ನಾಡದೋಣಿ ಮೀನುಗಾರಿಕೆ ಕೊನೆಗೂ ಆರಂಭ

ಮಂಗಳೂರು/ಉಡುಪಿ: ಮಂಗಳೂರು, ಮಲ್ಪೆ ಸಹಿತ ದ.ಕ, ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ 10 ದಿನ ವಿಳಂಬವಾಗಿ ನಿರಾಸೆಯೊಂದಿಗೆ ಆರಂಭವಾಗಿದೆ.
ಮಲ್ಪೆಯಲ್ಲಿ ನಾಲ್ಕೈದು ದಿನಗಳಿಂದ ನಾಡದೋಣಿ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ನಾಡದೋಣಿ, ಟ್ರಾಲ್ ನಾಡದೋಣಿ ಸಹಿತ 150ರಿಂದ 200 ಬೋಟುಗಳು ಕಡಲಿಗಿಳಿದಿವೆ. ಆದರೆ ಮೀನು ಇಳುವರಿ ಇಲ್ಲ, ಇದರಿಂದಾಗಿ ಹೆಚ್ಚಿನ ಮೀನುಗಾರರು ಬರಿಗೈಯಲ್ಲಿ ಮರಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಎರಡು ದೋಣಿಗಳು ಮೀನುಗಾರಿಕೆಗೆ ತೆರಳಿದ್ದು, ಅಲ್ಪ ಪ್ರಮಾಣದಲ್ಲಿ ಬಂಗುಡೆ ಮೀನು ಸಿಕ್ಕಿದೆ. ಬುಧವಾರ ಒಳ್ಳೆಯ ಮುಹೂರ್ತ ಎಂಬ ಹಿನ್ನೆಲೆಯಲ್ಲಿ 10 ನಾಡ ದೋಣಿಗಳು ಮೀನುಗಾರಿಕೆ ಆರಂಭಿಸಿವೆ. ಉತ್ತಮ ಮಳೆಯಾಗದಿದ್ದರೆ ಮೀನು ಸಿಗುವುದು ಕಷ್ಟ ಎಂದು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಜೂನ್ 15ರಿಂದ ಜುಲೈ 15ರ ತನಕ ನಾಡದೋಣಿಯವರಿಗೆ ಬಂಗುಡೆ, ಕೊಡ್ಡೆಯಿ, ಕಲ್ಲುರು, ಮನಂಗ್, ನಂಗ್, ಸ್ವಾಡಿ, ಕುರ್ಚಿ ಮೊದಲಾದ ಮೀನುಗಳು ಹೇರಳವಾಗಿ ಸಿಗುವ ಸಮಯ. ಇತ್ತೀಚಿನ ವರ್ಷಗಳಲ್ಲಿ ಬಲೆ, ಸೀಮೆಎಣ್ಣೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ಖರ್ಚಿನ ದುಡ್ಡೂ ಸಿಗುತ್ತಿಲ್ಲ. ಸರ್ಕಾರದಿಂದ ಸಿಗುವ ಸಬ್ಸಿಡಿ ಸೀಮೆಎಣ್ಣೆ ಹೆಚ್ಚಿನ ಮೀನುಗಾರರಿಗೆ ಸಿಕ್ಕಿಲ್ಲ.

 ಸಾಮೂಹಿಕ ಪ್ರಾರ್ಥನೆ: ಮಲ್ಪೆ ಬಂದರಿನಲ್ಲಿ ಮಂಗಳವಾರ ಸಾವಿರಕ್ಕೂ ಅಧಿಕ ಮಂದಿ ನಾಡದೋಣಿ ಮೀನುಗಾರರೆಲ್ಲ ಒಂದಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ. ಒಳ್ಳೆಯ ಮೀನುಗಾರಿಕೆ ನಡೆದು, ಮೀನುಗಾರರ ಬದುಕು ಹಸನಾಗಲು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಪ್ರಮುಖರಾದ ರಾಮ ಕಾಂಚನ್, ವಿಠಲ ಕುಂದರ್, ಪಂಡರಿನಾಥ್, ಕೃಷ್ಣ ಕೋಟ್ಯಾನ್ ಮೊದಲಾದವರಿದ್ದರು.

ಮೀನು ದರ ದುಪ್ಪಟ್ಟು: ಪ್ರಸ್ತುತ ಮಂಗಳೂರಿಗೆ ಚೆನ್ನೈ, ಆಂಧ್ರಪ್ರದೇಶ, ಗುಜರಾತ್, ಗೋವಾದಿಂದ ಮೀನುಗಳು ಬರುತ್ತಿವೆ. ಒಂದು ಬೂತಾಯಿಗೆ 15 ರೂ, ಬಂಗುಡೆ 40 ರೂ, ಅಂಜಲ್ 1500 ರೂ. ದರವಿದೆ. ನಾಡದೋಣಿಯ ಮೀನುಗಳು ಮಾರುಕಟ್ಟೆಗೆ ಬಾರದೆ ಮೀನಿನ ದರ ದುಪ್ಪಟ್ಟಾಗಿದೆ.

ಮಳೆಯೇ ಪ್ರಧಾನ: ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮಳೆಗೆ ಹೆಚ್ಚು ಪ್ರಾಧಾನ್ಯತೆ. ಜೋರಾದ ಮಳೆಗೆ ನೆರೆ ಬಂದು ನದಿನೀರು ಸಮುದ್ರ ಸೇರಬೇಕು. ಸಿಹಿನೀರು ಸಮುದ್ರ ಸೇರಿದಾಗ ತಮಗೆ ಆಹಾರ ಸಿಗಬಹುದು ಎಂದು ಮೀನುಗಳು ಸಮುದ್ರದ ಬದಿಗೆ ಬರುತ್ತವೆ. ಇದರಿಂದ ನಾಡದೋಣಿ ಮೀನುಗಾರರಿಗೆ ಅನುಕೂಲ. ನೆರೆ ನೀರು ಸಮುದ್ರ ಸೇರುವುದು ಹಾಗೂ ಭಾರಿ ಗಾಳಿ ಮಳೆಗೆ ಸಮುದ್ರದ ನೀರು ಕದಡುವುದರಿಂದಲೂ ಮೀನುಗಳು ಸಮುದ್ರದ ಬದಿಗೆ ಬರುತ್ತವೆ.

ಇನ್ನೊಂದೇ ತಿಂಗಳು: ಮಳೆಯ ಅಭಾವ, ಲಭಿಸದ ಸೀಮೆಎಣ್ಣೆ, ಸಮುದ್ರ ಪ್ರಕ್ಷುಬ್ದತೆ ಮೊದಲಾದ ಕಾರಣದಿಂದ ನಾಡದೋಣಿ ಮೀನುಗಾರಿಕೆ ವಿಳಂಬವಾಗಿದೆ. ಬಲೆ ತಯಾರಿ, ದೋಣಿ ರಿಪೇರಿ ಕೆಲಸಗಳು ಪೂರ್ಣಗೊಳಿಸಿ ಮೀನುಗಾರರು ಮೀನುಗಾರಿಕೆಗೆ ತೆರಳಲು ಸಜ್ಜಾಗಿ ಎರಡು ವಾರವೇ ಕಳೆದಿದೆ. ಆದರೆ ಸಮುದ್ರ ಪ್ರಕ್ಷುಬ್ದಗೊಂಡ ಪರಿಣಾಮ ಹಾಗೂ ಮಳೆಯಾಗದ ಕಾರಣ ಹೆಚ್ಚಿನ ಮೀನುಗಾರರು ಸಮುದ್ರಕ್ಕೆ ಇಳಿಯುವುದು ಸಾಧ್ಯವಾಗಿಲ್ಲ. ಸಮುದ್ರದಲ್ಲಿ ತೂಫಾನ್ ಇಲ್ಲದೇ ಮೀನು ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರರು. ಇನ್ನಾದರೂ ಉತ್ತಮ ಮಳೆಯಾದರೆ ಒಂದು ತಿಂಗಳ ಅವಧಿಯಾದರೂ ನಾಡದೋಣಿ ಮೀನುಗಾರಿಕೆಗೆ ಸಿಗಬಹುದು ಎಂಬುದು ಮೀನುಗಾರರ ನಿರೀಕ್ಷೆ.

ಸಿಹಿನೀರು ಸಮುದ್ರಕ್ಕೆ ಸೇರದೆ ಮೀನುಗಳು ಸಮುದ್ರ ತೀರಕ್ಕೆ ಬರುವುದಿಲ್ಲ. ಈ ಬಾರಿ ಪ್ರಕೃತಿಯೂ ನಮ್ಮ ಮೇಲೆ ಮುನಿದಿದೆ. ಬುಧವಾರ 10 ನಾಡದೋಣಿಗಳು ಸಮುದ್ರಕ್ಕಿಳಿದಿವೆ. ಹಂತ ಹಂತವಾಗಿ ಎಲ್ಲ ನಾಡದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಲಿವೆ.
ವಾಸುದೇವ ಕರ್ಕೇರ, ಅಧ್ಯಕ್ಷ, ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಂಘ, ಮಂಗಳೂರು

ಉತ್ತಮ ಮಳೆಯಾಗದಿದ್ದರೆ ನಾಡದೋಣಿ ಮೀನುಗಾರಿಕೆಗೆ ಲಾಭವಿಲ್ಲ. ಇನ್ನು ನಿರಂತರ ಮಳೆಯಾದರೂ ಅಣೆಕಟ್ಟುಗಳು ತುಂಬಿದ ಬಳಿಕ ಸಮುದ್ರಕ್ಕೆ ನೀರು ಸೇರುವಾಗ ಮತ್ತೆ 15 ದಿನ ಕಳೆಯುತ್ತದೆ. ಅಷ್ಟರಲ್ಲಿ ಆಟಿ ತಿಂಗಳು ಬರುತ್ತದೆ. ಈ ಸಂದರ್ಭ ಸಾಮಾನ್ಯವಾಗಿ ಎರಡು ಮೂರು ತೂಫಾನ್ ಬರಲಿದ್ದು, ಆಗ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಅಷ್ಟರಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುತ್ತದೆ.
– ಸುಭಾಶ್ಚಂದ್ರ ಕಾಂಚನ್, ಕಾರ್ಯಾಧ್ಯಕ್ಷ, ಗಿಲ್‌ನೆಟ್ ಮೀನುಗಾರರ ಸಂಘ, ಮಂಗಳೂರು

ನಾಡದೋಣಿ ಮೀನುಗಾರಿಕೆ ಆರಂಭವಾಗಿದ್ದು, ಮಲ್ಪೆ ನಾಡದೋಣಿ ಮೀನುಗಾರರಲ್ಲಿ ಕೆಲವರು ಮೀನುಗಾರಿಕೆ ತೆರಳಿದ್ದಾರೆ. ಆದರೆ ನಿರೀಕ್ಷೆಗೆ ತಕ್ಕ ಮೀನುಗಾರಿಕೆ ಆಗಿಲ್ಲ, ತೂಫಾನ್ ಇದ್ದಲ್ಲಿ ಮಾತ್ರ ಉತ್ತಮ ಮೀನುಗಾರಿಕೆ ನಡೆಯಲಿದೆ. ಜುಲೈ 5, 6ರ ಬಳಿಕ ನಿರೀಕ್ಷೆ ಇಟ್ಟುಕೊಂಡಿದ್ದೇವೆ.
ಕೃಷ್ಣ ಎಸ್. ಸುವರ್ಣ, ನಾಡದೋಣಿ ಮೀನುಗಾರ, ಪಡುತೋನ್ಸೆ ಬೇಂಗ್ರೆ

Leave a Reply

Your email address will not be published. Required fields are marked *