Friday, 16th November 2018  

Vijayavani

Breaking News

ಕಾವೇರಮ್ಮ ಕಾಪಾಡಮ್ಮ

Sunday, 19.08.2018, 3:05 AM       No Comments
<<ಕೊಡಗಿನಲ್ಲಿ ಎಮರ್ಜೆನ್ಸಿ>>

ಭೀಕರ ಪ್ರವಾಹ ಮಂಜಿನ ನಗರಿಯಲ್ಲಿ 2250ಕ್ಕೂ ಹೆಚ್ಚು ಜನರನ್ನು ಬೀದಿಪಾಲು ಮಾಡಿದೆ. 800ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿರುವ ಪರಿಣಾಮ, ಸಾವಿರಾರು ಜನ ಉಟ್ಟ ಬಟ್ಟೆಯಲ್ಲೇ ಗಂಜಿಕೇಂದ್ರ ಸೇರಿದ್ದು ಬೊಗಸೆ ನೀರು, ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅಗೆದಷ್ಟೂ ಆಳ ಎಂಬಂತೆ ಕುಸಿದು ಬಿದ್ದಿರುವ ಬೆಟ್ಟ, ಗುಡ್ಡಗಳಡಿಯಿಂದ ಮೃತದೇಹಗಳನ್ನು ತೆಗೆಯುತ್ತಿರುವ ರಕ್ಷಣಾ ಸಿಬ್ಬಂದಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಒಟ್ಟಾರೆ ಇಡೀ ಕೊಡಗು ಜಿಲ್ಲೆ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

ಮಡಿಕೇರಿ: ಜಲಪ್ರಳಯಕ್ಕೆ ತತ್ತರಿಸಿರುವ ಕೊಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿರುವ ಯೋಧರು ನೂರಾರು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಸತತವಾಗಿ ಸುರಿಯುತ್ತಿರುವ ಮಳೆ ವೈಮಾನಿಕ ಕಾರ್ಯಾಚರಣೆಗೆ ಅಡ್ಡಿಯಾಗಿರುವುದರಿಂದ ಕೊಡಗಿನಾದ್ಯಂತ ತುರ್ತು ಪರಿಸ್ಥಿತಿ ನಿರ್ವಣವಾಗಿದೆ.

ಜೀವಂತ ಭೂ ಸಮಾಧಿ: ಭೂ ಕುಸಿತದಿಂದಾಗಿ ಶನಿವಾರ ಹೆಬ್ಬಟ್ಟಗೇರಿ ಗ್ರಾಮದಲ್ಲಿ ಮಿನ್ನಂಡ ಬೊಳ್ಳಕ್ಕಿ (65) ಜನರ ಕಣ್ಣೆದುರಿನಲ್ಲೇ ಸಮಾಧಿಯಾಗಿದ್ದಾರೆ. ಬೆಟ್ಟದ ಮೇಲಿನ ಮನೆಯಿಂದ ಹೊರಬರಲು ನಿರಾಕರಿಸಿದ ಬೊಳ್ಳಕ್ಕಿ ಭೂಕುಸಿತದಿಂದ ಕಟ್ಟಡದ ಅವಶೇಷಗಳಡಿ ಸಿಲುಕಿದರು.

ಜೋಡುಪಾಲ ಗ್ರಾಮದಲ್ಲಿ ಭೂಕುಸಿತಕ್ಕೆ ಕುಡಿಯರ ಬಸಪ್ಪ(51) ಅವರ ಕುಟುಂಬ ತುತ್ತಾಗಿದೆ. ಪಯಸ್ವಿನಿ ಹೊಳೆ ಮೋರಿಯಲ್ಲಿ ಬಸಪ್ಪ ದೇಹ ಶುಕ್ರವಾರವೇ ಪತ್ತೆಯಾಗಿತ್ತು. ಅವರ ಪತ್ನಿ ಸೀತೆ (45), ಪುತ್ರಿ ಮಂಜುಳಾ, ಸಂಬಂಧಿಕ ಯುವತಿ ರಾಣಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ. 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಭೂಕುಸಿತದಿಂದ ಊರಿಗೆ ಊರೇ ಖಾಲಿಯಾಗಿದೆ. ಅಲ್ಲಿನ ಮನೆಯೊಂದರಲ್ಲಿದ್ದ ಮೂವರು ಮನೆ ಸಹಿತ ಕೊಚ್ಚಿ ಹೋಗಿದ್ದಾರೆ. ಅವರು ಮಣ್ಣುಪಾಲಾಗಿರುವ ಸಾಧ್ಯತೆ ಹೆಚ್ಚಿದೆ.

ವೈದ್ಯರ ಬುಲಾವ್: ರಾಮನಗರ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳ ಕಂದಾಯ ಇಲಾಖೆ ಅಧಿಕಾರಿಗಳು, ವೈದ್ಯರ ತಂಡ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗಿಗೆ ಧಾವಿಸಿವೆ.

