ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ಭಾರತೀಯರಿಂದ 15 ಲಕ್ಷ ರೂ. ದೇಣಿಗೆ

ಬೆಂಗಳೂರು: ಪ್ರವಾಹ ಪೀಡಿತ ಕೇರಳ ಮತ್ತು ಅತಿವೃಷ್ಟಿ ಪೀಡಿತ ಕೊಡಗಿಗೆ ಕತಾರ್​ ದೇಶದಲ್ಲಿರುವ ಭಾರತೀಯರು ಸಹಾಯಹಸ್ತ ಚಾಚಿದ್ದಾರೆ.

ಭಾರತೀಯ ಧೂತಾವಾಸದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಮುದಾಯದ ಸೇವಾ ಸಂಸ್ಥೆಯಡಿಯಲ್ಲಿ (ಇಂಡಿಯನ್ ಕಮ್ಯೂನಿಟಿ ಬೇನೆವೋಲೆಂಟ್ ಫೋರಮ್-ICBF) ಕೊಡಗಿನ ಜನರಿಗಾಗಿ 15 ಲಕ್ಷ ರೂ.ದೇಣಿಗೆ ಸಂಗ್ರಹ ಮಾಡಿ ನೀಡಿದ್ದಾರೆ.

ಭಾರತೀಯ ರಾಯಭಾರಿಯಾದ ಪಿ.ಕುಮರನ್​ ಮಾರ್ಗದರ್ಶನದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆದಿತ್ತು. ನ.24ರಂದು ಕತಾರ್​ನಿಂದ ಆಗಮಿಸಿದ್ದ ಐಸಿಬಿಎಫ್​ ಕಾರ್ಯದರ್ಶಿ ಮಹೇಶ್​ಗೌಡ, ಭಾರತೀಯ ಸಾಂಸ್ಕೃತಿಕ ಸಂಸ್ಥೆ ಮಿಲನ್​ ಅರುಣ್​, ಐಸಿಬಿಎಫ್​ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಅರವಿಂದ್​ ಪಾಟೀಲ್​, ಕರ್ನಾಟಕ ಸಂಘದ ಉಪಾಧ್ಯಕ್ಷ ರವಿ ಶೆಟ್ಟಿ, ಕತಾರ್​ನಲ್ಲಿ ಕನ್ನಡ ಚಲನಚಿತ್ರಗಳ ವಿತರಕ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ 15 ಲಕ್ಷ ರೂ.ಚೆಕ್​ ಅನ್ನು ಹಸ್ತಾಂತರಿಸಿದ್ದಾರೆ.
ದೇಣಿಗೆ ಸ್ವೀಕರಿಸಿದ ಎಚ್​.ಡಿ.ಕುಮಾರಸ್ವಾಮಿ, ಕತಾರ್​ನ ಭಾರತೀಯರಿಗೆ ಧನ್ಯವಾದಗಳನ್ನು ತಿಳಿಸಿದರು.

ಸಂತಾಪ
ಕತಾರ್ ಪ್ರತಿನಿಧಿಗಳು ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಹಾಗೂ ನಟ ಅಂಬರೀಷ್, ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರ ನಿಧನ ಹಾಗೂ ಮಂಡ್ಯ ಬಸ್ ದುರ್ಘಟನೆಯಲ್ಲಿ ಮಡಿದವರಿಗೆ ಸಂತಾಪ ವ್ಯಕ್ತಪಡಿಸಿದರು.