ತೆರವಾಗದ ಹೆದ್ದಾರಿ ಚರಂಡಿ ಹೂಳು

ಲೋಕೇಶ್ ಸುರತ್ಕಲ್
ಮಳೆಗಾಲಕ್ಕೆ ಮುನ್ನ ಪ್ರತಿ ವರ್ಷ ಚರಂಡಿ ಹೂಳು ತೆಗೆಯುವ ಕ್ರಮವಿದೆ. ಆದರೆ, ಸುರತ್ಕಲ್, ಹೊಸಬೆಟ್ಟು, ಕುಳಾಯಿ ಪರಿಸರದ ಚತುಷ್ಪಥ ಹೆದ್ದಾರಿ ಪಕ್ಕದ ಚರಂಡಿಗಳಲ್ಲಿ ಪ್ರಸಕ್ತ ವರ್ಷ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಚರಂಡಿ ಹೂಳು ತೆಗೆಯದೆ, ಮೋರಿಗಳು ಮುಚ್ಚಿ ಹೋಗಿದ್ದು, ಹೊಸಬೆಟ್ಟು ಕುಳಾಯಿ, ಸುರತ್ಕಲ್ ಬಳಿ ಸುಮಾರು 10ರಿಂದ 20 ಮನೆಗಳು, ಹಲವಾರು ಅಂಗಡಿಗಳಿಗೆ ಕೃತಕ ನೆರೆ ನೀರು ನುಗ್ಗುವ ಭೀತಿ ಎದುರಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎನ್‌ಎಚ್‌ಎಐ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆಯಲು ಇನ್ನೂ ಕ್ರಮಕೈಗೊಂಡಿಲ್ಲ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೇ ಅಂತ್ಯದವರೆಗೂ ನೀತಿ ಸಂಹಿತೆ ಜಾರಿಯಲ್ಲಿದ್ದುದು ಇದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಕುಳಾಯಿಯಲ್ಲಿ ಪ್ರತಿವರ್ಷ ಮನೆ ಅಂಗಡಿಗಳಿಗೆ ನೆರೆ ನೀರು ನುಗ್ಗುತ್ತಿದೆ. ಈ ಭಾಗದಲ್ಲಿ ಸರ್ವೀಸ್ ರಸ್ತೆ, ಚರಂಡಿ ಇಲ್ಲದಿರುವುದು ಕಾರಣ ಎಂದು ದೂರಲಾಗಿತ್ತು. ಈ ವರ್ಷವೂ ಚರಂಡಿ ಹೂಳು ತೆಗೆದಿಲ್ಲ. ಪರಿಣಾಮ ಈ ಬಾರಿಯೂ ಕೃತಕ ನೆರೆ ಭೀತಿ ತಪ್ಪದು ಎನ್ನುತ್ತಾರೆ ಸ್ಥಳೀಯ ನಿವಾಸಿ ರಮೇಶ್.

10 ವರ್ಷದಿಂದ ಪರಿಹಾರ ಸಿಕ್ಕಿಲ್ಲ: ಹೊಸಬೆಟ್ಟು ಜಂಕ್ಷನ್ ಬಳಿ ಹೆದ್ದಾರಿಗೆ ಅಡ್ಡಲಾಗಿ ಪೂರ್ವದಿಂದ ಪಶ್ಚಿಮಕ್ಕೆ ಇರುವ ಮೋರಿ ಅವೈಜ್ಞಾನಿಕ ರೀತಿ ನಿರ್ಮಾಣವಾಗಿದ್ದು. ಅದರಲ್ಲಿ ಹೂಳು ತುಂಬಿದೆ. ಇದರ ಜತೆಗೆ ಚತುಷ್ಪಥ ಹೆದ್ದಾರಿ ಆರಂಭವಾದ ಬಳಿಕ ಸುಮಾರು 10 ವರ್ಷದಿಂದ ಇಲ್ಲಿನ ಮೋಹನ್, ಶಂಕರ್, ನಾಗೇಶ್, ಮಾಧವ, ಶೇಖರ್ ಮೊದಲಾದವರ ಮನೆ ಹಾಗೂ ಹೋಟೆಲ್ ಸಂಕೀರ್ಣಗಳಿಗೆ ಸಾಧಾರಣ ಮಳೆ ಬಂದರೂ ಕೃತಕ ನೆರೆ ನೀರು ನುಗ್ಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಹೊಸಬೆಟ್ಟು ಕೋಡ್ದಬ್ಬು ದೈವಸ್ಥಾನ ಬಳಿ ಕಳೆದ ವರ್ಷ ಭಾರೀ ಮಳೆಗೆ ಸೃಷ್ಟಿಯಾದ ಕೃತಕ ನೆರೆಯಿಂದ ಹಾನಿಗೊಂಡ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿತ್ತು. ಮನೆಗಳ ರಕ್ಷಣೆಗೆ ಹೆದ್ದಾರಿಯ ಡಿವೈಡರ್ ಕತ್ತರಿಸಿ ನೆರೆ ನೀರನ್ನು ಹೆದ್ದಾರಿ ಮೂಲಕ ಪಶ್ಚಿಮದ ಕಡೆಗೆ ಹರಿಸುವುದು ಅನಿವಾರ್ಯವಾಗಿತ್ತು. ಈ ವರ್ಷವೂ ಕೃತಕ ನೆರೆಭೀತಿ ತೊಲಗಿಲ್ಲ. ಸರ್ವೀಸ್ ರಸ್ತೆ ಇಲ್ಲದೆ ಚರಂಡಿ ಜಾಗ ಅತಿಕ್ರಮಿಸಿರುವುದು ಸಮಸ್ಯೆಗೆ ಕಾರಣ.
ಸತೀಶ್, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *