Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಬೆಂ.ದಕ್ಷಿಣದಲ್ಲಿ ಮಕ್ಕಳಿಗೆ ಕ್ಷೇತ್ರ ದಕ್ಷಿಣೆ

Friday, 09.02.2018, 3:04 AM       No Comments

| ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ‘ಅಡ್ಜೆಸ್ಟ್​ಮೆಂಟ್ ರಾಜಕಾರಣ’ಕ್ಕೆ ಹೆಸರು ವಾಸಿಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ಹಿಂದಿನಂತಿರದು. ಜಾತಿ ರಾಜಕಾರಣ, ಒಳ ಒಪ್ಪಂದಕ್ಕೆ ಹೆಸರುವಾಸಿಯಾದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ರಾಜಕೀಯವಾಗಿ ಬೆಳೆದು ಹುದ್ದೆ ಅಲಂಕರಿಸಿರುವ ಬಹುತೇಕ ನಾಯಕರು ಅವರ ಮಕ್ಕಳನ್ನು ಕಣಕ್ಕಿಳಿಸಿ ಗೆಲುವು ಬಯಸುವ ಧಾವಂತದಲ್ಲಿದ್ದಾರೆ. ಈಗಾಗಲೇ ವಸತಿ ಸಚಿವ ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಶಾಸಕರಾಗಿದ್ದಾರೆ. ಅವರಂತೆ ವಿ.ಸೋಮಣ್ಣ, ರಾಮಲಿಂಗಾರೆಡ್ಡಿ, ರಾಮಚಂದ್ರಗೌಡ, ಮಾಜಿ ಶಾಸಕ ಸೋಮಶೇಖರ್ ಪುತ್ರರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ನಾಲ್ಕು ಸ್ಥಾನಗಳನ್ನು ಪಡೆದು ಸಮಬಲದ ಹೋರಾಟ ಮಾಡಿದ್ದವು. ಈ ಸಲ ಕಮಲ ಬಾಗಿಸಲು ಕೈ ಆರಂಭದಿಂದಲೇ ತಯಾರಿ ನಡೆಸಿದ್ದರೆ, ಒಕ್ಕಲಿಗರು ಪ್ರಾಬಲ್ಯವಿರುವ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಳೆ ತೆಗೆಯಲು ಸದ್ದಿಲ್ಲದ ನಿರತವಾಗಿದೆ.


ಬಿಟಿಎಂನಲ್ಲಿ ‘ಲೇಔಟ್’ ಯಾರಿಗೆ?

ಒಂದು ಕಡೆ ಸ್ಲಂ, ಮತ್ತೊಂದು ಕಡೆ ಸುಸಜ್ಜಿತ ಬಡಾವಣೆಯನ್ನು ಸಮಪ್ರಮಾಣದಲ್ಲಿ ಹೊಂದಿರುವುದು ಬಿಟಿಎಂ ಲೇಔಟ್ ವಿಶೇಷ. ಕಾಂಗ್ರೆಸ್ ಭದ್ರಕೋಟೆ ಎನ್ನುವುದಕ್ಕಿಂತ ಗೃಹ ಸಚಿವ ರಾಮಲಿಂಗಾರೆಡ್ಡಿ ನೆಚ್ಚಿನ ಕ್ಷೇತ್ರ ಎನ್ನಲಡ್ಡಿಯಿಲ್ಲ. ನಿಯಂತ್ರಣವಾಗದ ಸ್ಲಂಗಳು, ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಈ ವಿಷಯವನ್ನು ಜೆಡಿಎಸ್ ಮತ್ತು ಬಿಜೆಪಿ ಯಾವ ರೀತಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತವೆ ಎಂಬುದು ಮುಖ್ಯ. ಬಿಜೆಪಿಯಿಂದ ಎಚ್.ಸುಧಾಕರ, ಜಯದೇವ್, ಜನಾರ್ದನ ರೆಡ್ಡಿ ಆತ್ಮೀಯ ನೆಲ್ಲೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಮಾಜಿ ಶಾಸಕ ಸೋಮಶೇಖರ್ ಪುತ್ರ ಗೋಪಿನಾಥ್ ಹೆಸರೂ ತೇಲಿ ಬಂದಿದೆ. ಜೆಡಿಎಸ್​ನಿಂದ ಪಾಲಿಕೆ ಸದಸ್ಯ ದೇವದಾಸ್ ಕಣಕ್ಕಿಳಿಯುವ ಪ್ರಯತ್ನದಲ್ಲಿದ್ದಾರೆ.


‘ಜಯ’ನಗರಕ್ಕೆ ಹೆಚ್ಚಿದ ಪೈಪೋಟಿ

ಬೆಂಗಳೂರಿನ ಮಾದರಿ ಕ್ಷೇತ್ರವೆನಿಸಿದ ಜಯನಗರ ಬಿಜೆಪಿ ತೆಕ್ಕೆಯಲ್ಲಿದ್ದು, ಇದನ್ನು ಕಸಿಯಲು ರಾಮಲಿಂಗಾರೆಡ್ಡಿ ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಪುತ್ರಿ ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಲು ಒಂದು ವರ್ಷದಿಂದಲೇ ಅವರು ತಾಲೀಮು ನಡೆಸಿದ್ದಾರೆ. ಯು.ಬಿ.ವೆಂಕಟೇಶ್ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಇನ್ನು ಹಾಲಿ ಶಾಸಕ ಬಿ.ಎನ್.ವಿಜಯಕುಮಾರ್ ಅವರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಜನರೊಂದಿಗಿನ ಒಡನಾಟವೇ ಈ ಕ್ಷೇತ್ರದ ಚುನಾವಣೆ ವಿಷಯವಾಗಿರಲಿದೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಜೆಡಿಎಸ್ ಎಂದಿನಂತೆ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುತ್ತದೆಯೋ ಅಥವಾ ಟಿಕೆಟ್ ಆಕಾಂಕ್ಷಿ ರವಿಕುಮಾರ್​ಗೆ ಒಲವು ತೋರುತ್ತದೆಯೋ ಎಂಬುದು ನಿರ್ಧಾರವಾಗಿಲ್ಲ. ಐಟಿ ಉದ್ಯೋಗಿ ರವಿಕೃಷ್ಣಾ ರೆಡ್ಡಿ ಕೆಲ ತಿಂಗಳಿಂದ ತಿರುಗಾಡಿ ಪ್ರ್ರಾರ ನಡೆಸಿ ತಾವು ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರನ್ನು ಎರಡೂ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿಲ್ಲ.


ಗೋವಿಂದರಾಜನಗರ ಯಾರಿಗೆ ವಾಸಿ?

ಕ್ಷೇತ್ರ ಪುನರ್​ವಿಂಗಡಣೆ ನಂತರ ಗೋವಿಂದರಾಜನಗರವನ್ನು ತೆಕ್ಕೆಯಲ್ಲಿಟ್ಟುಕೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ, ಬಿಜೆಪಿ ಸೇರಿದ ಬಳಿಕ ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ಸದ್ಯ ಕಾಂಗ್ರೆಸ್​ನ ಪ್ರಿಯಕೃಷ್ಣ ಪ್ರತಿನಿಧಿಸುತ್ತಿದ್ದು, ಈ ಬಾರಿಯೂ ಅವರೇ ಅಭ್ಯರ್ಥಿ. ಬಿಜೆಪಿಯಲ್ಲಿ ಸಾಮರಸ್ಯದ ಕೊರತೆಯಿದ್ದು, ನೆಲೆ ಕಂಡುಕೊಳ್ಳಲು ಹೆಣಗುತ್ತಿದೆ. ಪ್ರಸ್ತುತ ಉಮೇಶ್ ಶೆಟ್ಟಿ, ಸಪ್ತಗಿರಿಗೌಡ ಕಣಕ್ಕಿಳಿಯುವ ಆಶಯ ಹೊಂದಿದ್ದಾರೆ. ಕೊನೆ ಹಂತದಲ್ಲಿ ವಿ.ಸೋಮಣ್ಣ ಹನೂರು ಅಥವಾ ಚಾಮರಾಜನಗರದಿಂದ ಕಣಕ್ಕಿಳಿಯದೇ ಈ ಕ್ಷೇತ್ರವನ್ನು ನೆಚ್ಚಿಕೊಳ್ಳಲಿಕ್ಕೂ ಸಾಕು. ಜೆಡಿಎಸ್​ನಿಂದ ಪಿ.ಎಂ.ರಂಗೇಗೌಡ ಪ್ರಯತ್ನದಲ್ಲಿದ್ದಾರೆ. ಸಂಚಾರ ದಟ್ಟಣೆ ಇಲ್ಲಿನ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕೊಡುವವರನ್ನು ಜನ ಅಪೇಕ್ಷಿಸುತ್ತಿದ್ದಾರೆ.


ಬೊಮ್ಮನ‘ಹಳ್ಳಿ’ ಮೇಸ್ಟ್ರು ಯಾರು?

ರೆಡ್ಡಿ ಜನಾಂಗ ಹಾಗೂ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಉತ್ತರ ಭಾರತೀಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಬಿಜೆಪಿಯ ಸತೀಶ್ ರೆಡ್ಡಿ ಹಿಡಿತದಲ್ಲಿರುವ ಕ್ಷೇತ್ರವನ್ನು ಹೇಗಾದರೂ ತೆಕ್ಕೆಗೆ ತೆಗೆದುಕೊಳ್ಳುವ ಕಾಂಗ್ರೆಸ್ ಪ್ರಯತ್ನ ಈವರೆಗೆ ಸಾಧ್ಯವಾಗಿಲ್ಲ. ಕಳೆದ ಬಾರಿ ನಾಗಭೂಷಣ್ ಪೈಪೋಟಿ ನೀಡಿದರೂ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಈ ಬಾರಿ ಅವರನ್ನೇ ಪುನಃ ಕಣಕ್ಕಿಳಿಸುವುದರ ಬಗ್ಗೆ ಕಾಂಗ್ರೆಸ್​ನಲ್ಲಿ ಚರ್ಚೆ ನಡೆದಿದೆ. ಜೆಡಿಎಸ್​ನಿಂದ ಸಲೀಂ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.


ಅಶೋಕನ ಸಾಮ್ರಾಜ್ಯಕ್ಕೆ ತೆನೆ ಲಗ್ಗೆ

ಉತ್ತರಹಳ್ಳಿಯಿಂದ ಬೇರ್ಪಟ್ಟು ರಚನೆಯಾದ ಪದ್ಮನಾಭನಗರ ಆರಂಭದಿಂದಲೂ ಬಿಜೆಪಿ ನಾಯಕ ಆರ್.ಅಶೋಕ ಹಿಡಿತದಲ್ಲಿದ್ದು, ಈ ಬಾರಿ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ಪ್ರಯತ್ನ ನಡೆಸಿದೆ. ಬಿಜೆಪಿಯಲ್ಲಿ ಸ್ಥಳೀಯವಾಗಿ ಸಾಕಷ್ಟು ಅಸಮಾಧಾನವಿದ್ದು, ಶಾಸಕರು ಜನಸಾಮಾನ್ಯರಿಗೆ ಲಭ್ಯರಿಲ್ಲ ಎಂಬುದೇ ದೊಡ್ಡ ವಿಷಯ. ಅದು ಚುನಾವಣೆ ಸಂದರ್ಭದಲ್ಲಿ ಪರಿಣಾಮ ಬೀರುವುದನ್ನು ಆ ಪಕ್ಷದವರೇ ಊಹಿಸಿದ್ದಾರೆ. ಜೆಡಿಎಸ್​ನಿಂದ ಗೋಪಾಲ್ ಕಣಕ್ಕಿಳಿಯಬಹುದು. ಕಾಂಗ್ರೆಸ್​ನಿಂದ ಕಳೆದ ಬಾರಿ ಉತ್ತಮ ಸಾಧನೆ ತೋರಿದ್ದ ಎಲ್.ಎಸ್.ಚೇತನ್ ಗೌಡ, ಗುರಪ್ಪ ನಾಯ್ಡು ಆಕಾಂಕ್ಷಿಗಳಾಗಿದ್ದಾರೆ.


ಪೇಟೆ ಚಿಕ್ಕದು, ಜಯದ ಶಾಪಿಂಗ್ ದೊಡ್ಡದು!

