ಮಂಡ್ಯ: ಹೃದಯಾಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚರ್ಮರೋಗ ತಜ್ಞ, ಐದು ರೂಪಾಯಿ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದ ಡಾ.ಸಿ.ಎಸ್. ಶಂಕರೇಗೌಡ ಅವರ ಆರೋಗ್ಯ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮೇ 23ರಂದು ಹೃದಯಾಘಾತವಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಶಂಕರೇಗೌಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಚಿಕಿತ್ಸೆಗೆ ಸ್ಪಂದಿಸಿದ ಅವರು ಲವಲವಿಕೆಯಿಂದ ಆರಾಮಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬರಲಾಗಿದೆ. ಇನ್ನು ಒಂದು ತಿಂಗಳ ನಂತರ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇನ್ನು ಶಂಕರೇಗೌಡ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ಕುಟುಂಬದವರು ಹೆಚ್ಚಿನ ಗಮನಹರಿಸಿದ್ದಾರೆ. ನೆಚ್ಚಿನ ವೈದ್ಯ ಶಂಕರೇಗೌಡ ಅವರು ಆರೋಗ್ಯವಾಗಿರಲೆಂದು ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕು ಶಿವಳ್ಳಿ ಗ್ರಾಮದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿತ್ತು.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..