300 ಸಂತ್ರಸ್ತರ ರಕ್ಷಣೆ

ಭಾರತೀಯ ಸೇನಾ ಪಡೆ ಯೋಧರು ದೇವಸ್ತೂರು, ಕಾಲೂರು, ಮುಕ್ಕೋಡ್ಲು, ಆವಂಡಿ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಹೆಬ್ಬಟ್ಟಗೇರಿ ಮೂಲಕ 200, ಹಟ್ಟಿಹೊಳೆ ಮೂಲಕ 150 ಜನರನ್ನು ರಕ್ಷಿಸಲಾಗಿದೆ. ಕಾಲೂರಿಗೆ ಶುಕ್ರವಾರ ರಾತ್ರಿ ತೆರಳಿದ ಯೋಧರು ಚನ್ನಪಂಡ, ತಂಬುಕುತ್ತೀರ, ಕೊಂಬಾರನ, ಕುಳ್ಳಂಡಂಡ ಕುಟುಂಬಸ್ಥರು, ಕಾರ್ವಿುಕರನ್ನು ರಕ್ಷಿಸಿದ್ದಾರೆ. ಕಾಲೂರು ಗ್ರಾಮದಲ್ಲಿದ್ದ ಶಾಸಕ ಕೆ.ಜಿ.ಬೋಪಯ್ಯ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಊರು ಬಿಡದ ಜನ

ಕಾಲೂರಿನಿಂದ 130 ಜನ ಹೊರಗೆ ಹೋಗಿದ್ದರೆ ಇನ್ನೂ ಕೆಲವರು ಊರಿನಿಂದ ಹೊರಬರಲು ನಿರಾಕರಿಸಿದ್ದಾರೆ. ಮದೆನಾಡಿನ ಗೊಳಿಕಟ್ಟೆಯಲ್ಲಿ ಭೂ ಕುಸಿತ ಉಂಟಾಗಿದ್ದು ಅಲ್ಲಿದ್ದ 40 ಜನರನ್ನು ರಕ್ಷಣಾ ತಂಡ ರಕ್ಷಿಸಿದೆ. ಚೇರಂಬಾಣೆ ಅರುಣಾ ಪದವಿಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಗಂಜಿಕೇಂದ್ರದಲ್ಲಿ ಕಾವೇರಿ ಪ್ರವಾಹಕ್ಕೆ ಸಿಲುಕಿರುವ 400 ಜನ ಆಶ್ರಯ ಪಡೆದಿದ್ದಾರೆ. ಪಾಟಿಯಲ್ಲಿ 4 ಮನೆ ಭೂಕುಸಿತಕ್ಕೆ ಒಳಗಾಗಿದೆ. ಅಲ್ಲಿನ 35 ಜನ ಗಾಳಿಬೀಡು ಶಾಲೆಗೆ ಸ್ಥಳಾಂತರಗೊಂಡಿದ್ದಾರೆ.

ಹಾರಂಗಿ ಬಿರುಕು?

ಹಾರಂಗಿ ಜಲಾಶಯದಲ್ಲಿ ವೈಬ್ರೇಷನ್ ಕಾಣಿಸಿಕೊಂಡಿದ್ದು, ಒಡಕು ಮೂಡಿದೆ ಎಂದು ದೃಶ್ಯಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಯಿಂದ ಜನತೆ ಭಯಭೀತರಾಗಿದ್ದರು. ಅಣೆಕಟ್ಟೆಯಲ್ಲಿ ಬಿರುಕು ಉಂಟಾಗಿಲ್ಲ ಮತ್ತು ಜಲಾಶಯಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿಯಾಗಿಲ್ಲ ಎಂದು ಕಾರ್ಯಪಾಲಕ ಇಂಜಿನಿಯರ್ ಧರ್ಮರಾಜ್ ಸ್ಪಷ್ಟಪಡಿಸಿದ್ದಾರೆ.

50 ಮನೆಗಳ ಕುಸಿತ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರá-ವ ಮಳೆಗೆ ಸುಮಾರು 50ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಡಿಕೇರಿಯ ಮಂಗಳದೇವಿ ನಗರ, ಚಾಮುಂಡೇಶ್ವರಿನಗರ, ಇಂದಿರಾನಗರ, ಮಲ್ಲಿಕಾರ್ಜುನ ನಗರದಲ್ಲಿ ಹೆಚ್ಚಾಗಿ ಮನೆಗಳು ಕುಸಿದಿದೆ. 30ಕ್ಕೂ ಹೆಚ್ಚು ಮನೆಗಳು ಕುಸಿಯುವ ಭೀತಿಯಲ್ಲಿವೆ.

ಸಿಎಂ ಹೇಳಿದ್ದು

  • ರಾಜ್ಯದಲ್ಲಿ 70 ಗಂಜಿ ಕೇಂದ್ರ ಆರಂಭ, 3 ಸಾವಿರ ಜನರ ರಕ್ಷಣೆ
  • ಆಹಾರ, ಔಷಧ, ಕುಡಿವ ನೀರಿಗೆ ಆದ್ಯತೆ
  • ರಾಜ್ಯಾದ್ಯಂತ ಮಳೆ ಅನಾಹುತಕ್ಕೆ 153 ಬಲಿ,
  • ವಿದ್ಯುತ್, ಎಟಿಎಂ, ಮರು ಸಂಪರ್ಕ, ವದಂತಿ ತಡೆಗೆ ಕ್ರಮ
  • ಮೃತರ ಕುಟುಂಬಕ್ಕೆ 5 ಲಕ್ಷ ರೂ., ಮನೆ ಕಳೆದು ಕೊಂಡವರಿಗೆ 2 ಲಕ್ಷ ರೂ.

 

ಅಳಿದಿದ್ದು ಉಳಿದಿದ್ದು…

ಕೊಡಗಿನಲ್ಲಿ 31 ಗಂಜಿಕೇಂದ್ರ ತೆರೆಯ ಲಾಗಿದ್ದು, 2,250 ಮಂದಿ ಆಶ್ರಯ ಪಡೆದಿದ್ದಾರೆ.

Leave a Reply

Your email address will not be published. Required fields are marked *

Back To Top