More

    ಲಾಲ್​ಬಾಗ್​ನಲ್ಲಿ ವಿವೇಕ-ಆನಂದದ ಸುಗಂಧ; 211ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ, 26ರವರೆಗೆ ಆಯೋಜನೆ

    ಬೆಂಗಳೂರು: ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಸ್ಮಾರಕದ ಪ್ರತಿಕೃತಿ, 16 ಅಡಿ ಎತ್ತರದ ಪ್ರತಿಮೆಯ ಮಾದರಿ, ವರ್ಟಿಕಲ್ ಉದ್ಯಾನ.. ಇವು ಲಾಲದಬಾಗ್​ನಲ್ಲಿ ಆಯೋಜನೆಗೊಂಡಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಜನಾಕರ್ಷಿಸುತ್ತಿರುವ ಸಂಗತಿಗಳಿವು.

    ವಿವೇಕಾನಂದರ 157ನೇ ಜನ್ಮದಿನೋತ್ಸವ ಹಾಗೂ ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣಕ್ಕೆ 127ನೇ ವರ್ಷಗಳ ಸ್ಮರಣಾರ್ಥ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಏರ್ಪಡಿಸಿರುವ 211ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಚಾಲನೆ ನೀಡಿದರು.

    ದೇಶದ ಮಹಾನ್ ಚೇತನ ಎನಿಸಿರುವ ವಿವೇಕಾನಂದರ ಸಮಗ್ರ ಜೀವನ ಚಿತ್ರಣವನ್ನು ಯುವಜನತೆಗೆ ಪರಿಚರಿಯಸುವ ಉದ್ದೇಶದಿಂದ ‘ವಿವೇಕ ಪುಷ್ಪಪ್ರದರ್ಶನ’ ಆಯೋಜಿಸಲಾಗಿದೆ. ವಿವೇಕಾನಂದರ ಜೀವನದ ಪ್ರಮುಖ ಘಟ್ಟಗಳನ್ನು ಬಿಂಬಿಸಿರುವ ರೀತಿ ಮಕ್ಕಳಿಗೆ ಸ್ಪೂರ್ತಿ ನೀಡುತ್ತದೆ. ಸಾಧ್ಯವಾದಷ್ಟು ಹೆಚ್ಚು ಜನರು ಈ ಅಪರೂಪದ ಪುಷ್ಪ ಪ್ರದರ್ಶನವನ್ನು ವೀಕ್ಷಿಸಬೇಕು ಎಂದರು. ರಾಮಕೃಷ್ಣ ಆಶ್ರಮದ ಹರ್ಷಾನಂದ ಸ್ವಾಮೀಜಿ, ಸಚಿವ ಸೋಮಣ್ಣ, ಶಾಸಕ ಉದಯ ಗರುಡಾಚಾರ್ ಮೇಯರ್ ಗೌತಮ್ ಕುಮಾರ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಬಿ. ವೆಂಕಟೇಶ್ ಮತ್ತಿತರರು ಉಪಸ್ಥಿತರರಿದ್ದರು.

    ಕಣ್ಮನ ಸೆಳೆಯುತ್ತಿದೆ ಪ್ರತಿಮೆ

    ಗಾಜಿನ ಮನೆಯ ಹೃದಯ ಭಾಗದಲ್ಲಿ 8040 ಅಡಿ ಅಳತೆಯಲ್ಲಿ ಹೂವುಗಳಿಂದ ಕನ್ಯಾಕುಮಾರಿಯಲ್ಲಿರುವ ವಿವೇಕಾಂದರ ಸ್ಮಾರಕದ ಮಾದರಿ ಮತ್ತು 16 ಅಡಿ ಎತ್ತರ ಆಕರ್ಷಕ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. 36 ಅಡಿ ಉದ್ದದ ಕೃತಕ ಬಂಡೆ ಮೇಲೆ, 17 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ, 75 ಸಾವಿರ ಸೇವಂತಿಗೆ ಹಾಗೂ 3 ಸಾವಿರ ವಿವಿಧ ಎಲೆಗಳೊಂದಿಗೆ 21 ಅಡಿ ಉದ್ದ, 17 ಅಡಿ ಎತ್ತರ ಹಾಗೂ 8 ಅಡಿ ಅಗಲವಿರುವ ದೇವಾಲಯದ ಆಕೃತಿ ನೋಡುಗರ ಕಣ್ಮನ ಸೆಳೆಯುವಂತಿದೆ.

    ವಿವೇಕಾನಂದರ ವೇಷಭೂಷಣ

    ಲಾಲ್​ಬಾಗ್​ನ ಆಯ್ದ ಪ್ರದೇಶಗಳಲ್ಲಿ ವಿವೇಕಾ ನಂದರ ಕುರಿತ ಚಿತ್ರಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನವಿದೆ. ಹಲವು ವೈಶಿಷ್ಟ್ಯತೆಯಿಂದ ಕೂಡಿರುವ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ವಿವೇಕಾನಂದರ ವೇಷಭೂಷಣ ತೊಟ್ಟಿದ್ದ ಮಕ್ಕಳು ಗಮನ ಸೆಳೆದರು.

    ನವವಿವಾಹಿತನಾದ ನಾನು ಪತ್ನಿಯೊಡನೆ ಮೊದಲ ಬಾರಿ ಪ್ರದರ್ಶನ ವೀಕ್ಷಿಸಲು ಬಂದಿದ್ದೇನೆ. ವಿವೇಕಾನಂದರ ಸಮಗ್ರ ಜೀವನ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ. ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದವರ ಕಾರ್ಯ ಶ್ಲಾಘನೀಯ.

    | ನಾಗೇಶ್, ಹೇಮಾ ನೆಲಮಂಗಲ

    ವಿವಿಧ ಜಾತಿಗಳ ಹೂಗಳಿಂದ ಪ್ರದರ್ಶನಕ್ಕೆ ಮತ್ತಷ್ಟು ಕಳೆಬಂದಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಪುಷ್ಪ ಪ್ರದರ್ಶನ ವೀಕ್ಷಿಸಿದೆ. ಎಂದೆಂದೂ ಮರೆಯಲಾಗದ ಅನುಭವ ನೀಡಿತು.

    | ರೈನಾ ಕೋರಮಂಗಲ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts