ಸೋಮವಾರಪೇಟೆ: ಗ್ರಾಹಕರಿಗೆ ಕಡಿಮೆ ಬೆಲೆಗೆ ಪೀಠೋಪಕರಣಗಳು ಹಾಗು ಗೃಹೋಪಯೋಗಿ ವಸ್ತುಗಳನ್ನು ನೀಡುತ್ತೇನೆ ಎಂದು ನಂಬಿಸಿ ಗ್ರಾಹಕರಿಂದ ಮುಂಗಡ ಹಣ ಪಡೆದು ನಾಪತ್ತೆಯಾಗಿದ್ದ ಮಹೀ ಟ್ರೇಡರ್ಸ್‌ನ ಮಾಲೀಕನನ್ನು ಪಟ್ಟಣದ ಪೊಲೀಸರು ಗುರುವಾರ ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ.
ತಮಿಳುನಾಡು ರಾಜ್ಯದ ಪುದುಕೋಟೈ ಜಿಲ್ಲೆಯ ಬಾಬು ಕೇಶವನ್ ಬಂಧಿತ. ಸ್ಥಳ ಮಹಜರು ನಡೆಸಿದ ಪೊಲೀಸರು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಡಿಸೆಂಬರ್ 7 ರಿಂದ ಪಟ್ಟಣದ ಎಂ.ಜಿ.ರಸ್ತೆಯ ದೂಪದ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭಿಸಿದ್ದ, ಮಹೀ ಟ್ರೇಡರ್ಸ್‌ನಲ್ಲಿ ಹಲವು ಗ್ರಾಹಕರು ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿದ್ದರೆ, ನೂರಾರು ಮಂದಿ ಗ್ರಾಹಕರು ತಲಾ ಸಾವಿರಾರು ರೂ.ಗಳನ್ನು ಮುಂಗಡ ಹಣ ನೀಡಿದ್ದರು.
ಡಿ. 31ರಿಂದ ಅಂಗಡಿ ಬಾಗಿಲು ತೆಗೆಯದೇ ಮುಂಗಡ ಹಣದೊಂದಿಗೆ ನಾಪತ್ತೆಯಾಗಿದ್ದ. ಜ.15ರಂದು ವಳಗುಂದ ಗ್ರಾಮದ ವಿ.ಎಂ.ಗಿರೀಶ್ ಅವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು. ತನಿಖೆ ವಿಳಂಬವಾಗುತ್ತಿದ್ದಂತೆ ಹಣ ಕಳೆದುಕೊಂಡ ಗ್ರಾಹಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕೂಡಲೇ ಆರೋಪಿಯನ್ನು ಬಂಧಿಸದಿದ್ದರೆ ಎಸ್‌ಪಿ ಕಚೇರಿ ಎದುರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ನಂತರ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ಪೊಲೀಸರು, ತಮಿಳುನಾಡು ರಾಜ್ಯಕ್ಕೆ ತೆರಳಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಾಬು ಕೇಶವನ್ ಅವನನ್ನು ಬಂಧಿಸಿದ್ದಾರೆ.