ಭಾರತದ 5 ಏರ್​ಪೋರ್ಟ್​ಗಳು ಬಂದ್​: ವಿಮಾನ ಹಾರಾಟ ಸ್ಥಗಿತಗೊಳಿಸಿದ ಪಾಕ್​

ಶ್ರೀನಗರ/ನವದೆಹಲಿ: ಭಾರತೀಯ ವಾಯು ಪಡೆಗಳು ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ನ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬಂದ್​ ಮಾಡಲಾಗಿದೆ. ಪಾಕಿಸ್ತಾನವೂ ಸಹ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್​ನಲ್ಲಿ ಸೇನಾ ಹೆಲಿಕಾಪ್ಟರ್​ ತಾಂತ್ರಿಕ ಕಾರಣಗಳಿಂದ ಪತನಗೊಳಿತ್ತು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಭಾರತದ ಗಡಿ ಉಲ್ಲಂಘಿಸಿದ್ದವು. ಪಾಕ್​ ವಿಮಾನಗಳನ್ನು ಭಾರತೀಯ ವಿಮಾನಗಳು ಹಿಮ್ಮೆಟ್ಟಿಸಿದ್ದು, ಒಂದು ವಿಮಾನವನ್ನು ಹೊಡೆದುರುಳಿಸಿದೆ.

ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಜಮ್ಮು, ಲೇಹ್​ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಗಳಿಗೆ ಬಂದ್​ ಮಾಡಲಾಗಿದೆ. ಜತೆಗೆ ಪಂಜಾಬ್​ನ ಚಂಡೀಗಢ ಮತ್ತು ಅಮೃತಸರದ ವಿಮಾನ ನಿಲ್ದಾಣಗಳಲ್ಲೂ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ.

ಪಾಕ್​ನಲ್ಲೂ ವಿಮಾನ ನಿಲ್ದಾಣ ಬಂದ್​

ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದ ಬೆನ್ನಲ್ಲೇ ಪಾಕಿಸ್ತಾನದ ಲಾಹೋರ್​, ಮುಲ್ತಾನ್​, ಇಸ್ಲಾಮಾಬಾದ್​, ಫೈಸಲಾಬಾದ್​, ಸಿಯಾಲ್​ಕೋಟ್​ ವಿಮಾನ ನಿಲ್ದಾಣದಿಂದ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. (ಏಜೆನ್ಸೀಸ್​)