ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್​ ಮುಕ್ತಗೊಳಿಸಿ: ಹೈಕೋರ್ಟ್​ ಚಾಟಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ಸ್ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂಥ ಕಣ್ಣೊರೆಸುವ ಕೆಲಸಗಳನ್ನು ಮೊದಲು ನಿಲ್ಲಿಸಿ ಎಂದು ಚಾಟಿ ಬೀಸಿದೆ.

ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠದಲ್ಲಿ ಶುಕ್ರವಾರ ನಡೆಯಿತು.

ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ಮುಖ್ಯ ಕಾರ್ಯದರ್ಶಿಯ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದರಲ್ಲಿದ್ದ ‘ಪ್ರಯತ್ನಿಸುತ್ತೇವೆ’ ಎಂಬ ಪದದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಜೆ, ಇದು ನೀವು ಮಾಡಬೇಕಿರುವ ಕೆಲಸ. ಇಲ್ಲಿ ಪ್ರಯತ್ನಿಸುವ ಪ್ರಶ್ನೆಯೇ ಇಲ್ಲ. ನಿಮ್ಮಿಂದ ಮಾಡಲಾಗದಿದ್ದರೆ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಗುಡುಗಿದರು.

ಇನ್ನು ಒಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್​ ಮುಕ್ತಗೊಳಿಸಬೇಕು ಎಂದು ಆದೇಶಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಆ.14ಕ್ಕೆ ಮುಂದೂಡಿತು.

ಸಿಜೆ ಹೇಳಿದ್ದೇನು?

  • ಇನ್ನೊಂದು ತಿಂಗಳಲ್ಲಿ ಬೆಂಗಳೂರನ್ನು ಫ್ಲೆಕ್ಸ್‌ಮುಕ್ತಗೊಳಿಸಲೇ ಬೇಕು. ನಿಮ್ಮಿಂದ ಅದು ಸಾಧ್ಯವೇ ಇಲ್ಲವೇ ಎಂದು ಹೇಳಿಬಿಡಿ.
  • ಅವರನ್ನು ಕರೆದು ಮೀಟಿಂಗ್ ಮಾಡಿದ್ದೇವೆ. ಇವರ ಜತೆ ಚರ್ಚಿಸಿದೆ. ಇನ್ಯಾವುದೋ ಆದೇಶ ಹೊರಡಿಸಿದ್ದೇವೆ, ಕಾರ್ಯ ಪ್ರಗತಿಯಲ್ಲಿದೆ, ಪ್ರಯತ್ನಿಸುತ್ತಿದ್ದೇವೆ… ಎಂಬ ಸಬೂಬುಗಳನ್ನು ಕೇಳಲು ಕೋರ್ಟ್ ತಯಾರಿಲ್ಲ.
  • ಫ್ಲೆಕ್ಸ್ ಕೇಸ್‌ಗಳ ದಿನ ನಿತ್ಯದ ವಿಚಾರಣೆಗೆಂದೇ ಎಸಿಎಂಎಂ ಕೋರ್ಟ್‌ನಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸುತ್ತೇನೆ. ಈ ತಿಂಗಳ ಅಂತ್ಯದಲ್ಲಿ ವಿಚಾರಣೆ ನಡೆಸಿ ಆದೇಶ ನೀಡಬೇಕು.
  • ಜಾಮೀನು ಕೋರಿ ಸಲ್ಲಿಸುವ ಅರ್ಜಿಗಳು ನೇರ ಹೈಕೋರ್ಟ್‌ಗೆ ಬರುತ್ತವೆ ನೆನಪಿರಲಿ.
  • ಅಧಿಕಾರಿಗಳು ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ಅವರು ಹೇಗೆ ಕೆಲಸ‌ ಮಾಡಬೇಕು ಎಂಬುದನ್ನು ನಾನು ತೋರಿಸಿಕೊಡುತ್ತೇನೆ.
  • ನಗರದ ಯಾವ ಯಾವ ಕಡೆ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ನಡೆಯುತ್ತಿದೆ. ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಬಿಬಿಎಂಪಿ ಆಗಸ್ಟ್ 13ರೊಳಗೆ ಕೋರ್ಟ್​ಗೆ ನಿಖರ ಹಾಗೂ ಸ್ಪಷ್ಟ ವರದಿ ಸಲ್ಲಿಸಬೇಕು.
  • ಈವರೆಗೆ ಎಷ್ಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ‌. ಪ್ರಕರಣ ಯಾವ ಹಂತದಲ್ಲಿದೆ ಎಂಬ ಬಗ್ಗೆ ಸರ್ಕಾರ ವರದಿ ಸಲ್ಲಿಸಬೇಕು.
  • ಪ್ರಮಾಣಪತ್ರದಲ್ಲಿ ಒಂದೇ ಒಂದು ಶಬ್ದ ಸತ್ಯಕ್ಕೆ ದೂರವಾಗಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು.