ಚನ್ನರಾಯಪಟ್ಟಣ: ನಮ್ಮ ಜಲಾಶಯಗಳಲ್ಲಿ ನೀರು ಕಡಿಮೆ ಇದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ವೀರ ಸಮರಸೇನೆ ಸದಸ್ಯರು ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ಮಂಗಳವಾರ ಸಂಜೆ ಆರಂಭವಾದ ಪಂಜಿನ ಮೆರವಣಿಗೆ ಕೆ.ಆರ್. ವೃತ್ತ ತಲುಪಿ ಸರ್ಕಾರದ ವಿರುದ್ಧ ಹಾಗೂ ತಮಿಳುನಾಡಿನ ವಿರುದ್ಧ ಧಿಕ್ಕಾರ ಕೂಗಿದರು.
ಕರ್ನಾಟಕ ವೀರ ಸಮರಸೇನೆ ಜಿಲ್ಲಾಧ್ಯಕ್ಷ ಭರತ್ ಗೌಡ ಮಾತನಾಡಿ, ನಮ್ಮ ಜನಪ್ರತಿನಿಧಿಗಳು ರಾಜಕೀಯವನ್ನು ಬದಿಗಿಟ್ಟು ಕರ್ನಾಟಕದ ರೈತರ ಹಿತವನ್ನು ಕಾಯಬೇಕು. ಪಕ್ಷಾತೀತವಾಗಿ ಇಂದಿನ ಬರಗಾಲದ ದಿನದಲ್ಲಿ ನಮ್ಮ ಜಲಾಶಯಗಳಲ್ಲಿ ನೀರು ಉಳಿಸುವ ಕಾರ್ಯವನ್ನು ಮಾಡಬೇಕು. ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ನೀರು ಉಳಿಸುವಲ್ಲಿ ನಮ್ಮ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ತಾಲೂಕು ಅಧ್ಯಕ್ಷ ಸಂದೇಶ ಗೌಡ ಹಾಗೂ ಉಪಾಧ್ಯಕ್ಷ ದಿಂಡಗೂರು ವಾಸು ಇತರರು ಹಾಜರಿದ್ದರು.