Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬಲಶಾಲಿ ಬದುಕು

Wednesday, 19.09.2018, 3:05 AM       No Comments

|ಡಾ. ಪೂರ್ಣಿಮಾ ಶಶಿಧರ್

ನಮ್ಮ ಬದುಕಿನ ರೂವಾರಿಗಳು ನಾವೇ ಆಗಬೇಕೆ ಹೊರತು, ಇನ್ಯಾರದೋ ರೀತಿಯ ಬದುಕು ನಮ್ಮದಾಗಬಾರದು. ‘ಸತ್ತಂತಿಹರನು ಬಡಿದೆಚ್ಚರಿಸು’ ಎನ್ನುವ ಕುವೆಂಪು ಅವರ ಮಾತು ಬದುಕಿನ ಮಂತ್ರವಾಗಬೇಕು. ಯಾವುದರ ಮೇಲೆಯೂ ಅತಿಯಾದ ಅವಲಂಬನೆ ಬೇಡ. ಅದನ್ನು ಖುಷಿಯಾಗಿ, ಇಡಿಯಾಗಿ ಅನುಭವಿಸಬೇಕೆಂದರೆ ಕನಿಷ್ಠ ಸಣ್ಣಪುಟ್ಟ ಬದಲಾವಣೆಯ ಮುಖಾಂತರ ಸ್ವೀಕರಿಸಬೇಕಿರುವುದು ಅನಿವಾರ್ಯ.

ಈ ಲೇಖನ ಓದುವ ಮುಂಚೆ ಮೂರು ದಶಕಗಳ ಹಿಂದೆ ಇದ್ದ ಮನೆಗೆ ಒಮ್ಮೆ ಹೋಗಿ ಬರೋಣ. ವಾಸಕ್ಕೆ ಅಚ್ಚುಕಟ್ಟಾದ ಮನೆ, ಅದರ ತುಂಬ ಜನ. ಯಜಮಾನನಿಂದ ಹಿಡಿದು ಮನೆಯ ಪ್ರತಿಯೊಬ್ಬ ಸದಸ್ಯರೂ ಹಂಚಿಕೊಂಡು ಮಾಡುತ್ತಿದ್ದ ಕೆಲಸಗಳು. ದುಡಿಮೆಯೆಲ್ಲ ಯಾಂತ್ರಿಕ ಸ್ಪರ್ಶವಿಲ್ಲದೆ ಸಾರ್ಥಕ ರೀತಿಯಲ್ಲಿ ಮುಗಿದು ಹೋಗುತ್ತಿತ್ತು. ಹಾಗೆಯೇ ಹರಟೆ, ಜಗಳ, ಮುನಿಸು, ನಗು ಇವುಗಳಿಗೂ ಜಾಗವಿತ್ತು. ಯಾವುದೇ ಒತ್ತಡವಿಲ್ಲದೆ ಒಳ್ಳೆಯ ಊಟ, ನಿದ್ರೆಯೊಂದಿಗೆ ದಿನ ಕೊನೆಗಾಣುತ್ತಿತ್ತು. ಯಾವಾಗಲಾದರೊಮ್ಮೆ ಬರುತ್ತಿದ್ದ ಕೆಮ್ಮು, ನೆಗಡಿ, ಜ್ವರ ಮುಂತಾದ ಕಾಯಿಲೆಗಳು ಬಂದ ವೇಗದಲ್ಲೇ ಮಾಯವಾಗುತ್ತಿದ್ದವು. ತೀರಾ ದೀರ್ಘ ಕಾಲ ಹಾಸಿಗೆ ಹಿಡಿದು ಮಲಗಿದ ನೆನಪುಗಳು ತುಂಬ ಕಡಿಮೆ.

ಈಗ ಇಂದಿನ ಬದುಕನ್ನೊಮ್ಮೆ ಅವಲೋಕಿಸೋಣ. ಅಗತ್ಯಕ್ಕಿಂತಲೂ ದೊಡ್ಡ ಮನೆ, ಅದರ ತುಂಬ ಯಂತ್ರಗಳು, ಅವುಗಳೊಂದಿಗೆ ಅಲ್ಲೊಬ್ಬರು ಇಲ್ಲೊಬ್ಬರು ಕಾಣುವ ಮನೆಯ ಸದಸ್ಯರು. ಆ ಯಂತ್ರಗಳಿಗೆ ಅತ್ಯಂತ ಕೃತಜ್ಞನಾಗಿರುವ ಮನುಷ್ಯ. ತಮ್ಮ ಅಳು, ನಗು, ಕೋಪಗಳೆನ್ನುವ ಭಾವನೆಗಳನ್ನು ಕೃತಕವಾಗಿ ಹರಿಬಿಡುವುದರಲ್ಲಿ ತಲ್ಲೀನರಾಗಿರುವ ಮನೆಯ ಸದಸ್ಯರು. ಕುಳಿತಲ್ಲಿಂದಲೇ ಮುಗಿದುಹೋಗುವ ಬಹುತೇಕ ಕೆಲಸಗಳು. ಪರಿಣಾಮವಾಗಿ, ರೋಗಗಳ ಅನಿರೀಕ್ಷಿತ ಆಗಮನ. ಅವುಗಳೊಂದಿಗೆ ಹೋರಾಟ ನಡೆಸುತ್ತ ಒತ್ತಡದಲ್ಲೇ ಕೊನೆಗೊಳ್ಳುತ್ತಿರುವ ದಿನಗಳು. ಇದು ಬದುಕಿನ ವಿಪರ್ಯಾಸವೋ ದುರಂತವೋ ತಿಳಿಯದು. ಇದನ್ನೆಲ್ಲ ಈಗ ಯಾಕೆ ಹೇಳಬೇಕಾಯಿತೆಂದರೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವ್ಯಾಯಾಮರಹಿತ ಜೀವನಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಯುವಜನತೆ ತುತ್ತಾಗುತ್ತಿರುವುದನ್ನು ಅದರಲ್ಲಿ ನಮೂದಿಸಿದೆ.

ಇತ್ತೀಚೆಗೆ ಬಹಳಷ್ಟು ಯುವಕ/ಯುವತಿಯರು ಫಿಟ್​ನೆಸ್, ಜಿಮ್ ಯೋಗ ಅಂತ ತಲೆಕೆಡಿಸಿಕೊಂಡಿದ್ದರೂ, ಇದ್ಯಾವುದರ ಗಂಧಗಾಳಿ ಕೂಡ ಸೋಕದ ಯುವಜನರ ಸಂಖ್ಯೆಯೂ ಸಾಕಷ್ಟಿದೆ. ಕೆಲವೊಮ್ಮೆ ದೈಹಿಕ ಚಟುವಟಿಕೆಯ ಮಹತ್ವ ಅರಿತರೂ ಆಲಸ್ಯದಿಂದಾಗಿ ಅದನ್ನು ಪಾಲಿಸದಿರುವವರೂ ಇದ್ದಾರೆ. ಇದು ನಿಜಕ್ಕೂ ಕಳವಳಕಾರಿ ಬೆಳವಣಿಗೆ. ನಮ್ಮ ಹಿರಿಯರೆಲ್ಲ ವ್ಯಾಯಾಮ ಮಾಡದೆಯೂ ಆರೋಗ್ಯವಾಗಿರುತ್ತಿದ್ದರು. ಹಾಗಂತ ಜಂಕ್​ಫುಡ್ ತಿನ್ನುವ, ಏರ್ ಕಂಡೀಷನ್ಡ್ ರೂಮ್ಲ್ಲಿ ಕೂರುವ ಈ ಕಾಲದಲ್ಲೂ ಅದನ್ನೇ ಅನುಸರಿಸಿದರೆ ಆದೀತೇ? ನಾವು ಭಾರತೀಯರು ವ್ಯಕ್ತಿ ಆರಾಧಕರು. ಅದರಲ್ಲಿ ಕ್ರೀಡೆ, ಸಿನಿಮಾ ಕ್ಷೇತ್ರದಲ್ಲಿನ ಸಲೆಬ್ರಿಟಿಗಳನ್ನು ಹಿಂಬಾಲಿಸುವುದರಲ್ಲೇ ಸಾರ್ಥಕತೆ ಕಾಣುತ್ತಿರುವವರು. ಬೆಳಗ್ಗೆ ಶಾರೂಕ್ ಖಾನ್ ತಾನು ಏನು ತಿಂದೆ, ಏನು ಕುಡಿದೆ ಎನ್ನುವ ಸಣ್ಣಪುಟ್ಟ ವಿವರಗಳನ್ನು ಟ್ವೀಟ್ ಮಾಡಿದನೆಂದರೆ, ಲಕ್ಷಗಟ್ಟಲೇ ಲೈಕ್​ಗಳು ಆತನ ಸಾಮಾಜಿಕ ಜಾಲತಾಣದ ಖಾತೆಗೆ ಅನಾಯಾಸವಾಗಿ ಬಂದು ಬೀಳುತ್ತವೆ.

