ಮೂಡಲಗಿ: ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಭರವಸೆ ನೀಡಿದರು.
ತಾಲೂಕಿನ ಘಟಪ್ರಭಾ ನದಿತೀರದ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಬಹುತೇಕ ಕಡೆಗಳಲ್ಲಿ ನದಿ ತೀರದ ಸಂತ್ರಸ್ತರು ಸೂರು ಸಮಸ್ಯೆ ಮುಂದಿಟ್ಟುಕೊಂಡು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಕಲ್ಪಿಸಲಿದ್ದಾರೆ.
ನೀರಿನ ಮಟ್ಟ ಇಳಿಕೆಯಾಗುವಷ್ಟರಲ್ಲಿ ಮತ್ತೆ ಏರಿಕೆಯಾಗಿದೆ. ಹೀಗಾಗಿ ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ತೆರಳುವಂತೆ ಕೋರಿದರು. ನೀರು ಹೆಚ್ಚಳದಿಂದ ಹಾಳಾಗಿರುವ ತಿಗಡಿ ಸೇತುವೆ ರಸ್ತೆ ಪರಿಶೀಲಿಸಿದರು. ನಂತರ ಸುಣಧೋಳಿ, ಪಿ.ವೈ. ಹುಣಶ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಸೂಚಿಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಊಟೋಪಚಾರ ಪರಿಶೀಲಿಸಿದರು.
ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ಮುಖಂಡರಾದ ಎ.ಟಿ. ಗಿರಡ್ಡಿ, ಎಂ.ಎಂ.ಪಾಟೀಲ, ವೈ.ಆರ್. ಪಾಟೀಲ, ಹಣಮಂತ ಅಂಬಿ, ಗುರುರಾಜ ಪಾಟೀಲ, ಸುಭಾಸ ಕಮತಿ, ಪ್ರಕಾಶ ಪಾಟೀಲ, ಗ್ರಾಪಂ ಅಧ್ಯಕ್ಷರಾದ ಸಿದ್ದಪ್ಪ ದೇವರಮನಿ, ಮುತ್ತೆವ್ವ ಲಗಳಿ, ಜಗದೀಶ ಡೊಳ್ಳಿ, ರಾಮಪ್ಪ ಪೂಜೇರಿ, ಶಿವಕುಮಾರ ಅಂಗಡಿ, ನೀಲಪ್ಪ ಕೇವಟಿ ಇತರರಿದ್ದರು.