ಹಣ್ಣಿನ ವ್ಯಾಪಾರಿ ಕೊಲೆ ಮಾಡಿದ್ದ ಐವರ ಬಂಧನ

ಬೆಂಗಳೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಣ್ಣಿನ ವ್ಯಾಪಾರಿಯನ್ನು ಕೊಲೆ ಮಾಡಿದ್ದ ಐವರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಸ್ತೆ ಹಳೇಗುಡ್ಡದಹಳ್ಳಿಯ ಶರವಣ (27), ವೇಲು (44), ದೇವರಾಜ್(37), ಕಾಟನ್​ಪೇಟೆಯ ಆರ್. ರಾಜ್ಕಿರಣ್ (24) ಮತ್ತು ಎಸ್. ಅರವಿಂದ್(20) ಬಂಧಿತರು. ಭರತ್ ಕೊಲೆಯಾದವ. ಮೇ14ರಂದು ಕೃಷ್ಣರಾಜೇಂದ್ರ ಮಾರುಕಟ್ಟೆಯ ಪೂರ್ವ ಗೇಟ್​ನ ಮೆಟ್ಟಿಲುಗಳ ಬಳಿ ಹಣ್ಣಿನ ವ್ಯಾಪಾರಿ ಭರತ್ ಹೋಗುತ್ತಿದ್ದ. ಪೂರ್ವ ಗೇಟ್ ಬಳಿ ಹಣ್ಣುಗಳ ವ್ಯಾಪಾರ ಮಾಡುವ ಶರವಣ, ಸಹೋದರ ವೆಂಕಟೇಶ್ ಹಾಗೂ ಇತರ ಆರೋಪಿಗಳು ಭರತ್​ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಸಿಟಿ ಮಾರ್ಕೆಟ್ ಠಾಣೆ ಇನ್​ಸ್ಪೆಕ್ಟರ್ ಮಾರುತಿ ನೇತೃತ್ವದ ವಿಶೇಷ ತಂಡ ಆರೋಪಿಗಳಿಗೆ ಹುಡುಕಾಟ ನಡೆಸಿತ್ತು. ಆರೋಪಿಗಳು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಂಡ ತಿರುವಣ್ಣಾಮಲೈಗೆ ತೆರಳಿತ್ತು. ತಿರುವಣ್ಣಾಮಲೈ ಬಸ್ ನಿಲ್ದಾಣದ ಹಣ್ಣಿನ ಅಂಗಡಿ ಬಳಿ ಶರವಣ, ರಾಜ್ಕಿರಣ್, ಅರವಿಂದ್ ಮಲಗಿರುವುದನ್ನು ಪತ್ತೆಹಚ್ಚಿ

ಬಂಧಿಸಿತ್ತು. ಮೇ18 ರಂದು ಇನ್ನುಳಿದ ಆರೋಪಿಗಳಾದ ವೇಲು ಹಾಗೂ ದೇವರಾಜ್​ನನ್ನು ವಶಕ್ಕೆ ಪಡೆದಿದೆ. ತಲೆಮರೆಸಿಕೊಂಡಿರುವ ಐವರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿದ್ದುಕೊಂಡೇ ಸುಪಾರಿ: ಶರವಣ ಹಾಗೂ ಮೃತ ಭರತ್ ಸಿಟಿ ಮಾರುಕಟ್ಟೆಯ ಫುಟ್​ಪಾತ್ ಮೇಲೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರದ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿ ಮನಸ್ತಾಪ ಉಂಟಾಗಿತ್ತು. ಒಂದೂವರೆ ತಿಂಗಳ ಹಿಂದೆ ಗಲಾಟೆಯಾಗಿ ಹೊಡೆದಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಶರವಣ ಮಾವ ವೇಲು ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಸಲಾಗಿತ್ತು. ಈ ಮಧ್ಯೆ ಭರತ್​ನನ್ನು ಅಪರಾಧ ಪ್ರಕರಣದಲ್ಲಿ ಜೆ.ಜೆ. ನಗರ ಪೊಲೀಸರು ಜೈಲಿಗೆ ಕಳಿಸಿದ್ದರು. ಶರವಣನ ಕೊಲೆ ಮಾಡಲು ಸುಪಾರಿ ಕೊಟ್ಟಿರುವುದಾಗಿ ಜೈಲಿನಲ್ಲಿದ್ದ ಕರಿಯ ಎಂಬುವನ ಬಳಿ ಭರತ್ ಹೇಳಿಕೊಂಡಿದ್ದ. ಕರಿಯ ಜೈಲಿನಿಂದ ಹೊರಬಂದ ಬಳಿಕ ಇದನ್ನು ಶರವಣನ ಗಮನಕ್ಕೆ ತಂದಿದ್ದ. ಇದರಿಂದ ಆಕ್ರೋಶಗೊಂಡು ಭರತ್​ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಜಾಗಕ್ಕಾಗಿ ಜಗಳ

ಕೆ.ಆರ್. ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಮಾರುವ 1010 ಜಾಗಕ್ಕಾಗಿ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಜಾಗದ ವಿಷಯಕ್ಕೆ ಭರತ್ ಹಾಗೂ ವೇಲು ಕಡೆಯವರಿಂದ ಜಗಳ ನಡೆದಿತ್ತು. ಇದೇ ವಿಚಾರದಲ್ಲಿ ಭರತ್ ಜೈಲಿಗೂ ಹೋಗಿದ್ದ.