More

    ಗುಲಾಬಿ, ಸೇವಂತಿಯಲ್ಲಿ ಅರಳಿದ ಸ್ತಬ್ಧ ಚಿತ್ರಗಳು, ಗಮನಸೆಳೆದ ಮರೀಗೌಡರ ಮರಳಿನ ಕಲಾಕೃತಿ

    ಕೋಲಾರ: ಸುಮಾರು 16,000 ಗುಲಾಬಿ ಹೂವುಗಳಲ್ಲಿ ಅರಳಿದ ಶಿವಲಿಂಗ, ಸೇವಂತಿಗೆಯಲ್ಲಿ ಮೂಡಿದ ನಂದಿ, ಗುಲಾಬಿಯಲ್ಲಿ ಜನ್ಮತಳೆದ ಮಿಕ್ಕಿ ಡೊನಾಲ್ಡ್, ವೀಣೆ, ಚಿಟ್ಟೆ ಇನ್ನಿತರ ಸ್ತಬ್ಧ ಚಿತ್ರಗಳು, ರಾಜ್ಯದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡರ ಮರಳಿನ ಕಲಾಕೃತಿ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯುತ್ತಿವೆ.

    ನಗರದ ಹಳೇ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಆತ್ಮಯೋಜನೆ ಆಶ್ರಯದಲ್ಲಿ ಭಾನುವಾರ ಆರಂಭಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಟೊಮ್ಯಾಟೊ, ಹಸಿರು, ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ ಬಳಸಿ ನಿರ್ಮಿಸಿರುವ ಮನೆಯ ಸ್ತಬ್ಧಚಿತ್ರ ಗಮನ ಸೆಳೆದಿದೆ. ಎಲ್ಲ ಸ್ತಬ್ಧಚಿತ್ರಗಳು ಜಿಲ್ಲೆಯ ತರಕಾರಿ ಮತ್ತು ಹೂವು ಬೆಳೆಗಾರರ ಪ್ರಾಯೋಜಕತ್ವದಲ್ಲಿ ಮೂಡಿರುವುದು ಈ ಬಾರಿಯ ವಿಶೇಷ.

    ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರೀಗೌಡರರ ಮರಳಿನ ಕೆತ್ತನೆ, ಹೂವು ಕುಂಡಗಳಲ್ಲಿ ಅಗ್ಲೊನೇಮಾ, ಅಕೇಲಿಫಾ, ಟ್ರೈಕೋಲರ್, ಅಕೇಲಿಪಾ, ವಿಲೆಸ್ಕಿಯಾನಾ, ಪ್ಲುಮೆರಿಯಾ, ಪುಡಿಕ ವೈಟ್, ಜಟ್ರೋಫಾ ಇಂಟಿಜಿರಿಯಾ, ಪೈಕಾಸ್ ಬೆಂಬಮಿನ್ ಗ್ರೀನ್, ಪೈಕಾಸ್ ಬೆಂಜಮಿನ್ ವೈಟ್, ಎರಾಥೆಮಾಮ್ ಕೆಂಪು, ಎರಾಥೆಮಾಮ್ ನಿಗ್ರಿಮ್, ಸಾಂಗ್ ಆಫ್ ಇಂಡಿಯಾ… ಹೀಗೆ ಬಗೆಬಗೆಯ ಹೂವುಗಳು ಕಣ್ಮನ ಸೆಳೆಯುವಂತಿವೆ. ‘

    ತರಕಾರಿಯಲ್ಲಿ ಶಿವಲಿಂಗ, ಮೊಸಳೆ, ಮೀನು, ಬಗೆಬಗೆಯ ಪ್ರಾಣಿ ಪಕ್ಷಿಗಳು, ಸಂಗೀತ ವಾದ್ಯ ಪರಿಕರಗಳು, ಕಲ್ಲಂಗಡಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ, ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಅಂಬೇಡ್ಕರ್, ಭಗತ್‌ಸಿಂಗ್, ಶಿವೈಕ್ಯರಾದ ಸಿದ್ಧಗಂಗಾ ಶ್ರೀ, ಬೃಂದಾವನಸ್ಥರಾದ ಪೇಜಾವರಶ್ರೀ, ರಾಷ್ಟ್ರನಾಯಕರು, ಗರುಡ, ಕೊಕ್ಕರೆ ಇತರ ಪಕ್ಷಿಗಳು ತರಕಾರಿ ಕೆತ್ತನೆ ಕಲಾವಿದ ಹರೀಶ್ ಅವರ ಕೈಯಲ್ಲಿ ಮೂಡಿವೆ.

    ರೇಷ್ಮೆ ಇಲಾಖೆಯಿಂದ ಹುಳು ಸಾಕಣೆೆ, ರೇಷ್ಮೆ ಗೂಡಿನ ಅಲಂಕಾರಿಕ ವಸ್ತು, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ, ತೋಟಗಾರಿಕೆಯಿಂದ ಹಣ್ಣು, ತರಕಾರಿಗಳ ಪ್ರದರ್ಶನ, ಹಸಿರು ಮನೆಯಲ್ಲಿ ಇಂಗ್ಲಿಷ್ ಸೌತೆಕಾಯಿ ಬೆಳೆಯ ಪ್ರಾತ್ಯಕ್ಷಿತೆ, ತೋಟಗಾರಿಕೆ ಬೆಳೆಗಳ ಸಸ್ಯ ಸಂತೆ, ಹೈಡ್ರೋಪೋನಿಕ್ಸ್ (ಜಲಕೃಷಿ), ಜಿಪಂನಿಂದ ಸ್ವಚ್ಛಮೇವ ಜಯತೇ ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಮುಕ್ತ ಆಂದೋಲನದ ಜಾಗೃತಿ ಮೂಡಿಸಲಾಯಿತು.

    ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಆಕರ್ಷಕ ರಾಶಿ, ಸಂಕ್ರಾಂತಿ ಹಬ್ಬದ ಚಿತ್ರಣ, ‘ಕೆಸಿ ವ್ಯಾಲಿಯಿಂದ ಹರಿಯುವ ನೀರು ಬರದ ನಾಡು ಜಲದ ನಾಡಾಗುವತ್ತ, ನೀಲಗಿರಿಯಿಂದ ಪಯಣ ಸಮಗ್ರ ಕೃಷಿಯತ್ತ’ ಎಂಬ ಶೀರ್ಷಿಕೆಯಡಿ ಅರಣ್ಯ ಇಲಾಖೆ ಪ್ರಾತ್ಷಕ್ಷಿಕೆ ಪ್ರದರ್ಶಿಸಿತು. ಕೆಜಿಎಫ್ ತಾಲೂಕಿನ ಇರವನಹಳ್ಳಿ ರೈತರೊಬ್ಬರ ದೇಸಿ ತಳಿಯಲ್ಲಿ ಒಂದಾದ ಪುಂಗನೂರು ಗಿಡ್ಡ ಗಮನ ಸೆಳೆಯಿತು.

    ರೈತರಿಗೆ ಸನ್ಮಾನ:
    ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೆ. ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ 10 ರೈತರು ಹಾಗೂ ತಾಲೂಕು ಮಟ್ಟದಲ್ಲಿ 25 ರೈತರನ್ನು ಸಂಸದ ಎಸ್. ಮುನಿಸ್ವಾಮಿ ಸನ್ಮಾನಿಸಿದರು.

    ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಡಿಸಿ ಜೆ.ಮಂಜುನಾಥ್, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ. ಗಾಯತ್ರಿ, ಹಿರಿಯ ಸಹಾಯಕ ನಿರ್ದೇಶಕ ಎಚ್. ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆ. ಶಿವಕುಮಾರ್ ಇತರರಿದ್ದರು. ಸಾರ್ವಜನಿಕರು, ಮಕ್ಕಳು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ಹೂವಿನ ಚೌಕಟ್ಟಿನ ಸೆಲ್ಫಿ ಕಾರ್ನರ್‌ನಲ್ಲಿ ನಿಂತು ಸೆಲ್ಫಿ ಪ್ರಿಯರು ಫೋಟೋ ಕ್ಲಿಕ್ಕಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts