ಸರಣಿ ಅಪಘಾತ ಐವರಿಗೆ ಗಾಯ

ಕುಂದಾಪುರ: ಇಲ್ಲಿನ ಸಂಗಮ್ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಕಾರು, ಲಾರಿ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿ ಮೂಲದ ಕುಟುಂಬ ಮುರ್ಡೇಶ್ವರ ಕಡೆ ತೆರಳುತ್ತಿದ್ದಾಗ ಈ ಅಪಫಾತ ಸಂಭವಿಸಿದೆ. ಕಾರು ಸಂಗಮ್ ಸೇತುವೆ ಪ್ರವೇಶಿಸುತ್ತಿದ್ದಂತೆ ಟಿಪ್ಪರ್ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಕಾರು ಬಲಬದಿಗೆ ತಿರುಗಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಸರಕು ತುಂಬಿದ ಲಾರಿಗೆ ಡಿಕ್ಕಿಯಾಗಿದೆ.

ಕಾರು ಜಖಂ: ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಪ್ರಯಾಣಿಕರು ಕಾರಿನೊಳಗೆ ಸಿಲುಕಿದ್ದರು. ಕೂಡಲೇ ವಾಹನ ಸವಾರರು ಹಾಗೂ ಸ್ಥಳೀಯ ಯುವಕರು ಕಾರಿನೊಳಗೆ ಸಿಲುಕಿರುವ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಸಂಚಾರ ವ್ಯತ್ಯಯ: ಸೇತುವೆ ಮೇಲೆ ಅಪಘಾತ ನಡೆದಿದ್ದರಿಂದ ಕೆಲಹೊತ್ತು ರಸ್ತೆ ಬ್ಲಾಕ್ ಆಗಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಕುಂದಾಪುರ ಸಂಚಾರಿ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.