ರಾಜಗೆರೆಗೆ ಪಾರ್ಶ್ವವಾಯು ಬರೆ

ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ
ಬೇಲೂರು ತಾಲೂಕಿನ ರಾಜಗೆರೆ ಕಾಲನಿಯಲ್ಲಿ ಪಾರ್ಶ್ವವಾಯು ಸಮಸ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೆ ವ್ಯಕ್ತಿಯೊಬ್ಬರು ಅದಕ್ಕೆ ಬಲಿಯಾಗಿದ್ದಾರೆ.

ಗ್ರಾಮದ ಕಮಲಮ್ಮ (50), ತಿಮ್ಮಯ್ಯ (70), ದೇವರಾಜ್ (52), ಸಿಗ್ನಮ್ಮ (75) ಅವರು ಮೂರು ತಿಂಗಳ ಸರಾಸರಿಯಲ್ಲಿ ಸ್ಟ್ರೋಕ್‌ಗೆ ತುತ್ತಾಗಿ ಬಳಲುತ್ತಿದ್ದಾರೆ. 58 ವರ್ಷದ ಶಿವಣ್ಣ ಆ.29ರಂದು ಮೃತಪಟ್ಟಿದ್ದಾರೆ.


ಪಾರ್ಶ್ವವಾಯು ಕಾಯಿಲೆ ಹೆಚ್ಚಾಗಲು ನಿಖರ ಕಾರಣ ಏನೆಂಬುದೇ ತಿಳಿಯುತ್ತಿಲ್ಲ. ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕವಾಗಿದೆಯೆಂದು ಗ್ರಾಮಸ್ಥರು ಭಾವಿಸಿದ್ದರು. ಆದರೆ ವೈದ್ಯರು ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಆ ರೀತಿಯ ಸಮಸ್ಯೆ ಕಂಡುಬಂದಿಲ್ಲ. ಗ್ರಾಮದ ಯುವಕರೂ ಮಂಡಿ ನೋವಿನಿಂದ ಬಳಲುತ್ತಿದ್ದು, ಅನಾರೋಗ್ಯ ಸಮಸ್ಯೆ ಹೀಗೆ ಮುಂದುವರಿದರೆ ಊರು ಬಿಡುತ್ತೇವೆ ಎನ್ನುತ್ತಾರೆ.

ಮಕ್ಕಳಿಂದ ವೃದ್ಧರವರೆಗೆ ಮಂಡಿ ನೋವು ಸಾಮಾನ್ಯ ಎಂಬಂತಾಗಿದೆ. ವಿಚಿತ್ರ ಕಾಯಿಲೆಗೆ ತುತ್ತಾಗಿ ಬದುಕುತ್ತಿರುವ ಗ್ರಾಮದ ಜನರ ಬದುಕು ಅತಂತ್ರವಾಗಿದೆ. ರಾಜಗೆರೆ ಕಾಲನಿಯಲ್ಲಿ 104 ಕುಟುಂಬಗಳಿದ್ದು, ಎಲ್ಲರೂ ದಲಿತರು. ಸದ್ಯ ಗ್ರಾಮದ ನಾಲ್ವರು ಸ್ಟ್ರೋಕ್‌ನಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾರೆ.

ಒಂದೇ ಮನೆಯಲ್ಲಿ ಎರಡು ಪ್ರಕರಣ: ಒಂದು ವರ್ಷದಿಂದ ಸ್ಟ್ರೋಕ್‌ಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೊಂದು ಮನೆಯಲ್ಲೂ ಎರಡೆರಡು ಪ್ರಕರಣಗಳಿವೆ. ಕಾಲನಿ ಜನರಿಗಾಗಿ ಪಂಚಾಯಿತಿ ವತಿಯಿಂದ ಬೋರ್‌ವೆಲ್ ಕೊರೆಸಿದ್ದು, ಈ ನೀರನ್ನೇ ಕುಡಿಯುವುದಕ್ಕಾಗಿ ಬಳಸುತ್ತಾರೆ. ಆದರೆ ಇಷ್ಟು ದಿನಗಳವರೆಗೆ ಇಲ್ಲದ ಕಾಯಿಲೆ ಈಗ ಹರಡಲು ಕಾರಣ ಏನೆಂಬುದು ಯಾರಿಗೂ ಗೊತ್ತಾಗುತ್ತಿಲ್ಲ.

ಆಸ್ಪತ್ರೆ ಸೇವೆ ಕೊರತೆ: ರಾಜಗೆರೆ ಕಾಲನಿ ಜನ ಕಾಯಿಲೆ ಬಿದ್ದರೆ ದೂರದ ಹಳೇಬೀಡು ಅಥವಾ ಹಗರೆಗೆ ಹೋಗಬೇಕು. ಆದರೆ ಅಲ್ಲಿಯೂ ಚಿಕಿತ್ಸಾ ಸಾಮಗ್ರಿ ಕೊರತೆ ಕಾಡುತ್ತಿದ್ದು ಕೊನೆಗೆ ಹಾಸನಕ್ಕೆ ಬರಬೇಕಾಗುತ್ತದೆ. ಹೀಗಾಗಿ ಗ್ರಾಮದ ಯಾರೂ ಆಸ್ಪತ್ರೆಗೆ ತೆರಳದೆ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಮಾತ್ರೆಗಳನ್ನು ಸೇವಿಸಿ ದಿನದೂಡುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ ಹೆಚ್ಚಾಗಲು ಇದು ಪ್ರಮುಖ ಕಾರಣ ಎನ್ನಲಾಗಿದೆ.

