ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಹೊಡೆದುರುಳಿಸಿದೆ.

ಶೋಪಿಯಾನ್​ ಜಿಲ್ಲೆಯ ಕಿಲ್ಲೋರ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಮೇಲೆ ಯೋಧರು ಶುಕ್ರವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶುಕ್ರವಾರ ರಾತ್ರಿ ಓರ್ವ ಉಗ್ರ ಮೃತಪಟ್ಟಿದ್ದ.

ಶನಿವಾರ ಬೆಳಗ್ಗೆಯ ವೇಳೆಗೆ ಇನ್ನೂ ನಾಲ್ಕು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಓರ್ವ ಉಗ್ರನ ಮೃತ ದೇಹ ಪತ್ತೆಯಾಗಿದ್ದು, ಆತನನ್ನು ಉಮರ್​ ಮಲಿಕ್​ ಎಂದು ಗುರುತಿಸಲಾಗಿದೆ. ಈತ ಲಷ್ಕರ್​ ಎ ತೋಯೆಬಾ ಉಗ್ರ ಸಂಘಟನೆಗೆ ಸೇರಿದವನು, ಈತನಿಂದ ಎಕೆ-47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)