28 ಪ್ರದೇಶಗಳಲ್ಲಿ ಪ್ರವಾಹ ಖಚಿತ, ಪ್ರವಾಹ ಉಂಟಾಗುವ 182 ಪ್ರದೇಶಗಳ ಗುರುತು

| ಗಿರೀಶ್ ಗರಗ, ಬೆಂಗಳೂರು

ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಸುರಿದಂತೆ ಬೆಂಗಳೂರಿನಲ್ಲೂ ಸುರಿದರೆ ಹಲವು ಬಡಾವಣೆಗಳು ಮುಳುಗುವುದು ಬಹುತೇಕ ಖಚಿತ!

ಹೀಗೆಂದು ಸ್ವತಃ ಬಿಬಿಎಂಪಿ ಹೇಳಿದೆ. ರಾಜಧಾನಿಯಲ್ಲಿ ಭಾರಿ ಮಳೆ ಸುರಿದರೆ 182 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲಿದೆ ಎಂದು ವರದಿ ಸಿದ್ಧಪಡಿಸಿದೆ. ಅದರಲ್ಲಿ 28 ಪ್ರದೇಶಗಳು ಅತೀ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕೊಂಚ ಮಳೆಯಾದರೂ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತ ವಾಗಲಿದೆ. ಆ ಸಮಸ್ಯೆ ನಿರಂತರವಾಗಿದ್ದು, ಪರಿಹಾರ ಕಂಡು ಕೊಳ್ಳಲು ಬಿಬಿಎಂಪಿ ಈವರೆಗೆ ಮುಂದಾಗಿಲ್ಲ. ಅದರ ನಡುವೆಯೇ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಪರಿಹಾರ ಕೇಂದ್ರದ (ಕೆಎಸ್​ಎನ್​ಡಿಎಂಸಿ) ಸಹ ಯೋಗದಲ್ಲಿ ಸಮೀಕ್ಷೆ ನಡೆಸಿದ್ದು, ಅದರಂತೆ 182 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿದೆ. ಅದರಲ್ಲಿ ರಾಜರಾಜೇಶ್ವರಿನಗರ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮಳೆಹಾನಿ ಪ್ರದೇಶಗಳಿವೆ ಎಂದು ತಿಳಿಸಲಾಗಿದೆ.

28 ಪ್ರದೇಶಗಳಲ್ಲಿ ಪ್ರವಾಹ ಪಕ್ಕಾ: ಸಮೀಕ್ಷೆ ವರದಿಯಲ್ಲಿರು ವಂತೆ 182 ಪ್ರದೇಶಗಳ ಪೈಕಿ 28 ಪ್ರದೇಶಗಳಲ್ಲಿ ಸಣ್ಣ ಮಳೆಗೂ ಪ್ರವಾಹ ಉಂಟಾಗುವುದು ಪಕ್ಕಾ ಎನ್ನುವಂತೆ ತಿಳಿಸಲಾಗಿದೆ. ಆ 28 ಪ್ರದೇಶಗಳು ಅತೀ ಸೂಕ್ಷ್ಮಪ್ರದೇಶಗಳೆಂದು ಕೂಡ ಗುರುತಿ ಸಲಾಗಿದೆ. ಹೀಗೆ ಗುರುತಿಸಿದ್ದು ಬಿಟ್ಟರೆ, ಪ್ರವಾಹ ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳೇನು ಎಂಬ ಬಗ್ಗೆ ಈವರೆಗೂ ನಿರ್ಧರಿಸಿಲ್ಲ.

ಪ್ರವಾಹ ಎಚ್ಚರಿಕೆಗೆ ಸೆನ್ಸರ್ ಅಳವಡಿಕೆ

ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಹಾರ ಕ್ರಮ ಕೈಗೊಳ್ಳುವ ಬದಲು ರಾಜಕಾಲುವೆಯಲ್ಲಿ ನೀರಿನ ಮಟ್ಟ ಎಷ್ಟಿದೆ, ಅಲ್ಲಿ ಎಷ್ಟು ಪ್ರಮಾಣದ ನೀರು ಹರಿದರೆ ಪ್ರವಾಹ ಉಂಟಾಗಲಿದೆ ಎಂಬುದನ್ನು ಅಳತೆ ಮಾಡಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಕೆಎಸ್​ಎನ್​ಡಿಎಂಸಿ 28 ಅತೀ ಸೂಕ್ಷ್ಮ ಪ್ರದೇಶಗಳ ಪೈಕಿ 18 ಸ್ಥಳಗಳ ರಾಜಕಾಲುವೆಯಲ್ಲಿ ನೀರಿನ ಮಟ್ಟ ಅಳೆವ ಸಂವೇದಕ (ಸೆನ್ಸರ್) ಅಳವಡಿಸಿದೆ. ಇತರ 10 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಶೀಘ್ರ ಸೆನ್ಸರ್ ಅಳವಡಿಕೆ ಮಾಡಲು ತೀರ್ವನಿಸಲಾಗಿದೆ. ಕೆಎಸ್​ಎನ್​ಡಿಎಂಸಿ ತಲಾ 35 ಸಾವಿರ ರೂ. ವೆಚ್ಚ ಮಾಡಿ 18 ಸೆನ್ಸರ್ ಅಳವಡಿಸಿದೆ. ಸೆನ್ಸರ್​ಗೆ ವಿದ್ಯುತ್ ಪ್ರವಹಿಸಲು ಸೋಲಾರ್ ಫಲಕ ಅಳವಡಿಸಲಾಗಿದೆ. ನಿತ್ಯ ಕೆಎಸ್​ಎನ್​ಡಿಎಂಸಿ ನಿಯಂತ್ರಣ ಕೊಠಡಿಗೆ ಸೆನ್ಸರ್ ಮೂಲಕ ರಾಜಕಾಲುವೆ ನೀರಿನ ಮಟ್ಟದ ಮಾಹಿತಿ ಬರುತ್ತಿದ್ದು, ಪ್ರವಾಹವಾಗುವ ಮಾಹಿತಿ ತಿಳಿದ ಕೂಡಲೇ ಆ ಸ್ಥಳದ ಬಗ್ಗೆ ಎಚ್ಚರಿಕೆ ಸಂದೇಶವನ್ನು ಬಿಬಿಎಂಪಿ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅದನ್ನಾಧರಿಸಿ, ಆ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಪ್ರವಾಹ ತಡೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಟ್ರ್ಯಾಶ್ ಬ್ಯಾರಿಯರ್

ಸೆನ್ಸರ್ ಜತೆಗೆ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದ್ದ ಕಸವನ್ನು ತೆರವು ಗೊಳಿಸಲು ಐದು ಕಡೆ ಟ್ರಾ್ಯಶ್ ಬ್ಯಾರಿಯರ್ (ಕಸ ತಡೆಯುವ ಹಗುರ ಅಲ್ಯೂಮಿನಿಯಂ ಬಲೆ) ಅಳವಡಿಸಲಾಗಿದೆ. ಉಳಿದ ಕಡೆ ಆ ರೀತಿಯ ಕ್ರಮ ಕೈಗೊಂಡಿಲ್ಲ. ಉಳಿದೆಯೂ ಅದನ್ನು ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ ಎಂದು ರಾಜಕಾಲುವೆ ವಿಭಾಗದ ಮುಖ್ಯಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ಅತಿ ಸೂಕ್ಷ್ಮ ಪ್ರದೇಶಗಳು

ಕಮಿಷನರೇಟ್ ರಸ್ತೆ, ಆನಂದನಗರ, ದೊಮ್ಮಲೂರು, ಬಾಬುಸಾಬ್​ಪಾಳ್ಯ, ಮಿಲ್ಲರ್ ಟ್ಯಾಂಕ್ ಬಂಡ್, ಸೆಪ್ಪಿಂಗ್ಸ್ ರಸ್ತೆ, ನಾಗಣ್ಣ ನಗರ, ಕೊಟ್ಟಿಗೆಪಾಳ್ಯ, ಮತ್ತಿಕೆರೆ ಕೆಇಬಿ ಕಾಂಪೌಂಡ್, ಕೆಎಂಎಫ್ ಜಂಕ್ಷನ್ ಸ್ಲಂ ಬೋರ್ಡ್ ಹತ್ತಿರ, ಮಾಗಡಿ ಪೊಲೀಸ್ ಠಾಣೆ, ಗಾಳಿ ಆಂಜನೇಸ್ವಾಮಿ ದೇವಸ್ಥಾನ ರಸ್ತೆ, ಶ್ರೀನಿವಾಸನಗರ, ಇಡಬ್ಲ್ಯೂಎಸ್ ರ್ವಂಗ್ ಕಾಲನಿ 3ನೇ ಹಂತ, ಹೆಣ್ಣೂರು ಮುಖ್ಯ ರಸ್ತೆ, ವಿನಾಯಕ ಲೇಔಟ್, ಕಲ್ಲಪ ಲೇಔಟ್ ಬಸವನಗರ ಹತ್ತಿರ, ಪಟ್ಟಾಲಮ್ಮ ಲೇಔಟ್, ಪೈ ಲೇಔಟ್, ಯಲಚೇನಹಳ್ಳಿ, ಶಿವಾನಂದನಗರ, ಶ್ರೀಹರಿ ಲೇಔಟ್, ಚೌಡೇಶ್ವರಿನಗರ, ಶಂಕರಪ್ಪ ಗಾರ್ಡನ್, ಭುವನೇಶ್ವರಿನಗರ, ಕೃಷ್ಣಪ್ಪ ಗಾರ್ಡನ್, ಪಿಡಬ್ಲ್ಯೂಡಿ ಕ್ವಾರ್ಟಸ್ ವಿಲ್ಸನ್ ಗಾರ್ಡನ್ ಹತ್ತಿರ, ಮಾರುತಿನಗರ.2

12 ಸೆ.ಮೀ. ಮಳೆಗೆ ಪ್ರವಾಹ ಗ್ಯಾರಂಟಿ

ಬಿಬಿಎಂಪಿಯಲ್ಲಿ ಸಾಮಾನ್ಯವಾಗಿ 8ರಿಂದ 12 ಸೆಂ.ಮೀ. ಮಳೆಯಾಗು ತ್ತದೆ. ಅದಕ್ಕಿಂತ ಹೆಚ್ಚಿನ ಮಳೆಯಾದರೆ, ಪ್ರವಾಹದ ಸನ್ನಿವೇಶ ಸೃಷ್ಟಿಯಾಗುತ್ತದೆ.

ನಗರದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರವಾಹ ಉಂಟಾಗಬಹುದಾದ ಪ್ರದೇಶದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

| ಗಂಗಾಂಬಿಕೆ, ಮೇಯರ್

===

Leave a Reply

Your email address will not be published. Required fields are marked *