ಚಂದ್ರಯಾನ 2ಕ್ಕೆ ಇಸ್ರೋ ರೋವರ್ ರೆಡಿ

ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲಿರುವ ಮೊಟ್ಟ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಶೀಘ್ರವೇ ಭಾಜನವಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2ರ ರೋವರ್ ಸಿದ್ಧವಾಗಿದ್ದು, ಎಪ್ರಿಲ್ ಆರಂಭದಲ್ಲಿ ಉಡಾವಣೆಗೊಳ್ಳುವ ನಿರೀಕ್ಷೆ ಇದೆ. ಇದು ಉಡಾವಣೆಗೊಂಡ ಒಂದು ಅಥವಾ ಎರಡು ತಿಂಗಳಲ್ಲಿ ಚಂದ್ರನ ಕಕ್ಷೆಗೆ ಉಪಗ್ರಹ ಸೇರ್ಪಡೆಗೊಳ್ಳಲಿದೆ.

 ‘ಚಂದ್ರಯಾನ 2 ಯಶಸ್ಸಿಗೆ ಇಸ್ರೋ ವಿಜ್ಞಾನಿಗಳ ತಂಡ ಕೆಲಸ ಮಾಡುತ್ತಿದ್ದು, ‘ಜಿಎಸ್​ಎಲ್​ವಿ ಎಂಕೆ 2’ ರಾಕೆಟ್ ಮೂಲಕ 3,290 ಕಿಲೋ ತೂಕದ ಉಪಗ್ರಹ, ರೋವರ್ ಹಾಗೂ ಲ್ಯಾಂಡರನ್ನು ಒಳಗೊಂಡ ಗಗನನೌಕೆಯನ್ನು ಏಪ್ರಿಲ್​ನಲ್ಲಿ ಉಡಾಯಿಸಲು ಸಿದ್ಧತೆ ನಡೆದಿದೆ. ಆದರೆ, ದಿನಾಂಕ ನಿಗದಿ ಇನ್ನೂ ಆಗಿಲ್ಲ. ಅದನ್ನು ಹವಾಮಾನ, ಚಂದ್ರನ ಮೇಲ್ಮೈ ವಾತಾವರಣ, ಬಾಹ್ಯಾಕಾಶದ ಸ್ಥಿತಿಗತಿಗಳನ್ನು ಅವಲೋಕಿಸಿ ತೀರ್ಮಾನಿಸಲಾಗುವುದು’ ಎಂದು ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ತಿಳಿಸಿದ್ದಾರೆ.

ಈ ಹಿಂದೆ, ಚಂದ್ರಯಾನ 1ರ ಉಪಗ್ರಹವನ್ನು ಪಿಎಸ್​ಎಲ್​ವಿ ರಾಕೆಟ್ ಮೂಲಕ ಉಡಾಯಿಸಿ ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು.

ಯೋಜನೆ ವಿವರ

ಗಗನ ನೌಕೆಯಲ್ಲಿ ಸಾಗುವ ಉಪಗ್ರಹ, ರೋವರ್ ಹಾಗೂ ಲ್ಯಾಂಡರ್​ಗಳ ಪೈಕಿ ಉಪಗ್ರಹ ಚಂದ್ರನ ಕಕ್ಷೆಗೆ ಸೇರ್ಪಡೆಯಾದರೆ, ರೋವರನ್ನು ಒಳಗೊಂಡ ಲ್ಯಾಂಡರ್ ನೇರವಾಗಿ ಚಂದ್ರನ ಅಂಗಳದಲ್ಲಿ ಇಳಿಯುತ್ತದೆ. ಬಳಿಕ ಲ್ಯಾಂಡರ್​ನೊಳಗಿಂದ ಆರು ಚಕ್ರಗಳ ರೋವರ್ ಚಂದ್ರನ ಅಂಗಳಕ್ಕೆ ಇಳಿಯುತ್ತದೆ.

