ತೋಡು ಮುಚ್ಚಿದ್ದರಿಂದಲೇ ಮಂಗಳೂರು ‘ಮುಳುಗಡೆ’!

ಮಂಗಳೂರು: ಪ್ರಸಕ್ತ ವರ್ಷ ಮೇ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಮಂಗಳೂರು ಮುಳುಗಲು ಕಾರಣವಾಗಿದ್ದು ತೋಡುಗಳ ಬದಿಯಲ್ಲಿನ ಅತಿಕ್ರಮಣ ಹಾಗೂ ಹುಲುಸಾಗಿ ಬೆಳೆದಿರುವ ಕಳೆಗಿಡಗಳು ಎಂಬ ಅಂಶವನ್ನು ಎನ್‌ಐಟಿಕೆ ತಜ್ಞರ ತಂಡ ನಡೆಸಿದ ಅಧ್ಯಯನ ತಿಳಿಸಿದೆ.

ಕೃತಕ ನೆರೆಗೆ ಮಹಾನಗರಿ ತತ್ತರಿಸಿದ್ದ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕೋರಿದ್ದರು. ಅದರಂತೆ ಪ್ರಾಥಮಿಕ ವರದಿಯನ್ನು ತಜ್ಞರ ತಂಡ ಸಲ್ಲಿಸಿದೆ.
ತಜ್ಞರ ವರದಿ ಪ್ರಕಾರ ತುರ್ತಾಗಿ ಆಗಬೇಕಾಗಿರುವುದು ಹೆದ್ದಾರಿ ಬದಿಯಲ್ಲಿನ ತೋಡುಗಳ ಅಗಲವನ್ನು ಕನಿಷ್ಠ 30 ಅಡಿ ಇರುವಂತೆ ಕಾಯ್ದುಕೊಳ್ಳುವುದು. ತೋಡಿನ ಇಕ್ಕೆಲಗಳಲ್ಲಿ ಕಟ್ಟಡಗಳ ನಿರ್ಮಾಣದಿಂದ ಅಕ್ಕಪಕ್ಕದಿಂದ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ 30 ಅಡಿ ಅಗಲ ಕಾಯ್ದುಕೊಳ್ಳಲೇಬೇಕೆಂದು ವರದಿ ಹೇಳಿದೆ.

ತೋಡಿಗೆ ತ್ಯಾಜ್ಯ ಬಿಡುವುದರಿಂದಲೇ ಕಳೆಗಿಡ ಸಮೃದ್ಧವಾಗಿ ಬೆಳೆಯುತ್ತಿದೆ. ಬೆಳೆದು ನಿಂತ ಕಳೆಗಿಡಗಳು ನೀರಿನ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಹೀಗಾಗಿ ತೋಡುಗಳಿಗೆ ಕೊಳಕು ತ್ಯಾಜ್ಯ ಬಿಡುವುದನ್ನು ತಡೆಯಬೇಕೆಂದು ತಜ್ಞರು ಹೇಳಿದ್ದಾರೆ.

ಬಂಗ್ರಕೂಳೂರು ತೋಡಿನಲ್ಲಿ ಹೂಳು ಸೇರಿಕೊಂಡಿದೆ, ಇದರಿಂದಾಗಿ ಹರಿವು ನಿಧಾನವಾಗಿದ್ದು, ಹೂಳು ತೆಗೆಯುವುದು ಸೂಕ್ತ ಎನ್ನುವುದು ತಜ್ಞರ ಅಭಿಮತ.

ಅಧ್ಯಯನ ಹೇಗೆ?: ಎನ್‌ಐಟಿಕೆ ಅಪ್ಲೈಡ್ ಮೆಕಾನಿಕ್ಸ್ ವಿಭಾಗದ ತಜ್ಞರು ಈ ಅಧ್ಯಯನ ಕೈಗೊಂಡಿದ್ದಾರೆ. ನೆರೆ ಸಮಸ್ಯೆ ಉಂಟಾದ ಸ್ಥಳಗಳಲ್ಲಿ ಕ್ಷೇತ್ರ ಅಧ್ಯಯನದ ಜತೆಗೆ ಉಪಗ್ರಹ ನಕ್ಷೆಗಳ ಅಧ್ಯಯನ ಕೈಗೊಳ್ಳಲಾಗಿದೆ. ಈ ಮೂಲಕ 1977ರಿಂದ 2018ರವರೆಗೆ ಆಗಿರುವ ಬದಲಾವಣೆಗಳೇನು ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ಕೂಳೂರು, ಬಂಗ್ರಕೂಳೂರು, ಕೋಡಿಕಲ್, ಕೊಟ್ಟಾರ ಚೌಕಿ, ಕುದ್ರೋಳಿ, ಲಾಲ್‌ಬಾಗ್, ಪಡೀಲ್ ಹಾಗೂ ಬಲ್ಲಾಳ್‌ಬಾಗ್‌ನಲ್ಲಿ ಅಧ್ಯಯನ ನಡೆಸಲಾಗಿದೆ. ತೋಡು ಅತಿಕ್ರಮಣವಾದ ಸ್ಥಳಗಳ ಸರ್ವೇ ನಂಬರ್‌ಗಳನ್ನು ಪ್ರಾಥಮಿಕ ವರದಿಯಲ್ಲಿ ನೀಡಲಾಗಿದೆ. ಇದನ್ನು ದೃಢಪಡಿಸಲು ಸ್ಯಾಟಲೈಟ್ ಇಮೇಜಿಂಗ್ ಬಳಕೆ ಮಾಡಿ ಅಧಿಕ ಸ್ಪಷ್ಟತೆಯ ವೈಮಾನಿಕ ಚಿತ್ರಣಗಳೊಂದಿಗೆ ಸಮೀಕ್ಷೆ ನಡೆಸಬೇಕಿದೆ. ಇದಕ್ಕೆ ಸುಮಾರು 20 ಲಕ್ಷ ರೂ.ಅಗತ್ಯವಿದೆ.

ವಿಸ್ತೃತ ಸಮೀಕ್ಷೆಗೆ ಅಸ್ತು ಎಂದ ಡಿಸಿ: ತಜ್ಞರು ನೀಡಿರುವ ಪ್ರಾಥಮಿಕ ವರದಿ ಬಳಿಕ ವಿಸ್ತೃತ ಅಧ್ಯಯನ ಕೈಗೊಳ್ಳುವುದಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಯಾವೆಲ್ಲ ಸರ್ವೇ ನಂಬರ್‌ಗಳಲ್ಲಿ ಅತಿಕ್ರಮಣ ನಡೆದಿದೆ ಎಂಬುದನ್ನು ದೃಢಪಡಿಸಿಕೊಳ್ಳದೆ ಕ್ರಮ ಕೈಗೊಳ್ಳಲು ಅಸಾಧ್ಯ. ಹಾಗಾಗಿ ಯಾವುದಾದರೂ ಮೂಲದಿಂದ ವೆಚ್ಚವನ್ನು ಭರಿಸಿ ಅಧ್ಯಯನ ಕೈಗೊಳ್ಳಲಾಗುವುದು. ವರದಿಯಲ್ಲಿನ ಉಲ್ಲೇಖದಂತೆ ಬಂಗ್ರಕೂಳೂರು ಭಾಗದ ತೋಡಿನಲ್ಲಿನ ಹೂಳು ಹಾಗೂ ಕಳೆಗಿಡಗಳನ್ನು ತೆರವುಗೊಳಿಸಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.