ರಾಜಧಾನಿಯ ಹಳೇ ಶಾಪಿಂಗ್ ಪ್ರದೇಶವಾದ ಚಿಕ್ಕಪೇಟೆ ಕ್ಷೇತ್ರದಲ್ಲಿ ಬಲಿಜ ಸಮುದಾಯ ನಿರ್ಣಾಯಕ. ಕ್ಷೇತ್ರದ ಮೇಲೆ ಸಂಸದ ಪಿ.ಸಿ.ಮೋಹನ್ ಹಿಡಿತವಿದ್ದರೂ, ಕಳೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಕಾಂಗ್ರೆಸ್​ನಿಂದ ಅವರ ಹೆಸರೇ ಅಂತಿಮಗೊಂಡಿದೆ. ಬಿಜೆಪಿಯಿಂದ ಉದಯ್ ಗರುಡಾಚಾರ್ ಈ ಸಲವೂ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರೊಂದಿಗೆ ಹೇಮಚಂದ್ರ ಸಾಗರ್, ಪಾಲಿಕೆ ಸದಸ್ಯ ಕೆಂಪೇಗೌಡ ಪ್ರಬಲ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್​ನಿಂದ ಲತಾ ಶಿವಕುಮಾರ್, ತನ್ವೀರ್ ಪಾಷ ಆಕಾಂಕ್ಷಿಗಳು.


‘ವಿಜಯ’ನಗರ ಆಳಲು ತಯಾರಿ

ವಸತಿ ಸಚಿವ ಎಂ.ಕೃಷ್ಣಪ್ಪ ಹಿಡಿತದಲ್ಲಿರುವ ವಿಜಯನಗರ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ವರ್ಷದ ಮುಂಚೆಯೇ ತಯಾರಿ ಆರಂಭಿಸಿದ್ದು, ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಈಗಾಗಲೇ ಸಾಕಷ್ಟು ಬೆವರು ಹರಿಸಿದ್ದಾರೆ. ರವೀಂದ್ರ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಇದೇ ವೇಳೆ ವಿ.ಸೋಮಣ್ಣ, ಪುತ್ರ ಅರುಣ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಕ್ಷೇತ್ರದ ಸಂಚಾರ ದಟ್ಟಣೆಗೆ ಪರಿಹಾರ ಸಿಕ್ಕಿಲ್ಲ, ಸ್ಲಂ ನಿವಾಸಿಗಳಿಗೆ ಮನೆ ಕೊಟ್ಟಿಲ್ಲದ ವಿಚಾರ ಚುನಾವಣೆಯ ಸ್ಥಳೀಯ ವಿಷಯವಾಗಲಿದೆ. ಕಳೆದ ಚುನಾವಣೆಯಲ್ಲಿ 25 ಅಭ್ಯರ್ಥಿಗಳು ಕಣಕ್ಕಿಳಿದು ಫೋಟೋ ಫಿನಿಶ್ ಫಲಿತಾಂಶವಾದಲ್ಲಿ ಏರುಪೇರು ಮಾಡಲು ಪ್ರಯತ್ನಿಸಿದ್ದರೂ, ಕೃಷ್ಣಪ್ಪ 32 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು.


ಬಸವನ ಬಜಾರ್​ನಲ್ಲಿ ಮತಬೇಟೆ

ಬೆಂಗಳೂರಿನ ಬಸವನಗುಡಿ ಬಿಜೆಪಿ ಭದ್ರಕೋಟೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಬಹುದಿನಗಳಿಂದಲೂ ಮತಗಳ ಕ್ರೋಡೀಕರಣದ ಕೃಷಿ ನಡೆಸಿದೆ. ಟಿಕೆಟ್ ಆಕಾಂಕ್ಷಿ ಕೆಂಪೇಗೌಡ ಕ್ಷೇತ್ರ ತುಂಬೆಲ್ಲ ಓಡಾಡಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗ ಮತ ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾರೆ. ಹಾಲಿ ಶಾಸಕ ಬಿಜೆಪಿಯ ರವಿಸುಬ್ರಹ್ಮಣ್ಯ ತಮ್ಮ ನೆಲೆ ಭದ್ರಪಡಿಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಕಾಂಗ್ರೆಸ್​ನಿಂದ ಸಚಿವ ಎಂ.ಆರ್.ಸೀತಾರಾಂ ಹೆಸರು ಕೇಳಿಬರುತ್ತಿದೆಯಾದರೂ ಇನ್ನೂ ಸ್ಪಷ್ಟತೆ ಇಲ್ಲ.

 

 

 

 

Leave a Reply

Your email address will not be published. Required fields are marked *

Back To Top