ಅದೇ ‘ಮನೆಯ ನೀರೆತ್ತುವ ಮೋಟಾರ್ ಕೆಟ್ಟಿದೆ, ಸರಿ ಮಾಡಿಸಿಕೊಂಡು ಬಾ’ ಎಂದು ಹೇಳುವ ಅಮ್ಮ, ಅಪ್ಪನ ಮೇಲೆ ವಿಪರೀತ ಕೋಪ ಬರುತ್ತದೆ. ರೇಷನ್ ಖಾಲಿ ಆಗಿದೆ, ಮಾರ್ಕೆಟ್ಟಿಗೆ ಹೋಗಿ ಬಾ ಎಂದಾಗಲೂ ನಮ್ಮ ಬಳಿ ಸಮಯವಿರುವುದಿಲ್ಲ. ಅದೇ ಮಾಲ್​ನಲ್ಲಿ ಗೆಳೆಯರೊಂದಿಗೆ ಜಂಕ್​ಫುಡ್ ತಿನ್ನುವುದಕ್ಕೆ ಸಮಯವಿದೆ. ರಾಷ್ಟ್ರ ಜಾಗೃತಿಗಾಗಿ ಸದೃಢವಾದ ಯುವ ಸಮೂಹ ಬೇಕೆಂದ ವಿವೇಕಾನಂದರ ಯುವ ಪೀಳಿಗೆ ಇದೇನಾ? ಆಲಸ್ಯ, ಜಡತ್ವವೇ ಇಂದಿನ ನಮ್ಮೆಲ್ಲರ ಶತ್ರು. ಹಾಗಾದ್ರೆ ಕಾಲ ಕೆಟ್ಟಿದೆಯೇ? ಅಥವಾ ಯುವಜನರ ಆಚಾರ-ವಿಚಾರಗಳು ಕೆಡುತ್ತಿವೆಯೇ? ಅಥವಾ ಬದಲಾದ ಜೀವನಶೈಲಿಯಿಂದಾಗಿ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆಯೆ?

ಖಂಡಿತ ಕಾಲ ಕೆಟ್ಟಿಲ್ಲ. ಕೆಡುತ್ತಿರುವುದು ಯುವಜನತೆಯ ಜೀವನಶೈಲಿ. ಬದಲಾಗುತ್ತಿರುವ ಆದ್ಯತೆಗಳು. ದಿಢೀರ್ ಅಂತ ಸಿಕ್ಸ್​ಪ್ಯಾಕ್, ಆಬ್​ಪ್ಯಾಕ್ ಬೇಕೆಂದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಮಾಡುತ್ತಿರುವ ಅತಿಯಾದ ದೈಹಿಕ ಶ್ರಮವೇ ಬಹಳಷ್ಟು ಜನರಿಗೆ ಮುಳುವಾಗುತ್ತಿದೆ. ಇನ್ನೊಂದೆಡೆ, ಹೆಂಗಳೆಯರು ಝೀರೋ ಸೈಜ್ ಖಯಾಲಿ. ಸ್ಲಿಮ್ ಮತ್ತು ಫಿಟ್ ಆಗಿರಬೇಕೆಂದು ಮಾಡುವ ಅತಿಯಾದ ಡಯೆಟ್. ಅದರಿಂದಾಗಿ ಬೇಡದ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದಾರೆ. 35-45 ವರ್ಷದವರಲ್ಲಿ ರಕ್ತದೊತ್ತಡ, ಹೃದ್ರೋಗ, ಬೊಜ್ಜು, ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ಈ ವಿಷಯದಲ್ಲಿ ಜಗತ್ತಿನ ಟಾಪ್ ಟೆನ್ ದೇಶಗಳಲ್ಲಿ ಭಾರತವೂ ಒಂದು.