ಹಾರನಹಳ್ಳಿಯೇ ಬೆಸ್ಟ್: ಪಾರ್ಶ್ವವಾಯು ಎಂದಾಕ್ಷಣ ಅಲೋಪತಿಗಿಂತ ಆಯುರ್ವೇದ ಚಿಕಿತ್ಸೆಯೇ ತಕ್ಷಣದ ಪರಿಹಾರ ಎಂದು ನಂಬಿರುವ ಗ್ರಾಮಸ್ಥರು. ಅರಸೀಕೆರೆ ತಾಲೂಕು ಹಾರನಹಳ್ಳಿಯಲ್ಲಿ ಸಿಗುವ ಆಯುರ್ವೇದ ಔಷಧಿಯನ್ನು ನೆಚ್ಚಿಕೊಂಡಿದ್ದಾರೆ. ಗ್ರಾಮದ ಯಾವ ಸದಸ್ಯರನ್ನು ಕೇಳಿದರೂ ಹಾರನಹಳ್ಳಿ ಆಸ್ಪತ್ರೆ ಹೆಸರನ್ನೇ ಹೇಳುತ್ತಾರೆ. ಹೀಗಾಗಿ ಕಾಯಿಲೆಯ ಮೂಲ ಇದುವರೆಗೆ ತಿಳಿದುಬಂದಿಲ್ಲ. ಪಾರ್ಶ್ವವಾಯು ಸಮಸ್ಯೆ ಹೆಚ್ಚಾಗಿದೆಯೆಂಬ ಮಾಹಿತಿ ಆಧರಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಹಾಗೂ ತಂಡ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಆಶಾ ಕಾರ್ಯಕರ್ತೆಯರ ವಿರುದ್ಧ ಆಕ್ರೋಶ: ಗ್ರಾಮಕ್ಕೆ ನಿಯೋಜನೆಗೊಂಡಿರುವ ಆಶಾ ಕಾರ್ಯಕರ್ತೆಯರು ಸರಿಯಾಗಿ ಕೆಲಸ ಮಾಡಿದರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎನ್ನುತ್ತಾರೆ ನಿವಾಸಿಗಳಾದ ಅಭಿಜಿತ್, ಶಿವಮೂರ್ತಿ, ಸುನಿಲ್. ಮಹಿಳೆಯರೆಲ್ಲ ಕೂಲಿ ಕೆಲಸಕ್ಕೆ ಹೋದ ಮೇಲೆ ಬಂದು ಗೋಡೆ ಮೇಲೆ ದಿನಾಂಕ ಬರೆಯುವುದಷ್ಟೇ ಅವರ ಕೆಲಸವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಬೇಕು. ಆಶಾ ಕಾರ್ಯಕರ್ತೆಯರು ಆರೋಗ್ಯ ಸಲಹೆ ನೀಡಬೇಕು. ಇಲ್ಲವಾದರೆ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ.

 ರಾಜಗೆರೆ ಗ್ರಾಮದಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿ ಪಾರ್ಶ್ವವಾಯುವಿಗೆ ಜನ ತುತ್ತಾಗುತ್ತಿದ್ದಾರೆ ಎಂಬುದು ಸುಳ್ಳು. ಪ್ರತಿ ಲೀಟರ್ ನೀರಿಗೆ 30 ಮಿಲಿ ಗ್ರಾಂಗಿಂತ ಕಡಿಮೆ ಫ್ಲೋರೈಡ್ ಅಂಶವಿರಬೇಕು. ಈ ಊರಿನ ನೀರಿನಲ್ಲಿ ನಿಗದಿಗಿಂತ ಕಡಿಮೆಯಿದೆ. ಪಾರ್ಶ್ವವಾಯುವಿಗೆ ತುತ್ತಾಗಿರುವ ಎಲ್ಲರೂ ವಯಸ್ಸಾದವರು. ಹೀಗಾಗಿ ಅದಕ್ಕೆ ಫ್ಲೋರೈಡ್ ಕಾರಣವಾಗುವುದಿಲ್ಲ. ಗ್ರಾಮದಲ್ಲಿ ಆರೋಗ್ಯ ತಪಾಸಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
ಡಾ. ಸತೀಶ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಗ್ರಾಮದ ಎಲ್ಲರಿಗೂ ಪಾರ್ಶ್ವವಾಯು ತಗುಲಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜಗೆರೆ ಕಾಲನಿಯಲ್ಲಿ 104 ಮನೆಗಳಿದ್ದು ಐದು ಜನರಿಗೆ ಸ್ಟ್ರೋಕ್ ಆಗಿದೆ. ಆರೋಗ್ಯ ಇಲಾಖೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಸಂತಿ ಆಶಾ ಕಾರ್ಯಕರ್ತೆ