ಫ್ಲಿಪ್​ಕಾರ್ಟ್​​ ಸಿಇಒ ಸ್ಥಾನದಿಂದ ಬಿನ್ನಿ ಬನ್ಸಾಲ್​ ಔಟ್​!

ನವದೆಹಲಿ: ಅಧಿಕಾರದ ದುರ್ಬಳಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಫ್ಲಿಪ್​ಕಾರ್ಟ್ ಸಿಇಒ ಸ್ಥಾನಕ್ಕೆ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದ  ಬಿನ್ನಿ ಬನ್ಸಾಲ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಅಧಿಕಾರ ದುರ್ಬಳಕೆ ಕುರಿತು ಗಂಭೀರ ಆರೋಪಗಳು ಕೇಳಿ ಬಂದ ನಂತರ ಫ್ಲಿಪ್​ಕಾರ್ಟ್​ ಮತ್ತು ವಾಲ್​ಮಾರ್ಟ್​ ತನಿಖೆ ಕೈಗೊಂಡಿತ್ತು. ಆದರೆ ಬನ್ಸಾಲ್​ ಈ ಆರೋಪವನ್ನು ಅಲ್ಲಗಳೆದು ರಾಜೀನಾಮೆ ನೀಡಿದ್ದಾರೆ ಎಂದು ಅಮೆರಿಕ ಮೂಲದ ವಾಲ್​ಮಾರ್ಟ್​ ತಿಳಿಸಿದೆ.

ಬನ್ಸಾಲ್​ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ಷಣವೇ ಸಂಸ್ಥೆ ಅದನ್ನು ಅಂಗೀಕಾರ ಮಾಡಿದೆ ಎಂದು ವಾಲ್​ಮಾರ್ಟ್​ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದು, ಫ್ಲಿಪ್​ಕಾರ್ಟ್​ ಆರಂಭವಾದಾಗಿನಿಂದಲೂ ಬಿನ್ನಿ ಸಂಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎಂದಿದೆ.

ಅಧಿಕಾರದ ದುರುಪಯೋಗದ ಆರೋಪ ಕೇಳಿ ಬಂದ ಹಿನ್ನೆಲೆ ಹಾಗೂ ಈ ಆರೋಪಗಳ ವಿರುದ್ಧ ಸಂಸ್ಥೆ ತನಿಖೆ ಕೈಗೊಂಡಿದ್ದ ಕಾರಣ ಬನ್ಸಾಲ್​ ಉನ್ನತ ಸ್ಥಾನದಿಂದ ಕೆಳಗಿಯಲು ನಿರ್ಧರಿಸಿದ್ದಾರೆ. ಬಿನ್ನಿ ವಿರುದ್ಧ ಬಂದ ಆರೋಪಗಳಿಗೆ ತನಿಖೆಯಲ್ಲಿ ಯಾವುದೇ ಸಾಕ್ಷ್ಯಗಳು ದೊರೆತಿಲ್ಲವಾದರೂ ತನಿಖೆ ವೆಳೆ ಬಿನ್ನಿ ತಮ್ಮ ವ್ಯವಹಾರದಲ್ಲಿ ಪಾರದರ್ಶಕತೆಯ ಕೊರತೆ ಹೊಂದಿದ್ದರು ಮತ್ತು ಕೆಲ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದ್ದರು ಎಂಬುದು ತಿಳಿದು ಬಂದಿದೆ. ಹಾಗಾಗಿ ಅವರ ರಾಜೀನಾಮೆಯನ್ನು ಸಂಸ್ಥೆ ಒಪ್ಪಿಕೊಂಡಿದೆ.

ಅಮೆರಿಕ ಮೂಲದ ವಾಲ್​ಮಾರ್ಟ್​ ಇತ್ತೀಚೆಗೆ ಫ್ಲಿಪ್​ಕಾರ್ಟ್​ ಶೇರ್​ನ್ನು 16 ಬಿಲಿಯನ್​ ಡಾಲರ್​ಗೆ ಖರೀದಿಸಿತ್ತು.

ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಫ್ಲಿಪ್​ಕಾರ್ಟ್​ ಸಿಇಒ ಆಗಿ ಮುಂದುವರಿಯಲಿದ್ದಾರೆ. (ಏಜೆನ್ಸೀಸ್​)