ಕನ್ನಡ ಕವಿಗಳು ಮಾನವ ಧರ್ಮ ಪ್ರತಿಪಾದಕರು

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಕನ್ನಡ ತನಕ್ಕೆ ಕನ್ನಡವೇ ಸಾಟಿ ಎಂದು ಬಣ್ಣಿಸಿದರು.

ಕನ್ನಡ ಉಳಿದು ಬೆಳೆಯಲು, ಏಕೀಕರಣಗೊಳ್ಳಲು ರಾಜರು, ಕವಿಗಳು, ಹೋರಾಟಗಾರರು ಶ್ರಮಿಸಿದ್ದಾರೆ. ಪಂಪ, ಪೊನ್ನ, ರನ್ನ, ವಚನಕಾರರು, ಕುಮಾರವ್ಯಾಸರಂತಹ ಮಹನೀಯರ ಕೊಡುಗೆ ಕನ್ನಡ ನಾಡು ಘನತೆಯಿಂದ ಬೆಳೆಯಲು ಸಹಾಯಕವಾಗಿದೆ ಎಂದರು.

ಆಧುನಿಕ ಯುಗದಲ್ಲಿ ಮುದ್ದಣ್ಣನಿಂದ ಪ್ರಾರಂಭಗೊಂಡು ಬಿಎಂಶ್ರೀ, ತೀನಂಶ್ರೀ, ಡಿವಿಜಿ, ಕುವೆಂಪು, ಬೇಂದ್ರೆ, ಕಾರಂತ, ಕಂಬಾರ, ಹುಯಿಲಗೋಳ ನಾರಾಯಣರಂತಹ ದಿಗ್ಗಜರೆಲ್ಲರೂ ತಮ್ಮದೇ ಆದ ಭಿನ್ನ ರೀತಿಯ ಮಾನವ ಧರ್ಮ ಪ್ರತಿಕಪಾದಕರಾಗಿದ್ದಾರೆ ಎಂದರು.

ಕನ್ನಡ ನಾಡಿನ ಬೆಳವಣಿಗೆಯಲ್ಲಿ ಜಿಲ್ಲೆಯ ಕೊಡುಗೆಯೂ ಅಪಾರವಿದೆ. ಹೊಯ್ಸಳರ ಅಧಿಪತ್ಯ ಸ್ಥಾಪನೆಯಾದ ಸ್ಥಳ ಮೂಡಿಗೆರೆ ತಾಲೂಕಿನ ಸೊಸೆವೂರು. ಇಂದಿನ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ ಪ್ರಾರಂಭದಲ್ಲಿ ರಾಜಧಾನಿಯಾಗಿತ್ತು. ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಜಿಲ್ಲೆಯವರು ನೀಡಿದ್ದಾರೆ ಎಂದರು.

ರಾಷ್ಟ್ರದ ಪ್ರಗತಿ ನಕ್ಷೆೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವಂತೆ ಶ್ರಮಿಸಬೇಕು ಎನ್ನವುದು ಮೈತ್ರಿ ಸರ್ಕಾರದ ಮೊದಲ ಗುರಿ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದರು.

ದೂಳು ಕುಡಿದ ಸಚಿವರು: ಧ್ವಜಾರೋಹಣ ನಂತರ ಧ್ವಜ ವಂದನೆ ಸ್ವೀಕರಿಸುವ ಸಂದರ್ಭ ಕವಾಯತು ಪ್ರದರ್ಶನ ಸಂದರ್ಭ ಎನ್​ಸಿಸಿ ವಿದ್ಯಾರ್ಥಿಗಳು, ಪೊಲೀಸರು, ಸ್ಕೌಟ್ಸ್ ವಿದ್ಯಾರ್ಥಿಗಳ ಬಿರುಸಾದ ನಡಿಗೆಗೆ ದೂಳು ಸಾಕಷ್ಟು ಪ್ರಮಾಣದಲ್ಲಿ ಎದ್ದು ಅತಿಥಿಗಳು ಮೂಗು ಮೂಚ್ಚಿಕೊಳ್ಳುವಂತೆ ಮಾಡಿತು.

ಶಾಸಕ ಸಿ.ಟಿ.ರವಿ, ತಾಪಂ ಅಧ್ಯಕ್ಷ ಜಯಣ್ಣ ಇತರರು ಮೂಗು ಮುಚ್ಚಿಕೊಂಡರು. ಆದರೆ, ವಂದನೆ ಸ್ವೀಕರಿಸುತ್ತಿದ್ದ ಸಚಿವರು ಮೂಗು ಮುಚ್ಚಿಕೊಳ್ಳುವಂತಿರಲಿಲ್ಲ. ಹೀಗಾಗಿ ಕವಾಯತು ಮುಗಿಯುವವರೆಗೂ ಸಚಿವರು ದೂಳು ಕುಡಿದರು.

ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಧಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಉಪಾಧ್ಯಕ್ಷ ಸುಧೀರ್, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಪಂ ಸಿಇಒ ಸಿ.ಸತ್ಯಭಾಮಾ, ಎಸ್ಪಿ ಹರೀಶ್ ಪಾಂಡೆ, ಉಪ ವಿಭಾಗಾಧಿಕಾರಿ ಶಿವಕುಮಾರ್ ಇದ್ದರು.

ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ

ಮಳೆ ಇಲ್ಲದೆ ಕಡೂರು ತಾಲೂಕಿನಲ್ಲಿ 34,670 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮುಂಗಾರು ಹಂಗಾಮಿನಿಲ್ಲಿ ಅತಿವೃಷ್ಟಿಯಿಂದಾಗಿ 12842.56 ಹೇ. ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಪರಿಹಾರ ಕೋರಲಾಗಿದೆ ಎಂದು ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.

 

ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧ

ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗಬಾರದಂತೆ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದೆ. ನಿರುದ್ಯೋಗಿ ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಲು ಕಾಯಕ ಯೋಜನೆ ಜಾರಿ ತರಲಾಗಿದೆ. 10 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಇದರಲ್ಲಿ 5 ಲಕ್ಷ ರೂ. ಬಡ್ಡಿ ರಹಿತ ಹಾಗೂ ಇನ್ನೈದು ಲಕ್ಷ ರೂ. ಶೇ.4 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಕೆ.ಜೆ.ಜಾರ್ಜ್ ತಿಳಿಸಿದರು. ಸಾಮಾಜಿಕ ಭದ್ರತಾ ಯೋಜನೆಯಡಿ 2,09,403 ಫಲಾನುಭವಿಗಳಿಗೆ 238 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ 27 ಗ್ರಾಮ ಆಯ್ಕೆಯಾಗಿದ್ದು, 923.14 ಲಕ್ಷ ರೂ. ಬಿಡುಗಡೆಯಾಗಿದೆ. ಆಡಳಿತ ಚುರುಕುಗೊಳಿಸಲು ಜಿಪಂನಲ್ಲಿ ಇ-ಆಡಳಿತ ಅನುಷ್ಠಾನಗೊಳಿಸಲಾಗಿದೆ. ಸರ್ವರಿಗೂ ಆರೋಗ್ಯ ಕಲ್ಪಿಸಲು ಆರೋಗ್ಯ ಕರ್ನಾಟಕ ಯೋಜನೆ ಜಾರಿ ಮಾಡಲಾಗಿದೆ ಎಂದರು.