ಬಲೆಗೆ ಬಿದ್ದ 33 ಕೆಜಿ ತೂಗುವ ಮೀನು

ಹುಕ್ಕೇರಿ: ಸ್ಥಳೀಯ ಮೀನುಗಾರ ಶಿವು ಭೋವಿ ಎಂಬುವರಿಗೆ ಶನಿವಾರ ಘಟಪ್ರಭಾ ನದಿಯಲ್ಲಿ ಅಪರೂಪದ ಖಟ್ಲಾ ತಳಿಯ ಮೀನು ದೊರೆತಿದ್ದು, ಒಂದೇ ಮೀನು ಸುಮಾರು 33 ಕೆಜಿ ತೂಗುತ್ತಿದೆ.

ಇಷ್ಟೊಂದು ದೊಡ್ಡ ಗಾತ್ರದ ಮೀನು ಬಲೆಗೆ ಬಿದ್ದಿರುವುದು ಮೀನುಗಾರರಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಮಾರುಕಟ್ಟೆಯಲ್ಲಿ 9 ಸಾವಿರ ರೂ. ಮೀನು ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಜಿನರಾಳ ಬಳಿ ಘಟಪ್ರಭಾ ನದಿಯಲ್ಲಿ ಎಂದಿನಂತೆ ಮೀನು ಹಿಡಿಯಲು ತೆರಳಿದ್ದ ಸ್ಥಳೀಯ ಮೀನುಗಾರರಿಗೆ ಶನಿವಾರ ಆಶ್ಚರ್ಯ ಕಾದಿತ್ತು. ಪ್ರತಿದಿನ 2ರಿಂದ 3 ಕೆಜಿ ತೂಕದ ಮೀನುಗಳನ್ನು ಹಿಡಿಯುವ ಬಲೆಯಲ್ಲಿ ಶನಿವಾರ ಅದೇ ಬಲೆಯಲ್ಲಿ ದೊಡ್ಡ ಪ್ರಮಾಣದ ಮೀನು ಸಿಕ್ಕಿದೆ.

ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಮೀನುಗಾರ ಶಿವು ಭೋವಿ, ಪ್ರತಿದಿನ ಸಾಮಾನ್ಯ ತಳಿಯ 2ರಿಂದ 3 ಕೆಜಿ ತೂಗುವ ಮೀನುಗಳು ಬಲೆಗೆ ಬೀಳುತ್ತಿದ್ದವು. ಆದರೆ, ಶನಿವಾರ ಖಾಟ್ಲಾ ತಳಿಯ ಮೀನು ದೊರಕಿರುವುದು ಸಂತಸ ತಂದಿದೆ ಎಂದರು. ಅಲ್ಲದೆ ಭಾನುವಾರ ಮತ್ತೋರ್ವ ಮೀನುಗಾರ ವಿನಾಯಕ ಭೋವಿಗೆ 20 ಕೆಜಿ ತೂಗುವ ಅಪರೂಪದ ತಳಿಯ ಮೀನು ಬಲೆಗೆ ಬಿದ್ದಿದೆ.