಕ್ಕೆಂದು ಕದ್ರಿ ಪಾರ್ಕ್‌ನಲ್ಲಿ ಪ್ರತಿವರ್ಷ ತರಕಾರಿ ಬೆಳೆಯುತ್ತಾರೆ. ಈ ಬಾರಿಯೂ ತರಕಾರಿ ಬೆಳೆಗಳು ಈಗಾಗಲೇ ಫಸಲು ನೀಡಿವೆ. ಬದನೆ, ಬಸಳೆ, ಅರಿವೆ, ಹೀರೆಕಾಯಿ, ತೊಂಡೆಕಾಯಿ, ಹಾಗಲಕಾಯಿ, ಅಲಸಂಡೆ, ನೆಲ ಬಸಳೆ, ಸೌತೆ, ಬೆಂಡೆಕಾಯಿ, ಸೋರೆಕಾಯಿ, ಚೀನಿಕಾಯಿ, ಪಡುವಲ ಮೊದಲಾದ ಗಿಡಗಳಲ್ಲಿ ಫಲ ಬಿಟ್ಟಿವೆ. ಡಿಸೆಂಬರ್ ಮೊದಲ ವಾರದಲ್ಲಿ ಬೀಜ ಬಿತ್ತಿ, ಒಂದೂವರೆ ತಿಂಗಳಲ್ಲಿ ಫಲ ನೀಡಿದೆ ಎನ್ನುತ್ತಾರೆ ತೋಟ ನೋಡಿಕೊಳ್ಳುವ ಕಾರ್ಮಿಕರು.

    1 ರೂ.ಗೆ ತರಕಾರಿ ಗಿಡ
    ಕಳೆದ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ಒಂದು ರೂಪಾಯಿಗೆ ಒಂದು ತರಕಾರಿ ಗಿಡ ನೀಡುವ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದೆ. ಈ ಬಾರಿಯೂ 30 ಸಾವಿರದಷ್ಟು ತರಕಾರಿ ಗಿಡಗಳನ್ನು ಆಸಕ್ತರಿಗೆ ನೀಡಲು ತೋಟಗಾರಿಕಾ ಇಲಾಖೆ ಉದ್ದೇಶಿಸಿದೆ. ಬೆಳ್ತಂಗಡಿ ತೋಟಗಾರಿಕಾ ಕ್ಷೇತ್ರದ ಮದ್ದಡ್ಕದಲ್ಲಿ ಈಗಾಗಲೇ ಸಸಿಗಳನ್ನು ಬೆಳೆಯಾಗಿದ್ದು, 500ರಷ್ಟು ಗಿಡಗಳನ್ನು ಕದ್ರಿ ಪಾರ್ಕ್‌ಗೆ ತರಲಾಗಿದೆ. ಬೆಂಡೆ, ಸೋರೆ, ಹೀರೆ, ಮುಳ್ಳು ಸೌತೆ ಸೇರಿದಂತೆ ವಿವಿಧ ತರಕಾರಿ ಸಸಿಗಳನ್ನು ಖರೀದಿಸಬಹುದು.

    ಜಿಲ್ಲೆಯಲ್ಲಿ ತೋಟಗಾರಿಕೆ ಚಟುವಟಿಕೆ ಹಾಗೂ ತೋಟಗಾರಿಕೆ ಕಲೆಯ ಕುರಿತಾಗಿ ಜನರಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ತೋಟಗಾರಿಕೆಗೆ ಸಂಬಂಧಿಸಿದ ವಿವಿಧ ಮಳಿಗೆಗಳಲ್ಲಿ ಸಾರ್ವಜನಿಕರು ತಮಗೆ ಬೇಕಾದ ಮಾಹಿತಿ ಪಡೆಯಬಹುದು.
    ಎಚ್.ಆರ್.ನಾಯಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ

    ಎರಡು ವಾರಗಳಿಂದ ಹೂವಿನ ಗಿಡಗಳನ್ನು ಸೆಟ್ ಮಾಡುತ್ತಿದ್ದೇವೆ. ಈಗ ಅಂತಿಮ ಹಂತ ತಲುಪಿದೆ. ಪ್ರಮುಖ ಆಕರ್ಷಣೆಯಾದ ಬೃಹತ್ ಕಲಾಕೃತಿಗಳನ್ನು ಬೆಂಗಳೂರಿನಿಂದ ಬರುವ ತಂಡದವರು ಮಾಡುತ್ತಾರೆ. ನಾವು ಇಲ್ಲೇ ಬೆಳೆಯುವ ಅಲಂಕಾರಿಕ ಹೂವಿನ ಗಿಡಗಳನ್ನು ಜೋಡಿಸುತ್ತಿದ್ದೇವೆ.
    ಪ್ರವೀಣ್,ಗಾರ್ಡನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts