ಕ್ಯಾಲಿಫೋರ್ನಿಯಾ: ಕರೆಯದೇ ಬಂದ ಅತಿಥಿಗಳು ಮನೆಯಲ್ಲಿ ಬೆಚ್ಚಗೇ ಅಡಗಿ ಕುಳಿತಿದ್ದವು. ಆದರೆ ಇವುಗಳು ಮಾಡುತ್ತಿದ್ದ ಶಬ್ದ ಕುಟುಂಬದ ಸದಸ್ಯರ ನಿದ್ದೇ ಕೆಡಿಸಿದ್ದಂತೂ ಸುಳ್ಳಲ್ಲ.
ಅಮೆರಿಕದಲ್ಲಿ ಚಳಿಗಾಲ ಆರಂಭವಾಗಿದೆ. ಚಳಿಯಲ್ಲಿ ರಕ್ಷಣೆ ಪಡೆಯಲು ಐದು ಕರಡಿಗಳು ಮನೆಯಲ್ಲಿ ಅಡಗಿಕೊಂಡಿದ್ದವು. ಮನೆಯಲ್ಲಿ ವಿಚಿತ್ರ ಶಬ್ದ ಬರುತ್ತಿತ್ತು. ಈ ಶಬ್ದ ಎಲ್ಲಿಂದ ಬರುತ್ತಿದೆ ಎಂಬುದು ಮಾತ್ರ ಮನೆಯವರಿಗೆ ಗೊಂದಲವಾಗಿತ್ತು.
ಕೆಲ ದಿನ ಮನೆಯಲ್ಲಿ ಗೊರಕೆಯಂತಹ ಶಬ್ದಗಳು, ಕೇಳಲು ಶುರುವಾಗಿತ್ತು. ಮನೆಯಲ್ಲೆಲ್ಲಾ ಹುಡುಕಿದರೂ ಏನೂ ಪತ್ತೆಯಾಗಲಿಲ್ಲ. ನಂತರ ಪ್ರಾಣಿಗಳನ್ನು ಹಿಡಿಯುವ ತಂಡವನ್ನು ಕರೆತರಲಾಯಿತು. ಇದರಿಂದ ಕರಡಿ ಇರುವುದು ಪತ್ತೆಯಾಯಿತು.
ಆದರೆ ಕರಡಿ ಒಂದೇ ಇದೆ ಎಂದು ಭಾವಿಸಿದ್ದವರಿಗೆ ಅಚ್ಚರಿ ಕಾದಿತ್ತು. ತಾಯಿ ಕರಡಿ ತನ್ನ ನಾಲ್ಕು ಮರಿಗಳೊಂದಿಗೆ ಮನೆಯಲ್ಲಿ ಅಡಗಿ ಕುಳಿತಿದ್ದನ್ನು ಕಂಡು ಕುಟುಂಬ ಸದಸ್ಯರಿಗೆ ಶಾಕ್ ಆಗಿತ್ತು. ಚಳಿಗಾಲದಲ್ಲಿ ತನ್ನ ಮರಿಗಳನ್ನು ಬೆಚ್ಚಗಿಡಲು ತಾಯಿ ಕರಡಿ ಸಮೀಪದ ಮನೆಯಲ್ಲೇ ಅಡಗಿಕುಳಿತಿರುವುದು ಪತ್ತೆಯಾಯಿತು. ಒಟ್ಟಾರೆ ಈ ಐದು ಕರಡಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆಯಂತೆ.