ಮೈಸೂರಿನ ಮೊದಲ ಫ್ಲೈ ಒವರ್ ಲೋಕಾರ್ಪಣೆ

ಮೈಸೂರು: ಮೈಸೂರು-ಹುಣಸೂರು ಮಾರ್ಗದ ಹಿನಕಲ್ ಬಳಿಯ ಹೊರ ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ನಿರ್ಮಿಸಿರುವ ಫ್ಲೈ ಒವರ್ (ಗ್ರೇಡ್ ಸಪರೇಟರ್) ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭಾನುವಾರ ಲೋಕಾರ್ಪಣೆ ಮಾಡಿದರು.


ಫ್ಲೈ ಒವರ್ ಕೆಳಗೆ ವಿಘ್ನೇಶ್ವರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿ.ಟಿ.ದೇವೇಗೌಡ, ಶಿಲಾನ್ಯಾಸದ ಕಲ್ಲನ್ನು ಲೋಕಾರ್ಪಣೆಗೊಳಿಸಿದರು.


ನಂತರ ಮಾತನಾಡಿದ ಅವರು, ಫ್ಲೈ ಒವರ್ ಯೋಜನೆ 2014ರಲ್ಲಿ ಮಂಜೂರಾಗಿತ್ತು. ಕಾಮಗಾರಿ ವೆಚ್ಚ 15.10 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಗುತ್ತಿಗೆ ಕರಾರು ಮೊತ್ತ 19.18 ಕೋಟಿ ರೂ. ಆಗಿದ್ದು, ಕೇಂದ್ರ ಸರ್ಕಾರ ಶೇ.80ರಷ್ಟು ವಂತಿಕೆ, ರಾಜ್ಯ ಸರ್ಕಾರ ಶೇ.10 ವಂತಿಕೆ, ಉಳಿಕೆ ಮೊತ್ತವನ್ನು (ಭೂಸ್ವಾಧೀನ, ಟೆಂಡರ್ ಪ್ರೀಮಿಯಂ ಮತ್ತು ಹೆಚ್ಚುವರಿ ಮೊತ್ತ) ಮುಡಾ ಭರಿಸುವುದಾಗಿ ತೀರ್ಮಾನಿಸಲಾಗಿತ್ತು ಎಂದರು.


ಕೇಂದ್ರ ಸರ್ಕಾರದ ಜೆ.ಎನ್.ನರ್ಮ್ ಯೋಜನೆ 2017ನೇ ಮಾರ್ಚ್‌ಗೆ ಅಂತ್ಯ ವಾಗಿತ್ತು. ಈ ಯೋಜನೆಯ ಬದಲಾದ ಕಾರ್ಯಸೂಚಿಯಂತೆ ಕೇಂದ್ರ ಸರ್ಕಾರ ಶೇ. 80ರ ವಂತಿಕೆ ಬದಲಾಗಿ ಶೇ.50 ವಂತಿಕೆ ನೀಡುವುದಾಗಿ ಹೇಳಿತು. ಸಂಸದ ಪ್ರತಾಪಸಿಂಹ ಅವರ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರ ಶೇ.60 ವಂತಿಕೆ ನೀಡಲು ಒಪ್ಪಿತು. ರಾಜ್ಯ ಸರ್ಕಾರ ಶೇ.10ರಷ್ಟು ವಂತಿಕೆ ಬದಲಾಗಿ ಶೇ.30 ನೀಡಲು ಒಪ್ಪಿತು. ಅಂತಿಮವಾಗಿ ಈ ಕಾಮಗಾರಿಗೆ 23.50 ಕೋಟಿರೂ. ವೆಚ್ಚ ತಗುಲಿದೆ ಎಂದು ವಿವರಿಸಿದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ಯೋಜನೆ ಯಶಸ್ವಿಯಾಗಿದೆ. ಈ ಗ್ರೇಡ್ ಸಪರೇಟರ್ ಅನ್ನು ಐಶ್ವರ್ಯ ಪೆಟ್ರೋಲ್ ಬಂಕ್‌ನಿಂದಲೇ ನಿರ್ಮಾಣ ಮಾಡಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನಗರದ ಮತ್ತಷ್ಟುಕಡೆ ಫ್ಲೈ ಒವರ್‌ನಿರ್ಮಾಣ ಮಾಡಲಾಗುವುದು. ಈ ರಸ್ತೆಯಲ್ಲಿ ವಾಹನ ದಟ್ಟಣೆ ಸಮಸ್ಯೆಯಿಂದಾಗಿ ಹೊರವರ್ತುಲ ರಸ್ತೆ ದಾಟಲು ಕಷ್ಟವಾಗುತ್ತಿತ್ತು. ಈಗ ಸಂಚಾರ ಸುಗಮವಾಗಿದೆ ಎಂದರು. ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದರು.

ವಿಳಂಬದಿಂದ ಹೆಚ್ಚಾದ ವೆಚ್ಚ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಜೋಡಿಸಿದಾಗ ಮಾತ್ರ ಇಂತಹ ಯೋಜನೆಗಳು ಯಶಸ್ವಿಯಾಗುತ್ತವೆ. ಕಾಮಗಾ ರಿಗೆ 15.10 ಕೋಟಿ ರೂ. ಎಂದು ಅಂದಾಗಿಸಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾದ ಕಾರಣ ವೆಚ್ಚ ಹೆಚ್ಚಾಯಿತು. ಆದ್ದರಿಂದ, ಹೆಚ್ಚುವರಿ 9.83 ಕೋಟಿ ರೂ. ಅನುದಾನವನ್ನು ಮುಡಾ ನೀಡಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.