ಮತ್ತೆ ಐದು ಹೊಸ ತಾಲೂಕು

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ 83.97 ಕೋಟಿ ರೂ. ವೆಚ್ಚದಲ್ಲಿ ತ್ರಿ-ಸ್ಟಾರ್ ಹೊಟೆಲ್ ನಿರ್ಮಾಣ ಹಾಗೂ ಸಾರಿಗೆ ಇಲಾಖೆಯಿಂದ ಬಿಎಂಟಿಸಿಗೆ ಫೇಮ್ ಯೋಜನೆಯಡಿ 80 ಎಲೆಕ್ಟ್ರಿಕ್ ಬಸ್​ಗಳ ಖರೀದಿಗೆ ಸಂಪುಟ ಸಭೆ ನಿರ್ಧರಿಸಿದೆ. ರಾಮನಗರ ಜಿಲ್ಲೆಯ ರಾಗಿಹಳ್ಳಿಯಲ್ಲಿ ಹಕ್ಕಿ-ಪಿಕ್ಕಿ ಮತ್ತು ಇರುಳಿಗ ಜನಾಂಗದವರ ಪುನರ್ವಸತಿಗೆ 350 ಎಕರೆ ಅರಣ್ಯ ಜಮೀನು ವ್ಯವಸಾಯದ ಉದ್ದೇಶಕ್ಕೆ ಮಂಜೂರಾತಿ ನೀಡಿದೆ.

ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದ ಹಾರೋಹಳ್ಳಿ, ಚೇಳೂರು, ತೇರದಾಳ ಹಾಗೂ ಕಳಸಾ ಹೊಸ ತಾಲೂಕುಗಳ ಹೊರತಾಗಿ ಮತ್ತೆ ಐದು ಪಟ್ಟಣಗಳಿಗೆ ತಾಲೂಕುಗಳ ಪಟ್ಟ ನೀಡಲಾಗಿದೆ.

ಸೋಮವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ, ಕುಶಾಲನಗರ, ವಿಜಯಪುರ ಜಿಲ್ಲೆಯ ಆಲಮೇಲ, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ಘೋಷಿಸಲಾಗಿದೆ.

ಈ ಮೂಲಕ 227 ಇದ್ದ ತಾಲೂಕುಗಳ ಸಂಖ್ಯೆ 236ಕ್ಕೆ ಏರಿದಂತಾಗಿದೆ. ಮೂಲತಃ ರಾಜ್ಯದಲ್ಲಿನ 176 ತಾಲೂಕುಗಳ ಜತೆಗೆ ಕಳೆದ ಆರು ವರ್ಷಗಳ ಅವಧಿಯಲ್ಲಿ 49 ಹೊಸ ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ 9 ತಾಲೂಕುಗಳ ಸೇರ್ಪಡೆ ಮಾಡಲಾಗಿದೆ.

ರೈಲ್ವೆ ಕಂಬಿ ಬ್ಯಾರಿಕೇಡ್: ಮೈಸೂರು ಜಿಲ್ಲೆಯ ಹುಣಸೂರು, ಮೇಟಿಕುಪ್ಪೆ ಹಾಗೂ ಆನೆಚೌಕೂರು ವನ್ಯಜೀವಿ ವಿಭಾಗಗಳಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ರೈಲ್ವೆ ಕಂಬಿಗಳನ್ನು ಉಪಯೋಗಿಸಿ 23.29 ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್ ನಿರ್ವಣ, ಹುಬ್ಬಳ್ಳಿಯ ಕಿಮ್್ಸ ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ವಣಕ್ಕಾಗಿ 20 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಯಿತು. ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್​ನ ಬಟಾಲಿಯನ್ ಸ್ಥಾಪಿಸಲು ಸಿಆರ್​ಪಿಎಫ್​ಗೆ 50 ಎಕರೆ ಜಮೀನು ಹಂಚಿಕೆ, ಉಡುಪಿ ಜಿಲ್ಲೆಯ ಕುತ್ಪಾಡಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್​ಗೆ 10.57 ಎಕರೆ ಜಮೀನು ಹಂಚಿಕೆ, ಅರಸೀಕೆರೆಯಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕಾರ್ಕಳದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಗಳ ನಿರ್ವಣ, ಬಳ್ಳಾರಿಯಲ್ಲಿ ಸರ್ಕಾರಿ ನೌಕರರ ವಸತಿಗೃಹ ನಿರ್ವಣಕ್ಕೆ 15 ಕೋಟಿ ರೂ. ಕಾಮಗಾರಿಗೆ ಅನುಮೋದನೆಗೆ ತೀರ್ವನಿಸಲಾಯಿತು.

ಹೇಮಾವತಿ ನದಿಯಿಂದ ಅರಕಲಗೂಡು ತಾಲೂಕಿನ 150 ಕೆರೆಗಳು ಹಾಗೂ 50 ಕಟ್ಟೆಗಳಿಗೆ 190 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಹಾಗೂ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ದೂತನೂರು ಕಾವಲ್ ಗ್ರಾಮದ ಬಳಿ 267 ದಶಲಕ್ಷ ಕ್ಯುಸೆಕ್ ನೀರನ್ನು ಎತ್ತಿ 141 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಲಾಯಿತು.

ರಾಮನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಗೂ ವಸತಿ ನಿಲಯಗಳ ನಿರ್ವಣಕ್ಕೆ 89.21 ಕೋಟಿ ರೂ. ಯೋಜನೆ ಹಾಗೂ ಅರಸೀಕೆರೆಯಲ್ಲಿ 64.75 ಕೋಟಿ ರೂ. ವೆಚ್ಚದಲ್ಲಿ ಹೊಸ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ವಣಕ್ಕೆ ಅನುಮೋದನೆ ನೀಡಲಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಬೀಜಗಳ ಕಿಟ್ ವಿತರಣೆ, ಮಂಡ್ಯ ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಗೆ 30 ಕೋಟಿ ರೂ., ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.

ಶೂ, ಸಾಕ್ಸ್ ವಿತರಣೆ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿವರೆಗಿನ 44.57 ಲಕ್ಷ ವಿದ್ಯಾರ್ಥಿಗಳಿಗೆ 126 ಕೋಟಿ ರೂ.ಗಳ ವೆಚ್ಚದಲ್ಲಿ ಶೂ ಮತ್ತು ಸಾಕ್ಸ್​ಗಳನ್ನು ವಿತರಿಸಲು ಸಂಪುಟ ಸಭೆ ನಿರ್ಧರಿಸಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಜೂನ್ ಮೊದಲ ವಾರದಲ್ಲಿ ವಿತರಿಸಲು ಖರೀದಿ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ರಾಜ್ಯದ ಕಂದಾಯ ಇಲಾಖೆಯ ಆಡಳಿತದ ವಿಕೇಂದ್ರೀಕರಣ ನೀತಿಗೆ ಅನುಸಾರವಾಗಿ ಹಿಂದಿನ ಹಲವಾರು ತಾಲೂಕು ಪುನಾರಚನೆ ಆಯೋಗಗಳ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ನಲ್ಲಿ ಘೋಷಿಸಿದ ನಾಲ್ಕು ಹಾಗೂ ಹೊಸದಾಗಿ ಐದು ಪಟ್ಟಣಗಳನ್ನು ತಾಲೂಕು ಕೇಂದ್ರಗಳಾಗಿ ರಚಿಸಲು ಸಂಪುಟ ತೀರ್ವನಿಸಿದೆ.

ಆರ್.ವಿ.ದೇಶಪಾಂಡೆ, ಕಂದಾಯ ಸಚಿವ