Friday, 16th November 2018  

Vijayavani

Breaking News

ಗೋಡೆ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ

Thursday, 12.07.2018, 3:51 PM       No Comments

 

ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಾಗರ ಪಟ್ಟಣದ ಬೆಳಲಮಕ್ಕಿಯಲ್ಲಿ ಪಾತ್ರೆ ತೊಳೆಯುವಾಗ ರೈಸ್​ವಿುಲ್ ಕಂಪೌಂಡ್ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಪ್ರವಾಹದ ಭೀತಿ ಎದುರಾಗಿದೆ. ಅಲ್ಲದೆ, ತೀರ್ಥಹಳ್ಳಿ ತಾಲೂಕು ಮತ್ತು ಪಟ್ಟಣದ ಹಲವೆಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸಾಗರದ ಬೆಳಲಮಕ್ಕಿಯಲ್ಲಿ ರೈಸ್​ವಿುಲ್​ನ ಕಾಂಪೌಂಡ್ ಕುಸಿದು ಪಕ್ಕದ ಮನೆಯ ಕಲ್ಲಮ್ಮ (60) ಮೃತಪಟ್ಟಿದ್ದಾರೆ. ಎಡೆಬಿಡದೆ ಸುರಿದ ಮಳೆಯಿಂದ ಕಾಂಪೌಂಡ್ ಕುಸಿದಿದ್ದು, ಗುರುವಾರ ಬೆಳಗ್ಗೆ ಬಾವಿ ಸಮೀಪ ಪಾತ್ರೆ ತೊಳೆಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಪತಿ ನಿಧನರಾದ ಬಳಿಕ ಕಲ್ಲಮ್ಮ ಪುತ್ರಿ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿಯ ರತ್ನಮ್ಮ ಎಂಬುವರ ಮನೆ ಹಿಂಬದಿ ಗುಡ್ಡ ಕುಸಿದು ಗೋಡೆಗೆ ಹಾನಿಯಾಗಿದೆ. ಅಲ್ಲದೆ, ಮನೆ ಕುಸಿಯುವ ಹಂತದಲ್ಲಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ. ಪಟ್ಟಣದ ಸೀಬಿನ ಕೆರೆ ಬಳಿ ಮನೆಗಳ ಮೇಲೆ ಗುಡ್ಡ ಕುಸಿದಿದೆ. ಪಟ್ಟಣ ಪಂಚಾಯಿತಿಯಿಂದ ನಿರ್ವಿುಸಿ ಬಾಡಿಗೆಗೆ ನೀಡಿದ್ದ ಮೂರು ಮಳಿಗೆಗಳ ಮೇಲೂ ಗುಡ್ಡ ಕುಸಿದಿದ್ದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನೂ ಹೀಗೆ ಮಳೆ ಮುಂದುವರಿದರೆ ಮಳಿಗೆಗಳು ಕುಸಿಯುವ ಆತಂಕ ಎದುರಾಗಿದೆ.

ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗಾಪಂ ವ್ಯಾಪ್ತಿಯ ಮಾಗರವಳ್ಳಿಯಲ್ಲಿ ಸೋಗೆ ಮನೆ ಕುಸಿದು ಬಸವ(58) ಹಾಗೂ ಅವರ ಮೊಮ್ಮಗ ಸುಬ್ರಹ್ಮಣ್ಯ(10) ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಸೋಗೆ ಮನೆ ಗೋಡೆಗಳು ತೇವಗೊಂಡು ಮನೆ ಕುಸಿದಿದೆ. ಮನೆಯ ಒಳಗಿದ್ದ ಬಸವ ಅವರ ಪತ್ನಿ, ಸೊಸೆ ಹಾಗೂ ಮೊಮ್ಮಗಳು ಅಪಾಯದಿಂದ ಪಾರಾಗಿದ್ದು, ಗಾಯಗೊಂಡ ಇಬ್ಬರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸನಗರದಲ್ಲಿ ಮರಗಳು ಬಿದ್ದಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ಶಿಕಾರಿಪುರ ತಾಲೂಕು ಹೊಸೂರು ಜಲಾಶಯದ ಜಲಾನಯನ ಪ್ರದೇಶವಾದ ಗೌತಮಪುರ ಹಾಗೂ ತ್ಯಾಗರ್ತಿ ಗ್ರಾಪಂ ವ್ಯಾಪ್ತಿ ಹಳ್ಳಿಗಳಲ್ಲಿ ಮಳೆ ಆರ್ಭಟ ಹೆಚ್ಚಿದೆ. ಸೊರಬ ತಾಲೂಕಿನ ಚಂದ್ರಗುತ್ತಿ, ಬನವಾಸಿ ಕಡೆ ಹಾಗೂ ಶಿರಾಳಕೊಪ್ಪ ಭಾಗದಲ್ಲೂ ಮಳೆಯಾಗುತ್ತಿದೆ.

ತುಂಬಿ ಹರಿಯುತ್ತಿರುವ ತುಂಗೆ: ಶಿವಮೊಗ್ಗದಲ್ಲಿ ತುಂಗಾ ನದಿಯ ಮಟ್ಟ ಏರಿಕೆ ಕಂಡಿರುವುದರಿಂದ ಕೊರ್ಲಪಯ್ಯನ ಛತ್ರ ಮಂಟಪ ಸಂಪೂರ್ಣ ಮುಳುಗಿದೆ. ಮಂಟಪ ಮುಳುಗಿರುವ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ನದಿ ತುಂಬಿರುವುದರಿಂದ ಜನರು ಗಂಗೆಗೆ ಪೂಜೆ ಸಲ್ಲಿಸುತ್ತಿದ್ದಾರೆ.

ದಾಖಲೆ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 412.80 ಮಿಮೀ ಮಳೆಯಾಗಿದ್ದು, ಸರಾಸರಿ 58.97 ಮಿಮೀ ಮಳೆ ದಾಖಲಾಗಿದೆ. ಹೊಸನಗರದಲ್ಲಿ 121.00 ಮಿಮೀ, ತೀರ್ಥಹಳ್ಳಿಯಲ್ಲಿ 107.20 ಮಿಮೀ, ಸಾಗರದಲ್ಲಿ 85.40 ಮಿಮೀ, ಸೊರಬದಲ್ಲಿ 32.00 ಮಿಮೀ, ಶಿಕಾರಿಪುರದಲ್ಲಿ 26.40 ಮಿಮೀ, ಶಿವಮೊಗ್ಗದಲ್ಲಿ 22.60 ಮಿಮೀ ಹಾಗೂ ಭದ್ರಾವತಿಯಲ್ಲಿ 18.20 ಮಿಮೀ ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಮಟ್ಟ 1,785.90 ಅಡಿಗೆ ಏರಿಕೆಯಾಗಿದ್ದು, 51,675 ಕ್ಯೂಸೆಕ್ ಒಳಹರಿವಿದೆ. ಭದ್ರಾ ಜಲಾಶಯದ ನೀರಿನ ಮಟ್ಟ 162.10 ಅಡಿಗೆ ಏರಿಕೆ ಕಂಡಿದೆ. 33,674 ಕ್ಯೂಸೆಕ್ ಒಳಹರಿವಿದ್ದು, 237 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ತುಂಗಾ ಜಲಾಶಯಕ್ಕೆ 66,274 ಕ್ಯೂಸೆಕ್ ನೀರಿನ ಒಳಹರಿವಿದ್ದು, 65,115 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸೊರಬ: ತಾಲೂಕಿನಲ್ಲಿ ಮಳೆ ಬಿಟ್ಟು ಬಿಟ್ಟು ಜೋರಾಗಿ ಸುರಿಯುತ್ತಿದ್ದು ನದಿ, ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ನದಿ ಪಾತ್ರದ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಕಡಸೂರು, ಜೋಳದಗುಡ್ಡೆ, ಚಂದ್ರಗುತ್ತಿಯ ಕೆಲ ಭಾಗಗಳಲ್ಲಿ ವರದಾ ನದಿ ತುಂಬಿ ಜಮೀನುಗಳಿಗೆ ನುಗ್ಗಿದೆ. ಇದರಿಂದ ನೂರಾರು ಎಕರೆ ಅಡಕೆ, ಬಾಳೆ ಮತ್ತು ಭತ್ತದ ಜಮೀನುಗಳು, ಜಮೀನಿಗೆ ಹೋಗುವ ರಸ್ತೆಗಳು ಜಲಾವೃತವಾಗಿವೆ.

 

Leave a Reply

Your email address will not be published. Required fields are marked *

Back To Top