ನಮ್ಮ ಬದುಕಿನ ರೂವಾರಿಗಳು ನಾವೇ ಆಗಬೇಕೆ ಹೊರತು, ಇನ್ಯಾರದೋ ರೀತಿಯ ಬದುಕು ನಮ್ಮದಾಗಬಾರದು. ‘ಸತ್ತಂತಿಹರನು ಬಡಿದೆಚ್ಚರಿಸು’ ಎನ್ನುವ ಕುವೆಂಪು ಅವರ ಮಾತು ಬದುಕಿನ ಮಂತ್ರವಾಗಬೇಕು. ಯಾವುದರ ಮೇಲೆಯೂ ಅತಿಯಾದ ಅವಲಂಬನೆ ಬೇಡ. ಅದನ್ನು ಖುಷಿಯಾಗಿ, ಇಡಿಯಾಗಿ ಅನುಭವಿಸಬೇಕೆಂದರೆ ಕನಿಷ್ಠ ಸಣ್ಣಪುಟ್ಟ ಬದಲಾವಣೆಯ ಮುಖಾಂತರ ಸ್ವೀಕರಿಸಬೇಕಿರುವುದು ಅನಿವಾರ್ಯ. ಕ್ರಮಬದ್ಧ ರೀತಿಯಲ್ಲಿ ವ್ಯಾಯಾಮ, ಸಮತೋಲಿತ ಆಹಾರ, ಸಕಾರಾತ್ಮಕ ಚಿಂತನೆಗಳು, ಕುಟುಂಬದವರೊಟ್ಟಿಗೆ ಆತ್ಮೀಯತೆ, ಹಿತಮಿತವಾದ ಮೊಬೈಲ್ ಬಳಕೆ ಹಾಗೂ ಯಥೇಚ್ಛವಾದ ನಗು. ಇವಿಷ್ಟಿದ್ದರೆ ಸಿಕ್ಸ್​ಪ್ಯಾಕ್, ಝೀರೋ ಸೈಜ್ ನಿಮ್ಮ ಮುಂದೆ ಮಕಾಡೆ ಮಲಗುತ್ತವೆ. ಹೀಗಾದಾಗ ಬೊಜ್ಜು ಖಂಡಿತ ನಿಮ್ಮ ಬಳಿ ಸುಳಿಯಲಾರದು. ಯೌವನವನ್ನು ಸದ್ಬಳಕೆ ಮಾಡಿಕೊಂಡವನು ಇಳಿವಯಸ್ಸಿನಲ್ಲಿ ಖಂಡಿತವಾಗಿಯೂ ಸಹನೀಯ ಬದುಕು ಕಾಣುತ್ತಾನೆ.

ಅತಿಯಾದರೆ ಎಲ್ಲವೂ ಸಮಸ್ಯೆಯೇ!

ಅತಿಯಾದ ಜಡತ್ವ/ಅತಿಯಾದ ದೈಹಿಕ ಶ್ರಮ ಎರಡೂ ಒಳ್ಳೆಯದಲ್ಲ, ಬೊಜ್ಜು, ಮಧುಮೇಹ, ಸ್ಟ್ರೋಕ್ ಇವು ಚಟುವಟಿಕೆರಹಿತ ಜೀವನದಿಂದ ಬರುತ್ತವೆ. ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಕರುಳಿನ ಕ್ಯಾನ್ಸರ್, ಹೃದ್ರೋಗ ಇವು ಅತಿಯಾದ ಮಾನಸಿಕ ಒತ್ತಡದಿಂದ ಬರುವಂಥದ್ದಾಗಿವೆ. ಇವುಗಳನ್ನು ನಮ್ಮ ಹತೋಟಿಯಲ್ಲಿಡಲು ಖಂಡಿತ ಸಾಧ್ಯವಿದೆ. ಅದಕ್ಕೆ ಬೇಕಾಗಿರುವುದು ದೈಹಿಕ ಹಾಗೂ ಮಾನಸಿಕ ಸಮತೋಲನ.

Leave a Reply

Your email address will not be published. Required fields are marked *

Back To Top