ಅಥಣಿ ಗ್ರಾಮೀಣ: ಕೃಷ್ಣಾನದಿ ತೀರದಲ್ಲಿ ಯಾವುದೆ ಸಮಯದಲ್ಲಾದರೂ ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಹಾಗಾಗಿ, ನೋಡಲ್ ಹಾಗೂ ಗ್ರಾಪಂ ಅಧಿಕಾರಿಗಳು ಪ್ರವಾಹ ಎದುರಿಸಲು ಸಿದ್ಧರಾಗಬೇಕು ಎಂದು ಅಥಣಿ ತಹಸೀಲ್ದಾರ್ ವಾಣಿ ಯು. ಸೂಚನೆ ನೀಡಿದರು.

ಅಥಣಿ ತಾಲೂಕಿನ ಕೃಷ್ಣಾನದಿ ತೀರದ ಹಲ್ಯಾಳ, ದರೂರ, ಹುಲಗಬಾಳ, ಸಪ್ತಸಾಗರ, ತೀರ್ಥ ಸೇರಿ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಜನ-ಜಾನುವಾರುಗಳು ನದಿ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು.
ಹುಲಗಬಾಳ ಗ್ರಾಮದ ಮಾಂಗ ತೋಟದ ವಸತಿ ಪ್ರದೇಶ ನೀರಿನಿಂದ ಸುತ್ತುವರಿದರೂ ಜನರು ಅಲ್ಲೇ ವಾಸವಿದ್ದ ಕುರಿತು ಮಾಹಿತಿ ಪಡೆದ ತಹಸೀಲ್ದಾರ್ ವಾಣಿ ಅವರು, ಎಲ್ಲ ಇಲಾಖೆ ತಾಲೂಕಾಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಜನರ ಮನವೊಲಿಸಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.
ಗ್ರೇಡ್-2 ತಹಸೀಲ್ದಾರ್ ಬಿ.ವೈ.ಹೊಸಕೇರಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಶಿವಾನಂದ ಕಾರಜೋಳ, ಅಗ್ನಿಶಾಮಕ ಠಾಣಾಧಿಕಾರಿ ಅಕ್ಬರ್ ಮುಲ್ಲಾ, ಕಂದಾಯ ನೀರೀಕ್ಷಕ ಎಸ್.ಬಿ. ಮೆಣಸಂಗಿ, ಗ್ರಾಮಾಡಳಿತಾಧಿಕಾರಿಗಳಾದ ರಾಘವೇಂದ್ರ ಪಳಕೆ, ಎಸ್.ಬಿ.ಅವಟಿ, ಆರ್.ಆರ್.ತೋಟದ, ಎ.ಎಸ್.ಕೋಗಿಲೆ ಇತರರಿದ್ದರು.