ಮಂಗಗಳ ಜಿಗಿದಾಟದಿಂದ 11 ಕೆ.ವಿ. ಲೈನ್​ ಮೇಲೆ ಬಾಗಿದ ಧ್ವಜಕಂಬ: ತೆರವುಗೊಳಿಸಲು ಹೋದ ಬಾಲಕರ ದಾರುಣ ಸಾವು

ಕೊಪ್ಪಳ: ಕೇವಲ ಮೂರು ದಿನಗಳ ಹಿಂದೆ ಮರಳು ಚೀಲಗಳನ್ನು ಆಧರಿಸಿ ಧ್ವಜಕಂಬವನ್ನು ನಿಲ್ಲಿಸಿ ಸಂಭ್ರಮದಿಂದ 73ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದರು. ಆ ಸಂದರ್ಭದಲ್ಲಿ ಹಂಚಿದ್ದ ಸಿಹಿ ತಿನಿಸನ್ನು ಸವಿದು ಸಂತಸಪಟ್ಟಿದ್ದರು. ಆದರೆ, ಭಾನುವಾರ ಬೆಳಗ್ಗೆ ಅದೇ ಧ್ವಜಕಂಬ ಐವರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದೆ. ಇದಕ್ಕೆ ಕೋತಿಯಾಟ ಕಾರಣ ಎಂಬುದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ.

ಕೊಪ್ಪಳದ ಬನ್ನಿಕಟ್ಟೆ ಪ್ರದೇಶದಲ್ಲಿ ದೇವರಾಜ ಅರಸು ಮೆಟ್ರಿಕ್​ ಪೂರ್ವ ಬಿಸಿಎಂ ವಿದ್ಯಾರ್ಥಿನಿಲಯವಿದೆ. ಇಲ್ಲಿ 65 ಮಕ್ಕಳು ವಾಸವಿದ್ದರು. ಆದರೆ, ಭಾನುವಾರವಾದ ಕಾರಣ ಕೆಲವು ಮಕ್ಕಳು ಮನೆಗೆ ಹೋಗಿದ್ದರಿಂದ ಕೇವಲ 25 ಮಕ್ಕಳು ಇದ್ದರು ಎನ್ನಲಾಗಿದೆ. ಸರ್ಕಾರಿ ಕಟ್ಟಡ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿನಿಲಯವನ್ನು ಖಾಸಗಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಕಳೆದ ಗುರುವಾರ ವಿದ್ಯಾರ್ಥಿನಿಲಯದ ಮೇಲ್ಛಾವಣಿಯಲ್ಲಿ ಮರಳಿನ ಚೀಲಗಳನ್ನು ಇರಿಸಿ, ಅದರಲ್ಲಿ ಧ್ವಜಕಂಬ ನೆಟ್ಟು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಸಂಜೆ ಧ್ವಜವನ್ನು ಅವರೋಹಣ ಮಾಡಿದ ನಂತರದಲ್ಲಿ ಕಂಬವನ್ನು ಹಾಗೆಯೇ ಬಿಡಲಾಗಿತ್ತು.

ಈ ಪ್ರದೇಶದಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಕಂಬವನ್ನು ಆಧರಿಸಿ, ಜಿಗಿಯುವುದನ್ನು ಮಾಡುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿನಿಲಯದ ಪಕ್ಕದಲ್ಲೇ ಹಾದು ಹೋಗಿರುವ 11 ಕೆ.ವಿ. ವಿದ್ಯುತ್​ ಲೈನ್​ಮೇಲೆ ಧ್ವಜಕಂಬ ಒರಗಿಕೊಂಡಿತ್ತು. ಇದು ತಿಳಿಯದ ಮಕ್ಕಳು ಭಾನುವಾರ ಬೆಳಗ್ಗೆ ಧ್ವಜಕಂಬವನ್ನು ತೆರವುಗೊಳಿಸಲು ಮುಂದಾಗಿದ್ದರು. ಕಂಬವನ್ನು ಸ್ಪರ್ಶಿಸುತ್ತಲೇ ಐವರು ಮಕ್ಕಳಲ್ಲಿ ವಿದ್ಯುತ್​ ಪ್ರವಹಿಸಿ, ಅವರೆಲ್ಲರೂ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.

10ನೇ ತರಗತಿ ವಿದ್ಯಾರ್ಥಿಗಳಾದ ಮೆಟಗಲ್​​ ನಿವಾಸಿ ಮಲ್ಲಿಕಾರ್ಜುನ ಮತ್ತು ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೇ ತರಗತಿ ವಿದ್ಯಾರ್ಥಿಗಳಾದ ಹಲಗೇರಿಯ ದೇವರಾಜ ಮತ್ಗತು ಹೈದರ್​ ನಗರದ ಕುಮಾರ್​, ಲಾಚನಕೇರಿ ನಿವಾಸಿ 8ನೇ ತರಗತಿಯ ಗಣೇಶ್​ ಮೃತರು. ವಿಷಯ ತಿಳಿದು ವಿದ್ಯಾರ್ಥಿನಿಲಯಕ್ಕೆ ಧಾವಿಸಿ ಬಂದ ಮೃತ ಮಕ್ಕಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಗವಿಮಠದ ಶ್ರೀಗಳಿಂದ ಸಾಂತ್ವನ
ವಿಷಯ ತಿಳಿದು ಸ್ಥಳಕ್ಕೆ ಬಂದ ಗವಿಮಠದ ಅಭಿನವ ಗವಿಶ್ರೀಗಳು ಉಳಿದ ಮಕ್ಕಳೆಲ್ಲರನ್ನೂ ಒಂದೆಡೆ ಸೇರಿಸಿಕೊಂಡು ಸಾಂತ್ವನ ಹೇಳಿದರು. ಧೈರ್ಯ ತುಂಬುವ ಕೆಲಸ ಮಾಡಿದರು. ಜಿಲ್ಲಾಧಿಕಾರಿ ಪಿ. ಸುನಿಲ್​ ಕುಮಾರ್​, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಘುನಂದನ್​ ಮೂರ್ತಿ, ಎಸ್​ಪಿ ರೇಣುಕಾ ಸುಕುಮಾರ್​, ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಕೊಪ್ಪಳದ ದೇವರಾಜ ಅರಸು ಮೆಟ್ರಿಕ್​ ಪೂರ್ವ ಬಿಸಿಎಂ ಹಾಸ್ಟೆಲ್​ನಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟಿರುವ ಐವರು ವಿದ್ಯಾರ್ಥಿಗಳ ಕುಟುಂಬ ವರ್ಗದವರಿಗೆ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಮೃತ ಮಕ್ಕಳ ಕುಟುಂಬ ವರ್ಗದವರಿಗೆ ಸೋಮವಾರವೇ ಪರಿಹಾರಧನ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

 

One Reply to “ಮಂಗಗಳ ಜಿಗಿದಾಟದಿಂದ 11 ಕೆ.ವಿ. ಲೈನ್​ ಮೇಲೆ ಬಾಗಿದ ಧ್ವಜಕಂಬ: ತೆರವುಗೊಳಿಸಲು ಹೋದ ಬಾಲಕರ ದಾರುಣ ಸಾವು”

Leave a Reply

Your email address will not be published. Required fields are marked *