  • ಚಂದ್ರನ ಅಂಗಳದಲ್ಲಿ ಒಂದು ದಿನ(ಭೂಮಿಯ 14 ದಿನ) ರೋವರ್ 150ರಿಂದ 200 ಮೀಟರ್ ಸಂಚರಿಸಿ ಅಲ್ಲಿನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆ ಮಾಡಿ ದತ್ತಾಂಶವನ್ನು ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ.
  • ಒಂದು ಚಂದ್ರ ದಿನದ ಅವಧಿ ಕೆಲಸ ಮಾಡುವಷ್ಟೇ ಸೌರಶಕ್ತಿ ಅದರಲ್ಲಿ ದಾಸ್ತಾನಿರಲಿದೆ. ದತ್ತಾಂಶ, ಚಿತ್ರಗಳನ್ನು ರವಾನಿಸಿದ ಬಳಿಕ ರೋವರ್ ಕೆಲಸ ಸ್ಥಗಿತಗೊಳಿಸಲಿದೆ. ಆದರೆ, ಚಂದ್ರನ ಆ ಭಾಗಕ್ಕೆ ಸೂರ್ಯನ ಬೆಳಕು ಬಿದ್ದಾಗ ರೋವರ್​ನಲ್ಲಿ ಅಳವಡಿಸಿರುವ ಸೌರಫಲಕಗಳ ಮೂಲಕ ಇಂಧನ ದೊರೆತು ಅದು ಮತ್ತೆ ಕೆಲಸ ಆರಂಭಿಸಬಹುದೆಂಬ ನಿರೀಕ್ಷೆ ಇದೆ.

 

ಮುಂದಿನ ವರ್ಷದಿಂದ ಪ್ರತಿವರ್ಷ 15-18 ಉಡಾವಣೆಗಳನ್ನು ನಡೆಸಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಪ್ರಸ್ತುತ ಹಲವು ಕಾರಣಗಳಿಂದಾಗಿ ನಿಗದಿತ ಗುರಿಯ ಅರ್ಧದಷ್ಟು ಉಡಾವಣೆಗಳನ್ನಷ್ಟೇ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಉಡಾವಣಾ ವಾಹಕದ ಸಾಮರ್ಥ್ಯ 4 ಟನ್ ಆಗಿದ್ದು, ಹೀಗಾಗಿ ಜಿಸ್ಯಾಟ್ 11ರ ಉಡಾವಣೆಗೆ ವಿದೇಶಿ ಉಡಾವಣಾ ವಾಹಕವನ್ನು ಉಪಯೋಗಿಸುತ್ತಿದ್ದೇವೆ.

| ಡಾ.ಕೆ.ಶಿವನ್ ಇಸ್ರೋ ಅಧ್ಯಕ್ಷ

 

ಇನ್ನೈದು ತಿಂಗಳಲ್ಲಿ ಐದು ಉಡಾವಣೆ

  • ಜಿಎಸ್​ಎಲ್​ವಿಎಫ್​ಒ8 ಮೂಲಕ ಜಿಸ್ಯಾಟ್-6ಎ ಉಪಗ್ರಹ ಉಡಾವಣೆ
  • ಜಿಎಸ್​ಎಲ್​ವಿ-ಎಂಕೆ3(ಸುಧಾರಿತ ಎರಡನೇ ರಾಕೆಟ್)
  • ಜಿಎಸ್​ಎಲ್​ವಿ ಎಂಕೆ2 ಮೂಲಕ ಚಂದ್ರಯಾನ 2 ಉಡಾವಣೆ
  • ಪಿಎಸ್​ಎಲ್​ವಿ ಮೂಲಕ ಐಆರ್​ಎನ್​ಎಸ್​ಎಸ್-1ಐ ನ್ಯಾವಿಗೇಷನ್ ಉಪಗ್ರಹ ಉಡಾವಣೆ
  • ಜಿಸ್ಯಾಟ್ 11 ಉಪಗ್ರಹ(5.7 ಟನ್) ಫ್ರೆಂಚ್ ಗಯಾನಾದಿಂದ ಜೂನ್​ನಲ್ಲಿ ಉಡಾವಣೆ

Leave a Reply

Your email address will not be published. Required fields are marked *