| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳು ಇದೀಗ ಸರ್ಕಾರ ನೀಡುವ ಪರಿಹಾರದಿಂದ ವಂಚಿತವಾಗುವ ಆತಂಕಕ್ಕೆ ಒಳಗಾಗಿವೆ!
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತ 1.12 ಲಕ್ಷ ಕುಟುಂಬಗಳ ಪೈಕಿ ಸಾವಿರಕ್ಕೂ ಕುಟುಂಬಗಳಿಗೆ ವಾರಸಾ, ಪಡಿತರ ಚೀಟಿ, ಆಧಾರ ಕಾರ್ಡ್ ಸೇರಿದಂತೆ ಇನ್ನಿತರರ ದಾಖಲೆಗಳು ಇಲ್ಲ. ಜತೆಗೆ ಹಾನಿಯಾಗಿರುವ ಮನೆ, ಜಮೀನು ಸೇರಿದಂತೆ ಯಾವುದೇ ಆಸ್ತಿಗಳು ಸಂತ್ರಸ್ತರ ಹೆಸರಿನಲ್ಲಿ ಇಲ್ಲ. ಬಹುತೇಕ ಕಡೆ ಮೃತಪಟ್ಟ ತಂದೆ ಅಥವಾ ತಾಯಿ ಹೆಸರಿನಲ್ಲಿ ಮನೆ, ಜಮೀನುಗಳಿವೆ.
ಅಥಣಿ, ರಾಯಬಾಗ, ಚಿಕ್ಕೋಡಿ, ಗೋಕಾಕ ತಾಲೂಕಿನ ವ್ಯಾಪ್ತಿಯ ಹಳ್ಳಿಗಳಲ್ಲಿ ಸತ್ತು ಹೋಗಿರುವ ತಂದೆ, ತಾಯಿ ಹೆಸರಿನಲ್ಲಿಯೇ ಮನೆ, ಜಮೀನುಗಳಿವೆ. ಆಸ್ತಿಗೆ ನಿಜವಾದ ಮಾಲೀಕ ಯಾರು ಎಂಬುದನ್ನು ಗುರುತಿಸಲು ಸಂತ್ರಸ್ತರ ಬಳಿ ವಾರಸಾ ಪತ್ರಗಳು ಇಲ್ಲ. ಕೆಲವು ಕಡೆ ಅವಿಭಕ್ತ ಕುಟುಂಬಗಳು ವರ್ಷಗಳಿಂದ ವಿಭಜನೆಯಾಗಿವೆ. ಆದರೆ, ಆಸ್ತಿಗಳು ಎಲ್ಲ ಹೆಸರಿನಲ್ಲಿ ಜಂಟಿಯಾಗಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಒಬ್ಬರಿಗೆ ಪರಿಹಾರ ನೀಡಿದರೆ ಇನ್ನೊಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಪರಿಹಾರ ಯಾರ ಹೆಸರಿಗೆ ನೀಡಬೇಕು ಎಂಬ ಗೊಂದಲಕ್ಕೆ ಅಕಾರಿಗಳು ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಹಾಗೂ ಬಳ್ಳಾರಿ ನಾಲಾಗಳ ಪ್ರವಾಹ ಹಾಗೂ ಅತಿವೃಷ್ಟಿಯಿಂದ 872 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು 112,702 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 69381 ಮನೆಗಳು ಹಾನಿಯಾಗಿದ್ದು, ಅದರಲ್ಲಿ 53839 ಮನೆಗಳ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರಕ್ಕಾಗಿ ಡಾಟಾ ಎಂಟ್ರಿ ಮಾಡಲಾಗಿದೆ. ಆದರೆ, ದಾಖಲಾತಿಗಳ ಸಮಸ್ಯೆ, ಇನ್ನಿತರರ ಕಾರಣಗಳಿಂದಾಗಿ 15542 ಮನೆಗಳ ಪರಿಹಾರ ಅರ್ಜಿಗಳು ಬಾಕಿ ಉಳಿದುಕೊಂಡಿವೆ.
ದಾಖಲೆಗಳು ದೊರೆತ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸಂತ್ರಸ್ತರ ಕುಟುಂಬಕ್ಕೆ ತಲಾ 10 ಸಾವಿರ 1.12 ಲಕ್ಷ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಆದರೆ, ಮನೆ, ಬೆಳೆ ಹಾನಿ ಪರಿಹಾರ ನೀಡಲು ಸಂಬಂಸಿದ ದಾಖಲೆಗಳು ಇದ್ದರೆ ಮಾತ್ರ ಡಾಟಾ ಎಂಟ್ರಿಯಲ್ಲಿ ಹೆಸರು ತೆಗೆದುಕೊಳ್ಳುತ್ತದೆ. ಇಲ್ಲದಿದ್ದರೆ ರಿಜೆಕ್ಟ್ ಆಗುತ್ತದೆ. ದಾಖಲೆಗಳು ಇಲ್ಲದೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಸಂತ್ರಸ್ತರ ಹೆಸರಿನಲ್ಲಿ ಆಸ್ತಿಗಳಿರುವುದು ಸರ್ಕಾರಿ ದಾಖಲೆಗಳಲ್ಲಿ ಇಲ್ಲ. ಮೂಲ ಆಸ್ತಿ ಮಾಲೀಕರ ವಾರಸಾ ಪತ್ರ, ಸೇರಿದಂತೆ ಯಾವುದೆ ದಾಖಲೆ ಇಲ್ಲ. ಹಾಗಾಗಿ ಪರಿಹಾರ ಅರ್ಜಿ ಸ್ವೀಕರಿಸುವುದನ್ನು ತಡೆ ಹಿಡಿಯಲಾಗಿದೆ ಎಂದು ಉಪವಿಭಾಗಾಕಾರಿಗಳು, ತಾಲೂಕು ತಹಸೀಲ್ದಾರರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಾರಸಾ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳು ಸಂತ್ರಸ್ತರ ಬಳಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆ ಅರ್ಜಿಗಳು ಬಾಕಿ ಉಳಿದಿವೆ. ಈ ಕುರಿತು ಪರಿಶೀಲನೆ ನಡೆಸಿ ಶೀಘ್ರದಲ್ಲಿ ಪರಿಹಾರ ನೀಡಲಾಗುವುದು.
| ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾದಿಕಾರಿವಿವಿಧ ದಾಖಲಾತಿಗಳ ಕೊರತೆಯಿಂದ ನೆರೆ ಚೆಕ್ ವಿತರಣೆ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ ಮಾಡಲಾಗುವುದು. ಕಂದಾಯ ಇಲಾಖೆಯಲ್ಲಿ ಲಭ್ಯವಿರುವ ದಾಖಲೆಗಳನ್ನು ಪತ್ತೆ ಹಚ್ಚಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ.
| ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