ವಿಮಾನ ಟಿಕೆಟ್ ದುಬಾರಿ

>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೊಲ್ಲಿ ರಾಷ್ಟ್ರಗಳ ನಡುವೆ ಹಾರಾಟ ನಡೆಸುತ್ತಿರುವ ವಿಮಾನಗಳ ಪ್ರಯಾಣ ದರ ದಿಢೀರ್ ಏರಿಕೆ ಕಾರಣ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕ ಸಂಖ್ಯೆಯ ಮತದಾರರು ಮತದಾನದ ಅವಕಾಶದಿಂದ ವಂಚಿತರಾಗಲಿದ್ದಾರೆ.
ಮೋಹನ್‌ದಾಸ್ ಕಾಮತ್ ಕುವೈತ್‌ನಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದಾರೆ. ಏಕಾಏಕಿ ವಿಮಾನ ಯಾನ ದುಬಾರಿಯಾದ ಕಾರಣ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಸುವ ಆಲೋಚನೆ ಕೈಬಿಟ್ಟಿದ್ದಾರೆ. ಜೆಟ್ ಏರ್‌ವೇಸ್ ದುಬೈಯಿಂದ ತಾತ್ಕಾಲಿಕವಾಗಿ ತನ್ನ ಎಲ್ಲ ಅಂತಾರಾಷ್ಟ್ರೀಯ ಓಡಾಟ ರದ್ದುಪಡಿಸಿರುವುದು ಹಾಗೂ ಇತರ ವಿಮಾನಗಳಲ್ಲಿ ಪ್ರಯಾಣ ದರ ದುಪ್ಪಟ್ಟು ಆಗಿರುವುದು ಸಮಸ್ಯೆಯಾಗಿದೆ.
ಮೋಹನ್‌ದಾಸ್ ಅವರಂತೆ ದುಬಾರಿ ವಿಮಾನ ಯಾನ ಟಿಕೆಟ್ ದರ ಹಾಗೂ ರಜೆ ದೊರೆಯದ ಕಾರಣ ವಿದೇಶಗಳಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡದ ದೊಡ್ಡ ಸಂಖ್ಯೆಯ ಜನರು ಮತದಾನದ ಅವಕಾಶದಿಂದ ವಂಚಿತರಾಗಿದ್ದಾರೆ. ಮತದಾನ ಉದ್ದೇಶದಿಂದ ನಾನು ಮಂಗಳೂರಿಗೆ ತೆರಳಲು ಜೆಟ್ ಏರ್‌ವೇಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದೆ. ಆದರೆ ಜೆಟ್‌ಏರ್‌ವೇಸ್ ತನ್ನ ಎಲ್ಲ ಓಡಾಟಗಳನ್ನು ರದ್ದುಪಡಿಸಿತು. ಏರ್‌ಇಂಡಿಯಾ ಹೋಗಿ ಬರುವ ತನ್ನ ಪ್ರಯಾಣ ದರವನ್ನು 30 ಸಾವಿರ ರೂ.ಗೆ ಏರಿಕೆ ಮಾಡಿತು. ಸಾಮಾನ್ಯ ಸಂದರ್ಭ ಗಳಲ್ಲಿ ಈ ಪ್ರಯಾಣ ದರ 17 ಸಾವಿರ ರೂ. ಇರುತ್ತದೆ ಎಂದು ಮೋಹನ್‌ದಾಸ್ ಪ್ರತಿಕ್ರಿಯಿಸಿದ್ದಾರೆ. ಇತರ ದೇಶಗಳಲ್ಲಿ ನೆಲೆಸಿರುವ ಜನರು ಆನ್‌ಲೈನ್ ಮೂಲಕ ಅಥವಾ ಅಂಚೆ ಮೂಲಕ ಮತದಾನ ನಡೆಸಲು ಮುಂದಿನ ದಿನಗಳಲ್ಲಿ ಅವಕಾಶ ಒದಗಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *